ಮಹಿಳೆಯರ ಏಕದಿನ ವಿಶ್ವಕಪ್​: ಇಂದು ದಕ್ಷಿಣ ಆಫ್ರಿಕಾ ಎದುರಾಳಿ; ಭಾರತಕ್ಕೆ ಹ್ಯಾಟ್ರಿಕ್​ ಗೆಲುವಿನ ತವಕ

web w wc
Published on

ವಿಶಾಖಪಟ್ಟಣ: ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿರುವ ಆತಿಥೇಯ ಭಾರತ ತಂಡ ಐಸಿಸಿ ಮಹಿಳಯರ ಏಕದಿನ ವಿಶ್ವಕಪ್​ ಟೂರ್ನಿಯ ತನ್ನ ಮೂರನೇ ಲೀಗ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸವಾಲು ಎದುರಿಸಲಿದೆ. ಗುರುವಾರ ವೈಎಸ್​ಆರ್​ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿನ ಲಯ ಕಾಯ್ದುಕೊಳ್ಳುವ ತವಕದಲ್ಲಿವೆ.

ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ, ಹಿಂದಿನ ಎರಡು ಪಂದ್ಯಗಳಲ್ಲಿ ನೀಡಿದ ಪ್ರದರ್ಶನಕ್ಕಿಂತ ಸುಧಾರಿತ ನಿರ್ವಹಣೆ ತೋರಬೇಕಿದೆ. ಫೀಲ್ಡಿಂಗ್​ ಹಾಗೂ ಅಗ್ರ ಕ್ರಮಾಂಕ ಬ್ಯಾಟರ್​ಗಳಿಂದ ಉತ್ತಮ ಪ್ರದರ್ಶನ ಮೂಡಿಬರಬೇಕಿದೆ. ಉಪನಾಯಕಿ ಸ್ಮೃತಿ ಮಂದನಾ, ಹರ್ಮಾನ್​ಪ್ರೀತ್​ ಕೌರ್​ ಹಾಗೂ ಜೆಮೀಮಾ ರೋಡ್ರಿಗಸ್​ ರನ್​ಗಳಿಸದ ಹೊರತಾಗಿಯೂ ಭಾರತ ತಂಡ ತನ್ನ ಆರಂಭಿಕ ಪಂದ್ಯಗಳಲ್ಲಿ ಮೇಲುಗೈ ಸಾಧಿಸಿರುವುದು ಪ್ಲಸ್​ ಪಾಯಿಂಟ್​. ದ. ಆಫ್ರಿಕಾ ಜತೆಗೆ ಹಾಲಿ ಚಾಂಪಿಯನ್​ ಆಸ್ಟ್ರೆಲಿಯಾ ವಿರುದ್ಧವೂ ತನ್ನ ಮುಂದಿನ ಪಂದ್ಯವನ್ನು ಇದೇ ಮೈದಾನದಲ್ಲಿ ಭಾರತ ಆಡಲಿದೆ. ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದರೆ ಸೆಮಿಫೈನಲ್​ ಹಾದಿ ಭಾರತಕ್ಕೆ ಸುಲಭವಾಗಲಿದೆ.

ವಿಶ್ವಕಪ್​ಗೂ ಮುನ್ನ 2025ರಲ್ಲಿ 4 ಶತಕ ಬಾರಿಸಿದ್ದ ಸ್ಮೃತಿ, ಹಾಲಿ ಟೂರ್ನಿಯಲ್ಲಿ ವೈಫಲ್ಯ ಕಂಡಿದ್ದಾರೆ. ಪ್ರತಿಕಾ ರಾವಲ್​ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಫಲರಾಗಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಹರ್ಲೀನ್​ ಡಿಯೋಲ್​, ಅಮನ್​ಜೋತ್​ ಕೌರ್​, ರಿಚಾ ಘೋಷ್​ ಹಾಗೂ ದೀಪ್ತಿ ಶರ್ಮ ನೆರವಾಗಿದ್ದರು. ಅನಾರೋಗ್ಯದಿಂದ ಹಿಂದಿನ ಪಂದ್ಯ ತಪ್ಪಿಸಿಕೊಂಡಿದ್ದ ಆಲ್ರೌಂಡರ್​ ಅಮನ್​ಜೋತ್​ ಫಿಟ್​ ಆಗುವ ನಿರೀಕ್ಷೆ ಇದೆ. ದೀಪ್ತಿ ಶರ್ಮ ಇದುವರೆಗೆ ಆರು ವಿಕೆಟ್​ ಪಡೆದು ಟೂರ್ನಿಯ ಗರಿಷ್ಠ ವಿಕೆಟ್​ ಟೇಕರ್​ ಎನಿಸಿದ್ದಾರೆ.

ಗುವಾಹಟಿ ಹಾಗೂ ಕೊಲಂಬೊದ ಪಿಚ್​ ಬೌಲರ್​ಗಳಿಗೆ ನೆರವು ನೀಡಿತ್ತು. ವಿಶಾಖಪಟ್ಟಣದ ಪಿಚ್​ ಕೊಂಚ ಭಿನ್ನ ಎನಿಸಿದ್ದು, ದ. ಆಫ್ರಿಕಾ ಎದುರು ಬೌಲರ್​ಗಳಿಗೆ ಕಠಿಣ ಸವಾಲು ಎದುರಾಗಬಹುದು. ಅಮನ್​ಜೋತ್​ ಫಿಟ್​ ಆದರೆ ಶ್ರೀಚರಣಿ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಹಾಲಿ ವರ್ಷ ಐದು ಶತಕ ಬಾರಿಸಿರುವ ತಜ್ಮಿನ್​ ಬ್ರಿಟ್ಸ್​ ಭರ್ಜರಿ ಫಾರ್ಮ್​ನಲ್ಲಿದ್ದು, ಲೌರಾ ವೊಲ್ವಾರ್ಡ್​, ಮಾರಿಜಾನ್ನೆ ಕಾಪ್​ ಬಲವಿದೆ. ಇಂಗ್ಲೆಂಡ್​ ಎದುರು 10 ವಿಕೆಟ್​ಗಳ ಸೋಲಿನ ನಂತರ ನ್ಯೂಜಿಲೆಂಡ್​ ವಿರುದ್ಧದ 6 ವಿಕೆಟ್​ ಗೆಲುವಿನೊಂದಿಗೆ ಆಫ್ರಿಕಾ ಕಂಬ್ಯಾಕ್​ ಮಾಡಿದೆ.

ಮುಖಾಮುಖಿ: 33

ಭಾರತ: 20

ದ.ಆಫ್ರಿಕಾ: 12

ರದ್ದು: 1

ವಿಶ್ವಕಪ್​ನಲ್ಲಿ: 5

ಭಾರತ: 3

ದ.ಆಫ್ರಿಕಾ: 2

ಆರಂಭ: ಮಧ್ಯಾಹ್ನ 3

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net