ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್​ಗೇರಲು ಭಾರತದ ಮುಂದಿನ ಸವಾಲಿನ ಹಾದಿ; ಹೀಗಿದೆ ಲೆಕ್ಕಾಚಾರ...

web wom t20 wc
Published on

ದುಬೈ: ರೋಹಿತ್​ ಶರ್ಮ ಸಾರಥ್ಯದಲ್ಲಿ ಭಾರತದ ಪುರುಷರ ತಂಡ ಚುಟುಕು ಕ್ರಿಕೆಟ್​ ವಿಶ್ವಕಿರೀಟ ಗೆದ್ದ ಸಾಧನೆಯನ್ನು ಪುನರಾವರ್ತಿಸುವ ಹಂಬಲದಲ್ಲಿ ಭಾರತದ ಮಹಿಳೆಯರು ಟಿ20 ವಿಶ್ವಕಪ್​ನಲ್ಲಿ ಅಭಿಯಾನ ಆರಂಭಿಸಿದ್ದರು. ಆದರೆ ಮೊದಲ ಪಂದ್ಯದಲ್ಲೇ ನ್ಯೂಜಿಲೆಂಡ್​ ಎದುರು ದೊಡ್ಡ ಅಂತರದ ಸೋಲಿನ ಆಘಾತ ಎದುರಿಸಿದ ಹರ್ಮಾನ್​ಪ್ರೀತ್​ ಕೌರ್​ ಪಡೆ, 2ನೇ ಪಂದ್ಯದಲ್ಲಿ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 106 ರನ್​ಗಳ ಸಾಧಾರಣ ಗುರಿ ತಲುಪಲು 19ನೇ ಓವರ್​ವರೆಗೆ ತಿಣುಕಾಡಿತು. ಇದರಿಂದ ಈಗ ಭಾರತದ ಮಹಿಳೆಯರ ಸೆಮೀಸ್​ ಹಾದಿ ದುರ್ಗಮಗೊಂಡಿದ್ದು, ಮುಂದಿನ 2 ಲೀಗ್​ ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ಮತ್ತು ಅದೃಷ್ಟದ ಅಗತ್ಯ ಎದುರಾಗಿದೆ.

ಪಾಕ್​ ವಿರುದ್ಧದ ಗೆಲುವಿನ ನಡುವೆ ಭಾರತದ ರನ್​ರೇಟ್​ (-1.217) ಹೆಚ್ಚಿನ ಸುಧಾರಣೆ ಕಂಡಿಲ್ಲ. ಎ ಗುಂಪಿನ ಅಂಕಪಟ್ಟಿಯಲ್ಲಿ ಭಾರತ ಈಗ ಪಾಕ್​ಗಿಂತಲೂ (+0.555) ಹಿಂದೆ ಅಂದರೆ 4ನೇ ಸ್ಥಾನದಲ್ಲಿದೆ. ಹೀಗಾಗಿ ಭಾರತಕ್ಕೀಗ ಗೆಲುವಿನೊಂದಿಗೆ ರನ್​ರೇಟ್​ ಸುಧಾರಣೆಯ ಒತ್ತಡವೂ ಎದುರಾಗಿದೆ.

ಭಾರತ ಇನ್ನು ಬುಧವಾರ ಏಷ್ಯಾಕಪ್​ ಚಾಂಪಿಯನ್​ ಶ್ರೀಲಂಕಾ ಮತ್ತು ಭಾನುವಾರ 6 ಬಾರಿಯ ವಿಶ್ವ ಚಾಂಪಿಯನ್​ ಆಸ್ಟ್ರೆಲಿಯಾ ತಂಡವನ್ನು ಎದುರಿಸಲಿದೆ. ಏಷ್ಯಾಕಪ್​ ಫೈನಲ್​ನಲ್ಲಿ ಲಂಕಾ ಎದುರು ಅನುಭವಿಸಿದ ಸೋಲು ಮರೆತು ಭಾರತ ಈ ಬಾರಿ ತಿರುಗೇಟು ನೀಡಬೇಕಿದೆ. ಇನ್ನು ಬಲಿಷ್ಠ ಆಸ್ಟ್ರೆಲಿಯಾವನ್ನೂ ಮಣಿಸಿದರೆ ಭಾರತದ ಸೆಮೀಸ್​ ಹಾದಿ ಸುಗಮವಾಗಲಿದೆ. ಆಗ ಇನ್ನೊಂದು ಸೆಮೀಸ್​ ಸ್ಥಾನಕ್ಕೆ ಆಸೀಸ್​-ಕಿವೀಸ್​ ನಡುವೆ ಪೈಪೋಟಿ ಏರ್ಪಡಲಿದೆ.

ಭಾರತ ತಂಡ ಆಸೀಸ್​ ವಿರುದ್ಧ ಸೋತರೂ ಸೆಮಿಫೈನಲ್​ಗೇರಬೇಕಾದರೆ, ನ್ಯೂಜಿಲೆಂಡ್​ ತಂಡ ಶ್ರೀಲಂಕಾ ವಿರುದ್ಧ ಸೋಲಬೇಕಾಗುತ್ತದೆ. ಭಾರತ ವಿರುದ್ಧದ ಬೃಹತ್​ ಜಯದಿಂದ ಕಿವೀಸ್​ (+2.900) ಉತ್ತಮ ರನ್​ರೇಟ್​ ಸಂಪಾದಿಸಿ ಎ ಗುಂಪಿನ ಅಗ್ರಸ್ಥಾನದಲ್ಲಿದ್ದರೆ, ಆಸೀಸ್​ (+1.908) 2ನೇ ಸ್ಥಾನದಲ್ಲಿದೆ. ಹೀಗಾಗಿ ಭಾರತದ ಭವಿಷ್ಯ ನಿರ್ಧರಿಸುವ ನಿಟ್ಟಿನಲ್ಲಿ ಆಸೀಸ್-ಕಿವೀಸ್​ (ಅ.8), ಲಂಕಾ-ಕಿವೀಸ್​ (ಅ.12) ಪಂದ್ಯಗಳ ಫಲಿತಾಂಶವೂ ಮಹತ್ವದ್ದಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net