ಸತತ 4ನೇ ಜಯದ ನಿರೀಕ್ಷೆ: ಇಂದು ಲಂಕಾ ಸವಾಲು, ಅಜೇಯ ಓಟದತ್ತ ಭಾರತ ಗಮನ

SP 2
Published on

ಮೆಲ್ಬೋರ್ನ್: ಬಲಿಷ್ಠ ತಂಡಗಳನ್ನು ಮಣಿಸಿ ಸೆಮಿಫೈನಲ್ ಸ್ಥಾನವನ್ನು ಈಗಾಗಲೆ ಖಚಿತಪಡಿಸಿಕೊಂಡಿರುವ ಭಾರತ ತಂಡ ಮಹಿಳೆಯರ ಟಿ20 ವಿಶ್ವಕಪ್​ನಲ್ಲಿ ಅಜೇಯ ಓಟ ಮುಂದುವರಿಸುವತ್ತ ಗಮನಹರಿಸಿದೆ. ಶನಿವಾರ ನಡೆಯಲಿರುವ ಎ ಗುಂಪಿನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿರುವ ಹರ್ವನ್​ಪ್ರೀತ್ ಕೌರ್ ಬಳಗ ಸತತ 4ನೇ ಗೆಲುವಿನ ಹಂಬಲದಲ್ಲಿದೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಮಾಜಿ ರನ್ನರ್​ಅಪ್ ನ್ಯೂಜಿಲೆಂಡ್ ತಂಡಗಳನ್ನು ಹಿಮ್ಮೆಟ್ಟಿಸಿ ಬೀಗಿದ್ದರೂ ಭಾರತ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಇನ್ನಷ್ಟು ಸುಧಾರಣೆ ಕಾಣಬೇಕಾದ ಅಗತ್ಯವಿದೆ. ಯುವ ಬ್ಯಾಟುಗಾರ್ತಿ ಶೆಫಾಲಿ ವರ್ಮಳನ್ನೇ ಹೆಚ್ಚಾಗಿ ಅವಲಂಬಿಸಿರುವ ಭಾರತ ತಂಡ, ಅನುಭವಿ ಆಟಗಾರ್ತಿಯರಾದ ಸ್ಮೃತಿ ಮಂದನಾ, ಹರ್ವನ್​ಪ್ರೀತ್ ಕೌರ್, ಕನ್ನಡತಿ ವೇದಾ ಕೃಷ್ಣಮೂರ್ತಿ ಅವರಿಂದಲೂ ಉಪಯುಕ್ತ ಕೊಡುಗೆಗಳನ್ನು ನಿರೀಕ್ಷಿಸುತ್ತಿದೆ. 16 ವರ್ಷದ ಶೆಫಾಲಿ 3 ಪಂದ್ಯಗಳಲ್ಲಿ 172.72ರ ಸ್ಟ್ರೈಕ್​ರೇಟ್​ನಲ್ಲಿ 114 ರನ್ ಪೇರಿಸಿದ್ದು, 8 ಸಿಕ್ಸರ್​ಗಳನ್ನೂ ಸಿಡಿಸಿ ಗಮನ ಸೆಳೆದಿದ್ದಾರೆ. 29, 39, 46 ರನ್​ಗಳ ಇನಿಂಗ್ಸ್​ಅನ್ನು ಅವರೀಗ ದೊಡ್ಡ ಸ್ಕೋರ್ ಆಗಿ ಬದಲಾಯಿಸಬೇಕಾಗಿದೆ.

ಗೆದ್ದ 3 ಪಂದ್ಯಗಳಲ್ಲೂ ಬೌಲಿಂಗ್ ವಿಭಾಗವೇ ಭಾರತದ ಶಕ್ತಿ ಎನಿಸಿದೆ. ಅದರಲ್ಲೂ ಸ್ಪಿನ್ ಬೌಲರ್​ಗಳು ತಂಡದ ಪ್ರಧಾನ ಅಸ್ತ್ರವೆನಿಸಿದೆ. ಪೂನಂ ಯಾದವ್ ವಿಕೆಟ್ ಬೇಟೆ ಮುಂದುವರಿಸಿದ್ದರೆ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಮತ್ತು ದೀಪ್ತಿ ಶರ್ಮ ಉತ್ತಮ ಸಾಥ್ ನೀಡುತ್ತಿದ್ದಾರೆ. ಅನುಭವಿ ವೇಗಿ ಶಿಖಾ ಪಾಂಡೆ ಕೂಡ ಉತ್ತಮ ಲಯದಲ್ಲಿದ್ದಾರೆ. -ಪಿಟಿಐ/ಏಜೆನ್ಸೀಸ್

ಪಂದ್ಯ ಆರಂಭ: ಬೆಳಗ್ಗೆ 9.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2

ರೇಸ್​ನಲ್ಲಿಲ್ಲ ಶ್ರೀಲಂಕಾ

ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತಿರುವ ಶ್ರೀಲಂಕಾ ತಂಡ ಈಗಾಗಲೆ ಸೆಮಿಫೈನಲ್ ರೇಸ್​ನಿಂದ ಹೊರಬಿದ್ದಿದೆ. ಹೀಗಾಗಿ ಭಾರತದೆದುರು ಕೆಚ್ಚೆದೆಯ ನಿರ್ವಹಣೆ ತೋರುವ ತವಕವನ್ನಷ್ಟೇ ಲಂಕಾ ಹೊಂದಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಕಿವೀಸ್ ಮತ್ತು ಆಸೀಸ್ ವಿರುದ್ಧ 130ರ ಗಡಿ ದಾಟುವಲ್ಲಿ ಸಫಲವಾಗಿರದ ಲಂಕಾ, ಆಸೀಸ್ ತಂಡದ ಚೇಸಿಂಗ್​ಗೆ ಕೊನೇ ಓವರ್​ವರೆಗೆ ಶ್ರಮಿಸುವಂತೆ ಮಾಡಿದ್ದು ಗಮನಾರ್ಹ ನಿರ್ವಹಣೆ. 41 ಮತ್ತು 50 ರನ್​ಗಳ 2 ಉತ್ತಮ ಇನಿಂಗ್ಸ್​ಗಳಿಂದ ಗಮನಸೆಳೆದಿರುವ ಲಂಕಾ ನಾಯಕಿ ಚಾಮರಿ ಅಟಪಟ್ಟು ಅಪಾಯಕಾರಿ ಆಗದಂತೆ ಭಾರತ ಎಚ್ಚರಿಕೆ ವಹಿಸಬೇಕಾಗಿದೆ.

ಯಾರನ್ನೂ ಲಘುವಾಗಿ ಪರಿಗಣಿಸುವುದಿಲ್ಲ

ಹ್ಯಾಟ್ರಿಕ್ ಗೆಲುವು ಕಂಡ ವಿಶ್ವಾಸವಿದ್ದರೂ, ಸಾಧಾರಣ ಬಲದ ಶ್ರೀಲಂಕಾ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ಭಾರತ ತಂಡದ ನಾಯಕಿ ಹರ್ವನ್​ಪ್ರೀತ್ ಕೌರ್ ಹೇಳಿದ್ದಾರೆ. ಲಂಕಾ ತಂಡವನ್ನು ಗಂಭೀರವಾಗಿಯೇ ಎದುರಿಸಲಿದ್ದು, ಈ ಪಂದ್ಯದ ಬಳಿಕವಷ್ಟೇ ಸೆಮಿಫೈನಲ್ ಪಂದ್ಯದತ್ತ ಗಮನಹರಿಸಲಿದ್ದೇವೆ ಎಂದು ಹರ್ವನ್​ಪ್ರೀತ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net