ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್ ಮರುನಿಗದಿ: ಡಿಸೆಂಬರ್​ವರೆಗಿಲ್ಲ ಒಲಿಂಪಿಕ್ಸ್ ಅರ್ಹತೆ

Athletics
Published on

ನ್ಯೂಯಾರ್ಕ್: ಟೋಕಿಯೊ ಒಲಿಂಪಿಕ್ಸ್ ಮುಂದೂಡಿಕೆಯಿಂದಾಗಿ ದಿನಾಂಕ ಸಂಘರ್ಷ ಎದುರಿಸುತ್ತಿದ್ದ 2021ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್ ಮರುನಿಗದಿಯಾಗಿದೆ. 2021ರ ಆಗಸ್ಟ್​ನಲ್ಲಿ ನಡೆಯಬೇಕಾಗಿದ್ದ ಕ್ರೀಡಾಕೂಟವನ್ನು ಈಗ 2022ರ ಜುಲೈನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಅಮೆರಿಕದ ಒರೆಗೋನ್​ನಲ್ಲೇ ಕ್ರೀಡಾಕೂಟ ನಡೆಯಲಿದೆ ಎಂದು ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ತಿಳಿಸಿದೆ.

ಒರೆಗೋನ್​ನಲ್ಲಿ 2022ರ ಜುಲೈ 15ರಿಂದ 24ರವರೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್ ನಡೆಯಲಿದೆ ಎಂದು ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಬುಧವಾರ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ.

2022ರ ಜುಲೈ-ಆಗಸ್ಟ್​ನಲ್ಲಿ ಯುರೋಪ್​ನಲ್ಲಿ ಎರಡು ಪ್ರಮುಖ ಕ್ರೀಡಾಕೂಟಗಳು ಆಯೋಜನೆಗೊಂಡಿವೆ. ಅವುಗಳೆಂದರೆ ಬರ್ವಿುಂಗ್​ಹ್ಯಾಂ ಕಾಮನ್ವೆಲ್ತ್ ಗೇಮ್್ಸ ಮತ್ತು ಮ್ಯೂನಿಚ್​ನ ಯುರೋಪಿಯನ್ ಚಾಂಪಿಯನ್​ಷಿಪ್. ಹೀಗಾಗಿ ಇವೆರಡು ಕ್ರೀಡಾಕೂಟಗಳ ಸಂಘಟಕರ ಜತೆಗೆ ರ್ಚಚಿಸಿದ ಬಳಿಕವೇ ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ, ವಿಶ್ವ ಚಾಂಪಿಯನ್​ಷಿಪ್​ನ ಹೊಸ ದಿನಾಂಕವನ್ನು ನಿಗದಿಪಡಿಸಿದೆ. ಈ ಮೂಲಕ ಅಥ್ಲೀಟ್​ಗಳಿಗೆ 2022ರ ಈ ಮೂರೂ ಪ್ರಮುಖ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

ಬೇಸಗೆ ಋತುವಿನಲ್ಲಿ ಬರುವ ಈ ಮೂರೂ ಕ್ರೀಡಾಕೂಟಗಳು ಅಥ್ಲೀಟ್​ಗಳಿಗೆ ಬಹುದೊಡ್ಡ ಅವಕಾಶವಾಗಿರುತ್ತದೆ ಎಂದು ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋಯಿ ಹೇಳಿದ್ದಾರೆ.

ಡಿಸೆಂಬರ್​ವರೆಗಿಲ್ಲ ಒಲಿಂಪಿಕ್ಸ್ ಅರ್ಹತೆ

ಲಂಡನ್: ಕರೊನಾ ಸೋಂಕಿನ ಕಾರಣದಿಂದಾಗಿ ವಿಶ್ವ ಅಥ್ಲೆಟಿಕ್ಸ್ ಸಂಸ್ಥೆ ಮುಂದಿನ ಡಿಸೆಂಬರ್​ವರೆಗೆ ಒಲಿಂಪಿಕ್ಸ್ ಅರ್ಹತೆಯ ಅವಧಿಯನ್ನು ಅಮಾನತಿನಲ್ಲಿಟ್ಟಿದೆ. ಇದರಿಂದ ಏಪ್ರಿಲ್ 6ರಿಂದ ನವೆಂಬರ್ 30ರವರೆಗೆ ಯಾವುದೇ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಗಳು ನಡೆಯುವುದಿಲ್ಲ. ಈ ಅವಧಿಯಲ್ಲಿ ಯಾವುದಾದರೂ ಸ್ಪರ್ಧೆಗಳು ನಡೆದು ಅದರಲ್ಲಿ ಅಥ್ಲೀಟ್​ಗಳು ಒಲಿಂಪಿಕ್ಸ್ ಅರ್ಹತೆಯ ಮಾನದಂಡವನ್ನು ಮುಟ್ಟಿದರೂ ಅದನ್ನು ಪರಿಗಣಿಸಲಾಗುವುದಿಲ್ಲ. ಅಲ್ಲದೆ ಈ ಅವಧಿಯ ಸ್ಪರ್ಧೆಯ ಫಲಿತಾಂಶವನ್ನು ವಿಶ್ವ ರ್ಯಾಂಕಿಂಗ್​ಗೂ ಪರಿಗಣಿಸಲಾಗುವುದಿಲ್ಲ. ಅಥ್ಲೆಟಿಕ್ಸ್ ಆಯೋಗ ಮತ್ತು ತನ್ನ ಅಂಗಸಂಸ್ಥೆಗಳ ಜತೆಗೆ ರ್ಚಚಿಸಿ ವಿಶ್ವ ಅಥ್ಲೆಟಿಕ್ಸ್ (ಡಬ್ಲು್ಯಎ) ಮಂಗಳವಾರ ಈ ತೀರ್ಮಾನ ಕೈಗೊಂಡಿದೆ. ಜತೆಗೆ ಟೋಕಿಯೊ ಒಲಿಂಪಿಕ್ಸ್​ಗೆ ಈಗಾಗಲೆ ಅರ್ಹತೆ ಸಂಪಾದಿಸಿರುವ 6,500ಕ್ಕೂ ಅಧಿಕ ಕ್ರೀಡಾಪಟುಗಳು 2021ರ ಕೂಟದಲ್ಲೂ ಸ್ಪರ್ಧಿಸುವ ಅವಕಾಶ ಪಡೆಯಲಿದ್ದಾರೆ ಎಂದು ಐಒಸಿ ನೂತನ ಅರ್ಹತಾ ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net