ಮಹಿಳಾ ಟಿ20 ವಿಶ್ವಕಪ್: ಲಂಕಾ ಎದುರು ಭರ್ಜರಿ ಜಯ; ಭಾರತದ ಸೆಮೀಸ್​ ಆಸೆ ಜೀವಂತ

web t20 wc
Published on

ದುಬೈ: ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮೃತಿ ಮಂದನಾ (50 ರನ್​, 38 ಎಸೆತ, 4 ಬೌಂಡರಿ, 1 ಸಿಕ್ಸರ್​) ಮತ್ತು ನಾಯಕಿ ಹರ್ಮಾನ್​ಪ್ರೀತ್​ ಕೌರ್​ (52*ರನ್​, 27 ಎಸೆತ, 8 ಬೌಂಡರಿ, 1 ಸಿಕ್ಸರ್​) ಅರ್ಧಶತಕ ಮತ್ತು ಬೌಲರ್​ಗಳ ಬಿಗಿ ದಾಳಿಯ ಬಲದಿಂದ ಭಾರತ ತಂಡ ಮಹಿಳಾ ಟಿ20 ವಿಶ್ವಕಪ್​ ಟೂರ್ನಿಯ ತನ್ನ 3ನೇ ಲೀಗ್​ ಪಂದ್ಯದಲ್ಲಿ ಶ್ರೀಲಂಕಾ ಎದುರು 82 ರನ್​ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಹರ್ಮಾನ್​ಪ್ರೀತ್​ ಕೌರ್​ ಪಡೆ ಸೆಮೀಸ್​ ಆಸೆ ಜೀವಂತ ಉಳಿಸಿಕೊಂಡಿದೆ.

ದುಬೈ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಭಾರತ ತಂಡ, ಸ್ಮೃತಿ-ಶೆಫಾಲಿ ಹಾಕಿಕೊಟ್ಟ ಭದ್ರ ಬುನಾದಿಯ ಬಲದಿಂದ 3 ವಿಕೆಟ್​ಗೆ 172 ರನ್​ ಪೇರಿಸಿತು. ಸ್ಮೃತಿಗೆ ಶೆಫಾಲಿ ವರ್ಮ (43 ರನ್​, 40 ಎಸೆತ, 4 ಬೌಂಡರಿ) ಉತ್ತಮ ಸಾಥ್​ ನೀಡಿದರೆ, ಹರ್ಮಾನ್​ಪ್ರೀತ್​ ಕೌರ್​ ಸ್ಲಾಗ್​ ಓವರ್​ಗಳಲ್ಲಿ ಲಂಕಾ ಬೌಲರ್​ಗಳ ಬೆಂಡೆತ್ತಿ ಮೊತ್ತ ಏರಿಸಿದರು. ಪ್ರತಿಯಾಗಿ ಲಂಕಾ 19.5 ಓವರ್​ಗಳಲ್ಲಿ 90 ರನ್​ ಗಳಿಸಲಷ್ಟೇ ಶಕ್ತವಾಯಿತು.

ಆರಂಭಿಕರಿಂದ ಭದ್ರ ಬುನಾದಿ

ಟೂರ್ನಿಯ ಮೊದಲ 2 ಪಂದ್ಯಗಳಲ್ಲಿ ಉತ್ತಮ ಆರಂಭ ಸಿಗದೆ ಪರದಾಡಿದ್ದ ಭಾರತಕ್ಕೆ ಈ ಬಾರಿ ಸ್ಮೃತಿ-ಶೆಫಾಲಿ ಜೋಡಿ ಭದ್ರ ಬುನಾದಿ ಹಾಕಿಕೊಟ್ಟಿತು. ಪವರ್​ಪ್ಲೇನಲ್ಲಿ 41 ರನ್​ ಕಸಿದ ಈ ಜೋಡಿ ಮೊದಲ ವಿಕೆಟ್​ಗೆ 77 ಎಸೆತಗಳಲ್ಲಿ 98 ರನ್​ ಜತೆಯಾಟವಾಡಿತು. 7ನೇ ಓವರ್​ನಲ್ಲಿ ಸ್ಮೃತಿ ಸಿಡಿಸಿದ ಸಿಕ್ಸರ್​ ಹಾಲಿ ವಿಶ್ವಕಪ್​ನಲ್ಲಿ ಭಾರತದ ಮೊದಲ ಸಿಕ್ಸರ್​ ಕೂಡ ಆಗಿತ್ತು. 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸ್ಮೃತಿ ಅದರ ಬೆನ್ನಲ್ಲೇ ರನೌಟ್​ ಬಲೆಗೆ ಬಿದ್ದರು. ಮರುಎಸೆತದಲ್ಲೇ ಶೆಫಾಲಿ ಕೂಡ ಔಟಾದರು. ನಂತರದಲ್ಲಿ ಹರ್ಮಾನ್​ಪ್ರೀತ್​ ತಂಡಕ್ಕೆ ಆಸರೆಯಾಗಿ ನಿಂತರು. ಮುರಿಯದ 4ನೇ ವಿಕೆಟ್​ಗೆ ಹರ್ಮಾನ್​ಪ್ರೀತ್​-ರಿಚಾ ಘೋಷ್​ 22 ಎಸೆತಗಳಲ್ಲಿ 44 ರನ್​ ದೋಚಿದರು. ಈ ಪೈಕಿ 38 ರನ್​ಗಳನ್ನು ಹರ್ಮಾನ್​ಪ್ರೀತ್​ ಒಬ್ಬರೇ ಕಸಿದರು.

ಸೆಮೀಸ್​ ಲೆಕ್ಕಾಚಾರ

ಭಾರತ ತಂಡ ಇನ್ನು ತನ್ನ ಕೊನೇ ಲೀಗ್​ ಪಂದ್ಯದಲ್ಲಿ ಭಾನುವಾರ ಹಾಲಿ ಚಾಂಪಿಯನ್​ ಆಸ್ಟ್ರೆಲಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತಕ್ಕೆ ಸೆಮಿಫೈನಲ್​ಗೇರಲು ಹೆಚ್ಚಿನ ಅವಕಾಶವಿದೆ. ಆದರೆ ಆಗ ರನ್​ರೇಟ್​ನಲ್ಲೂ ಆಸೀಸ್​ ಅಥವಾ ಕಿವೀಸ್​ ತಂಡವನ್ನು ಹಿಂದಿಕ್ಕಿ ಅಗ್ರ 2ರೊಳಗೆ ಸ್ಥಾನ ಸಂಪಾದಿಸಬೇಕು. ಇನ್ನು ಆಸೀಸ್​ ವಿರುದ್ಧ ಸೋತರೂ ಭಾರತಕ್ಕೆ ಉಪಾಂತ್ಯಕ್ಕೇರುವ ಅವಕಾಶವಿದ್ದರೂ, ಇದು ಭಾರಿ ಕಠಿಣ ಹಾದಿ ಆಗಿದೆ. ಇದಕ್ಕಾಗಿ ಕಿವೀಸ್​, ಪಾಕ್​ ತಂಡಗಳು ಇನ್ನೊಂದು ಪಂದ್ಯವನ್ನು ಸೋಲಬೇಕು ಮತ್ತು ರನ್​ರೇಟ್​ನಲ್ಲೂ ಭಾರತಕ್ಕಿಂತ ಹಿಂದುಳಿಯಬೇಕು.

ಭಾರತ: 3 ವಿಕೆಟ್​ಗೆ 172 (ಸ್ಮೃತಿ 50, ಶೆಫಾಲಿ 43, ಹರ್ಮಾನ್​ಪ್ರೀತ್​ 52*, ಜೆಮೀಮಾ 16, ರಿಚಾ 6*, ಚಾಮರಿ 34ಕ್ಕೆ 1, ಕಾಂಚನಾ 29ಕ್ಕೆ 1). ಶ್ರೀಲಂಕಾ: 19.5 ಓವರ್​ಗಳಲ್ಲಿ 90 (ದಿಲ್ಹಾರಿ 21, ಸಂಜೀವನಿ 20, ಕಾಂಚನಾ 19, ಅರುಂಧತಿ 19ಕ್ಕೆ 3, ಆಶಾ 19ಕ್ಕೆ 3, ರೇಣುಕಾ 16ಕ್ಕೆ 2, ಶ್ರೇಯಾಂಕಾ 15ಕ್ಕೆ 1).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net