

ಹುಯೆವ್ (ಸ್ಪೇನ್): ಮಾಜಿ ವಿಶ್ವ ನಂ.1 ಕಿಡಂಬಿ ಶ್ರೀಕಾಂತ್ ಹಾಗೂ ಉದಯೋನ್ಮುಖ ಆಟಗಾರ ಲಕ್ಷ್ಯ ಸೇನ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿಕೊಂಡಿದ್ದಾರೆ. ಇದರೊಂದಿಗೆ ಪ್ರತಿಷ್ಠಿತ ಟೂರ್ನಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೇ ಆವೃತ್ತಿಯಲ್ಲಿ ಭಾರತದ ಇಬ್ಬರು ಪುರುಷ ಷಟ್ಲರ್‌ಗಳು ಪದಕ ಜಯಿಸಿದಂತಾಗಿದೆ. ಅಲ್ಲದೆ, ಇವರಿಬ್ಬರು ಉಪಾಂತ್ಯದಲ್ಲಿ ಪರಸ್ಪರ ಮುಖಾಮುಖಿ ಆಗಲಿರುವುದರಿಂದ ಭಾರತಕ್ಕೆ ಒಂದು ಕಂಚಿನೊಂದಿಗೆ ಕನಿಷ್ಠ ಒಂದು ಬೆಳ್ಳಿ ಅಥವಾ ಸ್ವರ್ಣ ಪದಕ ಖಾತ್ರಿ ಎನಿಸಿದೆ. ಮತ್ತೋರ್ವ ಆಟಗಾರ ಎಚ್ ಎಸ್ ಪ್ರಣಯ್ ಎಂಟರಘಟ್ಟದ ಹಣಾಹಣಿಯಲ್ಲಿ ನಿರಾಸೆ ಅನುಭವಿಸಿದರು.
ಶುಕ್ರವಾರ ನಡೆದ ಎಂಟರ ಘಟ್ಟದ ಹಣಾಹಣಿಯಲ್ಲಿ 12ನೇ ಶ್ರೇಯಾಂಕಿತ ಆಟಗಾರ ಕೆ.ಶ್ರೀಕಾಂತ್ 21-8, 21-7 ನೇರ ಗೇಮ್‌ಗಳಿಂದ ನೆದರ್ಲೆಂಡ್ಸ್‌ನ ಮಾರ್ಕ್ ಕಾಲಜ್ವೊವ್ ಎದುರು ಕೇವಲ 26 ನಿಮಿಷಗಳಲ್ಲಿ ಗೆಲುವು ದಾಖಲಿಸಿದರು. ಮೊದಲ ಗೇಮ್‌ನ ವಿಶ್ರಾಂತಿ ಅವಧಿಗೆ 11-5 ರಿಂದ ಮುನ್ನಡೆ ಸಾಧಿಸಿದ ಶ್ರೀಕಾಂತ್, ಬಳಿಕ 14-8ಕ್ಕೆ ಹಿಗ್ಗಿಸಿಕೊಂಡಿತು. ಬಳಿಕ ಸತತ 7 ಪಾಯಿಂಟ್ಸ್ ಸಂಗ್ರಹಿಸಿ ಮೊದಲ ಗೇಮ್ ಒಲಿಸಿಕೊಂಡರು. ಎರಡನೇ ಗೇಮ್‌ನಲ್ಲಿ ಎದುರಾಳಿ ಆರಂಭಿಕ ಹಂತದಲ್ಲಿ ಕೊಂಚ ಪ್ರತಿರೋಧ ತೋರಿದರೂ ಸತತ 7 ಪಾಯಿಂಟ್ಸ್ ಸಂಗ್ರಹಿಸಿದ ಶ್ರೀಕಾಂತ್, 17-7 ರಿಂದ ಮುನ್ನಡೆ ಸಾಧಿಸಿತು. ನಂತರ ಸತತ 4 ಅಂಕಗಳನ್ನು ಪಡೆದು ಸುಲಭವಾಗಿ ಗೆಲುವಿನ ದಡ ಸೇರಿದರು.
ಪುರುಷರ ಸಿಂಗಲ್ಸ್ ವಿಭಾಗದ ತೀವ್ರ ರೋಚಕತೆಯ ಮತ್ತೊಂದು ಹಣಾಹಣಿಯಲ್ಲಿ ಭಾರತದ ಶ್ರೇಯಾಂಕ ರಹಿತ ಆಟಗಾರ ಲಕ್ಷ್ಯ ಸೇನ್ 21-15, 15-21, 22-20 ಗೇಮ್‌ಗಳಿಂದ ಟೋಕಿಯೊ ಒಲಿಂಪಿಕ್ಸ್ ಸೆಮಿಫೈನಲಿಸ್ಟ್ ಚೀನಾದ ಜುನ್ ಪೆಂಗ್ ಜಾವೋ ಎದುರು ಒಂದು ಗಂಟೆ 7 ನಿಮಿಷಗಳ ಹಣಾಹಣಿಯಲ್ಲಿ ಗೆಲುವು ಸಾಧಿಸಿದರು. ಮೊದಲ ಗೇಮ್‌ನಲ್ಲಿ ಲಕ್ಷ್ಯ ಸೇನ್ ಪ್ರಾಬಲ್ಯ ಸಾಧಿಸಿದರೂ ಎರಡನೇ ಗೇಮ್‌ನಲ್ಲಿ ಚೀನಾ ಆಟಗಾರನಿಂದ ತಿರುಗೇಟು ಅನುಭವಿಸಿದರು. 3ನೇ ಹಾಗೂ ನಿರ್ಣಾಯಕ ಗೇಮ್ ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಉಭಯ ಆಟಗಾರರು ಪರಸ್ಪರ ಹೋರಾಟದ ಮೂಲಕ ಗಮನಸೆಳೆದರು. ಕಡೇ ಹಂತದಲ್ಲಿ ಲಕ್ಷ್ಯ ಸೇನ್ 19-20 ರಿಂದ ಹಿನ್ನಡೆಯಲ್ಲಿದ್ದಾಗ ಮ್ಯಾಚ್ ಪಾಯಿಂಟ್ಸ್ ರಕ್ಷಿಸಿಕೊಂಡು ಸತತ ಮೂರು ಪಾಯಿಂಟ್ಸ್ ಸಂಗ್ರಹಿಸಿ ಗೆಲುವಿನ ನಗೆ ಬೀರಿದರು. ಈ ನಡುವೆ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಭಾರತದ ಕೈಜಾರಿದೆ. ಹಾಲಿ ಚಾಂಪಿಯನ್ ಪಿವಿ ಸಿಂಧು ಎಂಟರ ಘಟ್ಟದಲ್ಲಿ ಎಡವಿ ಪ್ರಶಸ್ತಿ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ.