

ದುಬೈ: ಅನುಭವಿ ಮತ್ತು ಯುವ ಆಟಗಾರ್ತಿಯರ ಆಲ್ರೌಂಡ್ ಆಟದ ಬಲದಿಂದ ಬೀಗುತ್ತಿರುವ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು 9ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ನಲ್ಲಿ ಭಾನುವಾರ ಪ್ರಶಸ್ತಿ ಸುತ್ತಿನ ಹೋರಾಟ ನಡೆಸಲಿವೆ. ಉಭಯ ತಂಡಗಳಲ್ಲಿ ಯಾವುದೆ ತಂಡ ಗೆದ್ದರೂ, ಮೊಟ್ಟಮೊದಲ ಬಾರಿಗೆ ಚಾಂಪಿಯನ್ ಪಟ್ಟವೇರಿದ ಸಾಧನೆ ಮಾಡಲಿದೆ.
ನ್ಯೂಜಿಲೆಂಡ್ ತಂಡ ಸೋಫಿ ಡಿವೈನ್ ಅವರ ಅನುಭವಿ ನಾಯಕತ್ವ ಹೊಂದಿದ್ದರೆ, ದ. ಆಫ್ರಿಕಾ ಲೌರಾ ವೊಲ್ವಾರ್ಡ್ ಅವರ ಉತ್ಸಾಹಿ ಸಾರಥ್ಯವನ್ನು ಹೊಂದಿದೆ. ಟೂರ್ನಿಗೆ ಮುನ್ನ ಸತತ 10 ಪಂದ್ಯ ಸೋತಿದ್ದ ಕಿವೀಸ್ ಈಗ ಫೈನಲ್ಗೇರಿರುವುದೇ ರೋಚಕ ಹಾದಿಯಾಗಿದ್ದರೆ, ದ. ಆಫ್ರಿಕಾ ಕಳೆದ ಆವೃತ್ತಿಯ ಫೈನಲ್ ನಿರಾಸೆಯನ್ನು ನೀಗಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. 2023ರಲ್ಲಿ ತವರಿನಲ್ಲೇ ನಡೆದ ವಿಶ್ವಕಪ್ನ ಫೈನಲ್ನಲ್ಲಿ ಆಸೀಸ್ ವಿರುದ್ಧ ಸೋತಿದ್ದ ದ. ಆಫ್ರಿಕಾ ಈ ಬಾರಿ ಸೆಮೀಸ್ನಲ್ಲೇ ಸೇಡು ತೀರಿಸಿಕೊಂಡ ವಿಶ್ವಾಸದಲ್ಲಿದೆ.
ಕಿವೀಸ್ 3ನೇ ಬಾರಿ ಮತ್ತು 14 ವರ್ಷಗಳ ಬಳಿಕ ಫೈನಲ್ಗೇರಿದೆ. ಈ ಮುನ್ನ 2009, 2010ರಲ್ಲಿ ಫೈನಲ್ಗೇರಿದಾಗ ಇಂಗ್ಲೆಂಡ್, ಆಸೀಸ್ ಎದುರು ಸೋತಿದ್ದ ಕಿವೀಸ್, ಈ ಬಾರಿ 3ನೇ ಪ್ರಯತ್ನದಲ್ಲಿ ಟ್ರೋಫಿ ಗೆಲ್ಲುವ ಹಂಬಲದಲ್ಲಿದೆ.
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
*1: ಮಹಿಳೆಯರ ಏಕದಿನ ಅಥವಾ ಟಿ20 ವಿಶ್ವಕಪ್ಗಳಲ್ಲಿ ಆಸ್ಟ್ರೆಲಿಯಾ ಅಥವಾ ಇಂಗ್ಲೆಂಡ್ ತಂಡಗಳಿಲ್ಲದ ಮೊದಲ ಫೈನಲ್ ಇದಾಗಿದೆ. 12 ಏಕದಿನ ವಿಶ್ವಕಪ್ ಮತ್ತು ಹಿಂದಿನ 8 ಟಿ20 ವಿಶ್ವಕಪ್ಗಳ ಫೈನಲ್ನಲ್ಲೂ ಆಸೀಸ್ ಅಥವಾ ಇಂಗ್ಲೆಂಡ್ (8 ಬಾರಿ ಎರಡೂ ಆಡಿವೆ) ಆಡಿತ್ತು.
ಪುರುಷರ ವಿಶ್ವಕಪ್ ನಿರಾಸೆ ಅಳಿಸುವರೇ ಮಹಿಳೆಯರು?
ಹಾಲಿ ವರ್ಷ ವೆಸ್ಟ್ ಇಂಡೀಸ್-ಅಮೆರಿಕದಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್ನಲ್ಲೂ ಫೈನಲ್ಗೇರಿದ್ದ ದ. ಆಫ್ರಿಕಾ ತಂಡ ಭಾರತದ ವಿರುದ್ಧ 7 ರನ್ಗಳಿಂದ ಸೋತು ರನ್ನರ್ಅಪ್ಗೆ ತೃಪ್ತಿಪಟ್ಟಿತ್ತು. ಈ ನಿರಾಸೆಯನ್ನು ಅಳಿಸುವ ಅವಕಾಶವೀಗ ದ. ಆಫ್ರಿಕಾದ ಮಹಿಳೆಯರ ಮುಂದಿದೆ. ನ್ಯೂಜಿಲೆಂಡ್ ಪುರುಷರೂ ಟಿ20 ವಿಶ್ವಕಪ್ನಲ್ಲಿ ಒಮ್ಮೆ (2021) ಫೈನಲ್ಗೇರಿದ್ದರೂ ನಿರಾಸೆ ಅನುಭವಿಸಿದ್ದರು. ಹೀಗಾಗಿ ಈಗ ಕಿವೀಸ್ ಮಹಿಳೆಯರಿಗೂ ಪುರುಷರಿಗಿಂತ ಮುನ್ನ ಟಿ20 ವಿಶ್ವಕಪ್ ಗೆಲುವಿನ ಸಾಧನೆ ಯ ಅವಕಾಶವಿದೆ.
*3: ನ್ಯೂಜಿಲೆಂಡ್ ಗೆದ್ದರೆ ಮಹಿಳೆಯರ ಏಕದಿನ-ಟಿ20 ವಿಶ್ವಕಪ್ ಎರಡೂ ಗೆದ್ದ 3ನೇ ತಂಡವೆನಿಸಲಿದೆ. ಆಸೀಸ್, ಇಂಗ್ಲೆಂಡ್ ಮೊದಲೆರಡು ತಂಡಗಳಾಗಿವೆ. ಕಿವೀಸ್ 2000ದಲ್ಲಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದಿತ್ತು.