

ಪರ್ತ್: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮರ್ಥ ನಿರ್ವಹಣೆ ತೋರಿದ ಭಾರತ ತಂಡ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ 2ನೇ ಜಯ ದಾಖಲಿಸಿತು. ಡಬ್ಲ್ಯುಎಸಿಎ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಹರ್ವನ್ ಪ್ರೀತ್ ಕೌರ್ ಪಡೆ 18 ರನ್ಗಳಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿತು. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ್ದ ಭಾರತ, ಎ ಗುಂಪಿನಲ್ಲಿ ಅಗ್ರಸ್ಥಾನ ಸಂಪಾದಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಯುವ ಬ್ಯಾಟುಗಾರ್ತಿ ಶೆಫಾಲಿ ವರ್ಮ (39 ರನ್, 17 ಎಸೆತ, 2 ಬೌಂಡರಿ, 4 ಸಿಕ್ಸರ್) ಹಾಗೂ ಜೆಮೀಮಾ ರೋಡ್ರಿಗಸ್ (34 ರನ್, 37 ಎಸೆತ, 2 ಬೌಂಡರಿ, 1 ಸಿಕ್ಸರ್) ಜೋಡಿಯ ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್ಗೆ 142 ರನ್ ಕಲೆಹಾಕಿತು. ಪ್ರತಿಯಾಗಿ ಬಾಂಗ್ಲಾದೇಶ ತಂಡ, ಪೂನಂ ಯಾದವ್ (18ಕ್ಕೆ 3), ಶಿಖಾ ಪಾಂಡೆ (14ಕ್ಕೆ 2) ಹಾಗೂ ಅರುಂಧತಿ ರೆಡ್ಡಿ (33ಕ್ಕೆ 2) ಮಾರಕ ದಾಳಿಗೆ ನಲುಗಿ 8 ವಿಕೆಟ್ಗೆ 124 ರನ್ ಗಳಿಸಲಷ್ಟೇ ಶಕ್ತವಾಯಿತು. ಏಜೆನ್ಸೀಸ್
ಶೆಫಾಲಿ-ಜೆಮೀಮಾ ಮಿಂಚಿನ ಬ್ಯಾಟಿಂಗ್
ಶಿಖಾ, ಪೂನಂ ಕಡಿವಾಣ
ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಬಾಂಗ್ಲಾ ತಂಡಕ್ಕೆ ಅನುಭವಿ ವೇಗಿ ಶಿಖಾ ಪಾಂಡೆ ಆಘಾತ ನೀಡಿದರು. ಮುಶಿದ್ ಖತುನ್ (30 ರನ್, 26 ಎಸೆತ, 4 ಬೌಂಡರಿ), ನಿಗರ್ ಸುಲ್ತಾನಾ (30ರನ್, 26 ಎಸೆತ, 5 ಬೌಂಡರಿ) ಜೋಡಿಯ ಪ್ರತಿಹೋರಾಟದ ನಡುವೆಯೂ ಭಾರತದ ಬೌಲಿಂಗ್ ಪಡೆ, ಬಾಂಗ್ಲಾ ಬ್ಯಾಟುಗಾರ್ತಿಯರಿಗೆ ಕಡಿವಾಣ ಹಾಕಿತು. ಪೂನಂ ಯಾದವ್ ಹಾಗೂ ಅರುಂಧತಿ ರೆಡ್ಡಿ, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ (25ಕ್ಕೆ 1) ಒಳಗೊಂಡ ಬೌಲಿಂಗ್ ಪಡೆ ಬಾಂಗ್ಲಾ ತಂಡವನ್ನು ಕಟ್ಟಿಹಾಕಿತು.
16 ವರ್ಷ, 27 ದಿನ ವಯಸ್ಸಿನ ಶೆಫಾಲಿ ವರ್ಮ ಟಿ20 ವಿಶ್ವಕಪ್ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅತ್ಯಂತ ಕಿರಿಯರೆನಿಸಿದರು.
ವಿಶ್ವಕಪ್ಗೆ ರಿಚಾ ಪದಾರ್ಪಣೆ
ಬಂಗಾಳದ 16 ವರ್ಷದ ಆಟಗಾರ್ತಿ ರಿಚಾ ಘೋಷ್ ಟಿ20 ವಿಶ್ವಕಪ್ ಟೂರ್ನಿಗೆ ಪದಾರ್ಪಣೆ ಮಾಡಿದರು. ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ರಿಚಾ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರು.