

ಮೆಲ್ಬೋರ್ನ್: ಚೊಚ್ಚಲ ಟಿ20 ವಿಶ್ವಕಪ್ ಕಿರೀಟದ ಕನಸಿನಲ್ಲಿರುವ ಭಾರತ ಮಹಿಳಾ ತಂಡಕ್ಕೆ ಒಂದು ಹೆಜ್ಜೆಯಷ್ಟೇ ಬಾಕಿಯಿದೆ. ಟೂರ್ನಿಯುದ್ದಕ್ಕೂ ಪ್ರಭುತ್ವ ಸಾಧಿಸುತ್ತಾ ಬಂದಿರುವ ಭಾರತ ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟೂರ್ನಿಯ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. 4 ಬಾರಿ ಚಾಂಪಿಯನ್ ತಂಡದ ಸವಾಲು ಎದುರಿಸಲು ಹರ್ವನ್ಪ್ರೀತ್ ಕೌರ್ ಬಳಗ ಸನ್ನದ್ಧವಾಗಿದೆ. ಜತೆಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ದಿನದಂದೇ ನಡೆಯಲಿರುವ ಈ ಪಂದ್ಯ ವೀಕ್ಷಿಸಲು ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸುವ ಸಾಧ್ಯತೆಗಳಿವೆ.
ಟೂರ್ನಿಯಲ್ಲಿ ಇದುವರೆಗೂ ಅಜೇಯ ಸಾಧನೆ ಮಾಡಿರುವ ಭಾರತ ತಂಡ ಸೆಮಿಫೈನಲ್ ಪಂದ್ಯ ಮಳೆಯಿಂದ ರದ್ದಾದ ಕಾರಣ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ಫೈನಲ್ಗೇರಿದೆ. ಟೂರ್ನಿ ಉದ್ಘಾಟನಾ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡಿದ್ದ ಭಾರತ ತಂಡ ಇದೀಗ ಅದೇ ಫಲಿತಾಂಶ ಪಡೆಯಲು ಹಂಬಲಿಸುತ್ತಿದೆ. ಆದರೆ, ಸತತ 8 ದಿನಗಳಿಂದ ವಿಶ್ರಾಂತಿಯಲ್ಲಿದ್ದ ಟೀಮ್ ಇಂಡಿಯಾ ಫೈನಲ್ನಲ್ಲಿ ಹೇಗೆ ಆಡಲಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ.
ಶೆಫಾಲಿ ಭಯದಲ್ಲಿ ಆಸೀಸ್: ಟೂರ್ನಿಯ ಕೇಂದ್ರ ಬಿಂದುವಾಗಿರುವ 16 ವರ್ಷದ ಶೆಫಾಲಿ ವರ್ಮ ಆರಂಭಿಕ ಹಂತದಲ್ಲಿ ಭಾರತ ತಂಡಕ್ಕೆ ಶಕ್ತಿಯಾಗಿದ್ದಾರೆ. ಮತ್ತೋರ್ವ ಆರಂಭಿಕ ಬ್ಯಾಟುಗಾರ್ತಿ ಸ್ಮೃತಿ ಮಂದನಾ ವೈಫಲ್ಯದ ನಡುವೆಯೂ ಶೆಫಾಲಿ ಸಾಹಸದಿಂದ ಭಾರತ ಉತ್ತಮ ಆರಂಭ ಗಿಟ್ಟಿಸಿಕೊಳ್ಳುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಾಣುತ್ತಿರುವ ಭಾರತ ತಂಡಕ್ಕೆ ಎಚ್ಚರಿಕೆ ನಿರ್ವಹಣೆ ಅಗತ್ಯವಿದೆ. ನಾಯಕಿ ಹರ್ವನ್ ಪ್ರೀತ್ ಕೌರ್, ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮ ಒಳಗೊಂಡ ಮಧ್ಯಮ ಕ್ರಮಾಂಕ ಉತ್ತಮ ರನ್ ಪೇರಿಸಿ ಬೌಲರ್ಗಳಿಗೆ ಸಾಥ್ ನೀಡಬೇಕಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಭಾರತದ ಎದುರು ಸೋಲನುಭವಿಸಿದ ಬಳಿಕ ಸುಧಾರಿಸಿಕೊಂಡಿರುವ ಆಸ್ಟ್ರೇಲಿಯಾ ಸೇಡು ತೀರಿಸಿಕೊಳ್ಳುವ ಮೂಲಕ 5ನೇ ಪ್ರಶಸ್ತಿ ಕನಸಿನಲ್ಲಿದೆ.
ಭಾರತ: ಉತ್ತಮ ಲಯದಲ್ಲಿರುವ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸು ವಂತಿಲ್ಲ. ಗುಂಪು ಹಂತದಲ್ಲಿ ಆಡಿದ ತಂಡವೇ ಪ್ರಶಸ್ತಿ ಸುತ್ತಿಗೂ ಕಣಕ್ಕಿಳಿಯಲಿದೆ. ಸಿಡ್ನಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ರದ್ದುಗೊಂಡ ಹಿನ್ನೆಲೆಯಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿಯಾಗಿದ್ದ ಭಾರತ ಯಾವ ಶ್ರಮವೂ ಇಲ್ಲದೆ ಚೊಚ್ಚಲ ಬಾರಿಗೆ ಫೈನಲ್ ಸಾಧನೆ ಮಾಡಿತ್ತು. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ ಕನ್ನಡತಿಯರಾದ ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ಐತಿಹಾಸಿಕ ಪಂದ್ಯದಲ್ಲಿ ಆಡಲಿದ್ದಾರೆ.
ಸಂಭಾವ್ಯ ತಂಡ: ಶಫಾಲಿ ವರ್ಮ, ಸ್ಮೃತಿ ಮಂದನಾ, ಹರ್ವನ್ಪ್ರೀತ್ ಕೌರ್, ಜೆಮೀಮಾ ರೋಡ್ರಿಗಸ್, ದೀಪ್ತಿ ಶರ್ಮ, ತಾನಿಯಾ ಭಾಟಿಯಾ, ವೇದಾ ಕೃಷ್ಣಮೂರ್ತಿ, ಶಿಖಾ ಪಾಂಡೆ, ರಾಧಾ ಯಾದವ್, ಪೂನಂ ಯಾದವ್, ರಾಜೇಶ್ವರಿ ಗಾಯಕ್ವಾಡ್.
ಪಿಚ್ ರಿಪೋರ್ಟ್
ಪಂದ್ಯಕ್ಕೆ ಮಳೆ ಆತಂಕವಿಲ್ಲ. ಸಿಡ್ನಿಯಲ್ಲಿ ಬಿದ್ದ ಮಳೆಯಿಂದಾಗಿ ಸೆಮಿಫೈನಲ್ ಪಂದ್ಯಗಳಿಗೆ ಅಡ್ಡಿಯುಂಟಾಗಿತ್ತು. ಇಲ್ಲಿನ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಹಕಾರಿಯಾಗುವ ನಿರೀಕ್ಷೆಯಿದೆ.
ಭಾರತ ಹಾಗೂ ಆಸೀಸ್ 12 ಟಿ20 ಪಂದ್ಯ ಆಡಿವೆ. ಇದರಲ್ಲಿ ಭಾರತ 3ರಲ್ಲಿ, ಆಸೀಸ್ 9ರಲ್ಲಿ ಗೆದ್ದಿದೆ. ಅದರಲ್ಲೂ ಆರಂಭಿಕ 7 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ದಾಖಲಿಸಿದ್ದರೆ, ಕಳೆದ 5 ಟಿ20ಯಲ್ಲಿ 3 ಬಾರಿ ಭಾರತ ಜಯಿಸಿದೆ.
ಆಸ್ಟ್ರೇಲಿಯಾ: ಆತಿಥೇಯ ತಂಡದಲ್ಲೂ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ. ದಕ್ಷಿಣ ಆಫ್ರಿಕಾ ಎದುರು ಸೆಮೀಸ್ನಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ. ಭಾರತದ ಬ್ಯಾಟುಗಾರ್ತಿಯರಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಆಫ್ಸ್ಪಿನ್ ಉಪಯೋಗಿಸಿದ್ದಲ್ಲಿ ಮೊಲಿ ಸ್ಟ್ರಾನೊರನ್ನು ಆಡಿಬಹುದು. ಆರಂಭಿಕ ಎರಡು ಪಂದ್ಯಗಳಲ್ಲಿ ಮೊಲಿ ಉತ್ತಮ ನಿರ್ವಹಣೆ ತೋರಿದ್ದರು. ಒಂದು ವೇಳೆ ಸ್ಟ್ರಾನೊ ಕಣಕ್ಕಿಳಿಸಿದರೆ, ಜಾರ್ಜಿಯಾ ವೇರ್ಹ್ಯಾಂ ಹೊರಗುಳಿಯಲಿದ್ದಾರೆ.
ಸಂಭಾವ್ಯ ತಂಡ: ಅಲಿಸ್ಸಾ ಹೀಲಿ, ಬೆಥ್ ಮೂನಿ, ಮೆಗ್ ಲ್ಯಾನಿಂಗ್, ಜೊನಾಸೆನ್, ಗಾರ್ಡನರ್, ರಚೇಲ್ ಹೇನ್ಸ್, ನಿಕೊಲಾ ಕ್ಯಾರಿ, ಸೊಫೀ ಮೊಲಿನೆಕ್ಸ್, ಡೆಲಿಸ್ಸಾ ಕಿಮ್ಮಿನ್ಸ್ ಜಾರ್ಜಿಯಾ ವೇರ್ಹ್ಯಾಂ/ಮೊಲಿ ಸ್ಟ್ರಾನೊ, ಮೆಗನ್ ಸ್ಕಟ್.
ಸ್ಟೇಡಿಯಂ ಭರ್ತಿ
ಸುಮಾರು 90 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಎಂಸಿಜಿ ಮೈದಾನದಲ್ಲಿ ಭಾನುವಾರ ಸಂಪೂರ್ಣ ಭರ್ತಿಯಾಗುವ ಸಾಧ್ಯತೆಗಳಿವೆ. ಫೈನಲ್ ಪಂದ್ಯ ಒಂದು ವಾರಕ್ಕೂ ಮುನ್ನವೇ 75 ಸಾವಿರ ಟಿಕೆಟ್ಗಳು ಮಾರಾಟವಾಗಿದ್ದವು. ಭಾರತೀಯ ಮೂಲದ ಅಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಲಿದ್ದಾರೆ. ಐತಿಹಾಸಿಕ ಪಂದ್ಯಕ್ಕೆ ಎಂಸಿಜಿ ಸಾಕ್ಷಿಯಾಗಲಿದೆ.