

ಶಾರ್ಜಾ: ಹ್ಯಾಟ್ರಿಕ್ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿರುವ ಹಾಲಿ ಚಾಂಪಿಯನ್ ಸೂಪರ್‌ನೋವಾಸ್ ಮತ್ತು ಟ್ರೈಲ್‌ಬ್ಲೇಜರ್ಸ್ ತಂಡಗಳ ನಡುವೆ ಮಹಿಳೆಯರ ಮಿನಿ-ಐಪಿಎಲ್ ಖ್ಯಾತಿಯ ಮಹಿಳಾ ಟಿ20 ಚಾಲೆಂಜ್ ಟೂರ್ನಿಯ ಫೈನಲ್ ಪಂದ್ಯ ಸೋಮವಾರ ನಡೆಯಲಿದೆ.
ಶನಿವಾರ ನಡೆದ ನಿರ್ಣಾಯಕ ಅಂತಿಮ ಲೀಗ್ ಪಂದ್ಯದಲ್ಲಿ 2 ರನ್‌ಗಳಿಂದ ರೋಚಕ ಗೆಲುವು ದಾಖಲಿಸಿದ ಹರ್ಮಾನ್‌ಪ್ರೀತ್ ಕೌರ್ ಸಾರಥ್ಯದ ಸೂಪರ್‌ನೋವಾಸ್ ತಂಡ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲಿದ್ದರೆ, ಸ್ಮತಿ ಮಂದನಾ ನೇತೃತ್ವದ ಟ್ರೈಲ್‌ಬ್ಲೇಜರ್ಸ್ ತಂಡ ಈ ಸೋಲಿಗೆ ಸೇಡು ತೀರಿಸಿಕೊಳ್ಳುವ ಮೂಲಕ ಚೊಚ್ಚಲ ಪ್ರಶಸ್ತಿ ಒಲಿಸಿಕೊಳ್ಳುವ ತವಕದಲ್ಲಿದೆ.
2018 ಮತ್ತು 2019ರ ಆವೃತ್ತಿಗಳಲ್ಲಿ ಚಾಂಪಿಯನ್ ಆಗಿದ್ದ ಸೂಪರ್‌ನೋವಾಸ್ ತಂಡ ಮೊದಲ ಪಂದ್ಯದಲ್ಲಿ ಮಿಥಾಲಿ ರಾಜ್ ಸಾರಥ್ಯದ ವೆಲಾಸಿಟಿ ವಿರುದ್ಧ ಅಂತಿಮ ಓವರ್‌ನಲ್ಲಿ ಸೋಲು ಕಂಡ ಬಳಿಕ ಟೂರ್ನಿಯಿಂದ ಹೊರಬೀಳುವ ಅಪಾಯ ಎದುರಿಸಿತ್ತು. ಆದರೆ ಶ್ರೀಲಂಕಾದ ಚಾಮರಿ ಅಟಪಟ್ಟು ಭರ್ಜರಿ ಬ್ಯಾಟಿಂಗ್ ಮತ್ತು ಬೌಲರ್‌ಗಳ ಸಂಘಟಿತ ನಿರ್ವಹಣೆಯಿಂದ ಗೆದ್ದು ಫೈನಲ್ ಸ್ಥಾನ ಒಲಿಸಿಕೊಳ್ಳುವಲ್ಲಿ ಸಲವಾಗಿತ್ತು.
ಆಡಿದ 2 ಪಂದ್ಯಗಳಲ್ಲಿ 111 ರನ್ ಗಳಿಸಿರುವ ಚಾಮರಿ ಅಟಪಟ್ಟು ಸೂಪರ್‌ನೋವಾಸ್‌ಗೆ ಪ್ರಮುಖ ಬಲವಾಗಿದ್ದಾರೆ. ನಾಯಕಿ ಹರ್ಮಾನ್‌ಪ್ರೀತ್ ಕೌರ್ ಕೂಡ ರನ್‌ಗಳಿಸುತ್ತಿರುವುದು ಉತ್ತಮ ಅಂಶವಾಗಿದೆ. ಜೆಮೀಮಾ ರೋಡ್ರಿಗಸ್ ವೈಫಲ್ಯ ಮಾತ್ರ ಹಿನ್ನಡೆ ತಂದಿದೆ.
ಟ್ರೈಲ್‌ಬ್ಲೇಜರ್ಸ್ ತಂಡದ ಮೊದಲ ಪಂದ್ಯದಲ್ಲಿ ವೆಲಾಸಿಟಿ ತಂಡವನ್ನು ಕೇವಲ 47 ರನ್‌ಗೆ ನಿಯಂತ್ರಿಸಿ ಭರ್ಜರಿ ಯಶ ಕಂಡಿತ್ತು. ಇಂಗ್ಲೆಂಡ್‌ನ ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ ಮತ್ತು ಹಿರಿಯ ವೇಗಿ ಜೂಲನ್ ಗೋಸ್ವಾಮಿ ತಂಡದ ಬೌಲಿಂಗ್ ಶಕ್ತಿಯಾಗಿದ್ದಾರೆ. ಆಡಿದ 2 ಪಂದ್ಯಗಳಲ್ಲಿ ಒಟ್ಟು 39 ರನ್ ಮಾತ್ರ ಗಳಿಸಿರುವ ನಾಯಕಿ ಸ್ಮತಿ ಮಂದನಾ ಅವರಿಂದ ನಿರೀಕ್ಷಿತ ನಿರ್ವಹಣೆ ಬಂದಿಲ್ಲ. ವೆಸ್ಟ್ ಇಂಡೀಸ್‌ನ ಡಿಯೇಂಡ್ರ ಡಾಟಿನ್ ಆರಂಭಿಕ ಆಟಗಾರ್ತಿಯಾಗಿ ಉಪಯುಕ್ತ ಆಟವಾಡುತ್ತಿದ್ದಾರೆ. ದೀಪ್ತಿ ಶರ್ಮ ಮತ್ತು ಹಲೀನ್ ಡಿಯೋಲ್ ಆಲ್ರೌಂಡ್ ನಿರ್ವಹಣೆಯಿಂದ ಗಮನಸೆಳೆದಿದ್ದಾರೆ.
2018ರ ಏಕೈಕ ಕಾದಾಟದಲ್ಲಿ ಸೂಪರ್‌ನೋವಾಸ್ ತಂಡ ಟ್ರೈಲ್‌ಬ್ಲೇಜರ್ಸ್ ವಿರುದ್ಧ 3 ವಿಕೆಟ್‌ಗಳಿಂದ ರೋಚಕ ಗೆಲುವು ದಾಖಲಿಸಿದ್ದರೆ, 2019ರ ಫೈನಲ್‌ನಲ್ಲಿ ವೆಲಾಸಿಟಿ ವಿರುದ್ಧ 4 ವಿಕೆಟ್‌ಗಳಿಂದ ಜಯಿಸಿತ್ತು.
ಸ್ಪಿನ್ನರ್‌ಗಳೇ ನಿರ್ಣಾಯಕ
ಪ್ರಶಸ್ತಿ ಹೋರಾಟದಲ್ಲಿ ಉಭಯ ತಂಡಗಳ ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರ ನಿರ್ವಹಿಸುವ ನಿರೀಕ್ಷೆ ಇದೆ. ಟ್ರೈಲ್‌ಬ್ಲೇಜರ್ಸ್ ತಂಡ ವಿಶ್ವ ನಂ. 1 ಟಿ20 ಬೌಲರ್ ಎಕ್ಲೆಸ್ಟೋನ್ ಮತ್ತು ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಅವರನ್ನೊಳಗೊಂಡಿದ್ದರೆ, ಸೂಪರ್‌ನೋವಾಸ್ ತಂಡ ಭಾರತದ ಸ್ಟಾರ್ ಸ್ಪಿನ್ನರ್ ಪೂನಂ ಯಾದವ್ ಮತ್ತು ರಾಧಾ ಯಾದವ್ ಅವರನ್ನೊಳಗೊಂಡಿದೆ.
*ಪಂದ್ಯ ಆರಂಭ: ರಾತ್ರಿ 7.30
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್