ವಿಶ್ವದರ್ಜೆಯ ಸಿಎಂಆರ್ ವಿಶ್ವವಿದ್ಯಾಲಯ ಕ್ರಿಕೆಟ್ ಸ್ಟೇಡಿಯಂ ಪೆವಿಲಿಯನ್ ಲೋಕಾರ್ಪಣೆ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಒಡಂಬಡಿಕೆ

New-Project-3-4
Published on

ಬೆಂಗಳೂರು: ನಗರದ ಬಾಗಲೂರಿನಲ್ಲಿರುವ ಸಿಎಂಆರ್ ವಿಶ್ವವಿದ್ಯಾಲಯ ವಿಶಾಲವಾದ ಮೈದಾನದಲ್ಲಿ ನಿರ್ಮಿಸಿರುವ ಹುಲ್ಲುಹಾಸಿನ ವಿಶ್ವದರ್ಜೆಯ ಸೌಲಭ್ಯವುಳ್ಳ ಕ್ರಿಕೆಟ್ ಸ್ಟೇಡಿಯಂ ಪೆವಿಲಿಯನ್ ಇಂದು ಲೋಕಾರ್ಪಣೆಯಾಯಿತು. ಮಾಜಿ ಭಾರತೀಯ ಕ್ರಿಕೆಟ್ ಆಟಗಾರರು ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಘುರಾಮ್ ಭಟ್ ಅವರು ಸ್ಟೇಡಿಯಂ ಪೆವಿಲಿಯನ್ ಉದ್ಘಾಟಿಸಿದರು. ಮತ್ತು ಇಂದು ಶುಭಾರಂಭಗೊಂಡ ಸಿಎಂಆರ್ ವಿವಿ ಪುರುಷರ ರಾಜ್ಯಮಟ್ಟದ ಅಂತರ ವಿಶ್ವವಿದ್ಯಾಲಯಗಳ ಟಿ20 ಕ್ರಿಕೆಟ್ ಟೂರ್ನಮೆಂಟ್ ಗೆ ವಿದ್ಯುಕ್ತ ಚಾಲನೆ ನೀಡಿದರು.

ನಂತರ ಮಾತನಾಡಿದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ರಘುರಾಮ್ ಭಟ್ ಅವರು ಸಿಎಂಆರ್ ವಿಶ್ವವಿದ್ಯಾಲಯ ನಿರ್ಮಾಣ ಮಾಡಿರುವ ಕ್ರಿಕೆಟ್ ಸ್ಟೇಡಿಯಂ ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದ್ದು, ಎಲ್ಲಾ ದರ್ಜೆಯ ಕ್ರಿಕಟ್ ಪಂದ್ಯಗಳನ್ನು ಆಯೋಜಿಸಲು ಅನುಕೂಲಕರವಾಗಿದೆ.

ಮೊದಲ ಹಂತದಲ್ಲಿ ರಣಜಿ ಸೇರಿದಂತೆ ರಾಜ್ಯಮಟ್ಟದ ಎಲ್ಲಾ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಮತ್ತು ಸ್ಟೇಡಿಯಂ ನಿರ್ವಹಣೆ ಮಾಡುವ ದೃಷ್ಟಿಯಿಂದ ಸಿಎಂಆರ್ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡುವೆ ಒಡಂಬಡಿಕೆಯಾಗಿದೆ ಎಂದರು. ಬೆಂಗಳೂರಿನಂತಹ ನಗರದಲ್ಲಿ ಕ್ರಿಕೆಟ್ ಬೃಹದಾಕಾರವಾಗಿ ಬೆಳೆಯುತ್ತಿದೆ. ಆದರೆ ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂ ಗಳಿಲ್ಲ, ಹಾಗಾಗಿ ಸಿಎಂಆರ್ ವಿವಿ ನಿರ್ಮಾಣ ಮಾಡಿರುವ ಸ್ಟೇಡಿಯಂ ಎಲ್ಲಾ ದರ್ಜೆಯ ಕ್ರಿಕೆಟ್ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸದಾ ಸಿಎಂಆರ್ ವಿಶ್ವವಿದ್ಯಾಲಯ ದ ಜೊತೆ ಸಹಕರಿಸುವ ಮೂಲಕ ಸಿಎಂಅರ್ ಯು ಕ್ರಿಕೆಟ್ ಸ್ಟೇಡಿಯಂ ಅನ್ನು ಮುಂದಿನ ಹಂತದಲ್ಲಿ ಬಿಸಿಸಿಐ ಸಹಯೋಗದಲ್ಲಿ ಅಂತರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುತ್ತೇವೆ ಎಂದು ಹೇಳಿದರು.

ಡಾ.ಕೆ.ಸಿ.ರಾಮಮೂರ್ತಿ, ಐಪಿಎಸ್ (ನಿವೃತ್ತಿ), ಮಾಜಿ ರಾಜ್ಯಸಭಾ ಸದಸ್ಯರು, ಸಿಎಂಆರ್ ವಿಶ್ವವಿದ್ಯಾಲಯ ಹಾಗೂ ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಮಾತನಾಡಿ ಇಂದು ಕ್ರೀಡೆ ವಿದ್ಯಾರ್ಥಿ ಬದುಕಿನ ಅವಿಭಾಜ್ಯ ಅಂಗವಾಗಿದೆ. ಅದರಲ್ಲೂ ಕ್ರಿಕೆಟ್ ಇಂದು ವಿಶ್ವ ಮನ್ನಣೆಗಳಿಸಿದ ಜನಪ್ರಿಯ ಕ್ರೀಡೆಯಾಗಿದ್ದು, ಕ್ರಿಕೆಟ್ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಸಜ್ಜಿತ ವಿಶ್ವದರ್ಜೆಯ ಸೌಲಭ್ಯವುಳ್ಳ ಸ್ಟೇಡಿಯಂ ಅನ್ನು ಸಿಎಂಆರ್ ವಿವಿ ಆವರಣದಲ್ಲಿ ನಿರ್ಮಾಣ ಮಾಡಿದ್ದೇವೆ. ಈ ಸ್ಟೇಡಿಯಂ ಎಲ್ಲಾ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವ ಮೂಲಕ ಕ್ರೀಡೆಯನ್ನು ಬೆಳಸುವ ಸದುದ್ದೇಶ ನಮ್ಮದು ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಯ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.

ಇಂದಿನಿಂದ 6 ದಿನಗಳ ವರೆಗೆ ನಡೆಯುವ ಸಿಎಂಆರ್ ವಿವಿಯ ಪುರುಷರ ಅಂತರ ಟಿ20 ಕ್ರಿಕೆಟ್ ಟೂರ್ನಮೆಂಟ್ ಗೆ 16 ವಿಶ್ವವಿದ್ಯಾಲಯಗಳು ಭಾಗವಹಿಸುತ್ತಿದ್ದು, ಗೆದ್ದವರಿಗೆ 25,000 ನಗದು ಜೊತೆ ಟ್ರೋಪಿ ಪ್ರಥಮ ಬಹುಮಾನವಾಗಿ ನೀಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಗಳಾದ ಶಂಕರ್, ಸಿಎಂಆರ್ ಜ್ಞಾನಧಾರ ಟ್ರಸ್ಟ್ ಕಾರ್ಯದರ್ಶಿ ಶ್ರೀ ಕೆ.ಸಿ ಜಗನ್ನಾಥ ರೆಡ್ಡಿ, ಪ್ರೋಚಾನ್ಸಲರ್ ಶ್ರೀ ಜಯದೀಪ್ ರೆಡ್ಡಿ, ಕುಲಪತಿ ಡಾ.ಎಚ್.ಬಿ ರಾಘವೇಂದ್ರ, ರಿಜಿಸ್ಟ್ರಾರ್ ಡಾ. ಪ್ರವೀಣ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net