ಇಂದು ಬೆಂಗಳೂರಿನಲ್ಲಿ ಮಹಿಳೆಯರ ಐಪಿಎಲ್​ ಮಿನಿ ಹರಾಜು; 19 ಸ್ಥಾನಗಳಿಗೆ 102 ಆಟಗಾರ್ತಿಯರ ಪೈಪೋಟಿ!

web wpl mini
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಐಪಿಎಲ್​ ಮೆಗಾ ಹರಾಜು ಪ್ರಕ್ರಿಯೆಯ ಬಳಿಕ ಮಹಿಳೆಯರ ಐಪಿಎಲ್​ ಖ್ಯಾತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​) ಟಿ20 ಟೂರ್ನಿಯ ಮಿನಿ ಹರಾಜು ಪ್ರಕ್ರಿಯೆಗೆ ಉದ್ಯಾನನಗರಿಯಲ್ಲಿ ವೇದಿಕೆ ಸಜ್ಜಾಗಿದೆ. 91 ಭಾರತೀಯರು ಮತ್ತು 29 ವಿದೇಶಿಯರ ಸಹಿತ 120 ಆಟಗಾರ್ತಿಯರ ಹರಾಜು ಪ್ರಕ್ರಿಯೆ ಭಾನುವಾರ ನಡೆಯಲಿದ್ದು, ಐದು ಫ್ರಾಂಚೈಸಿಗಳ ಒಟ್ಟು 19 ಸ್ಥಾನಗಳಿಗೆ (5 ವಿದೇಶಿ) ಪೈಪೋಟಿ ನಡೆಯಲಿದೆ. ವೆಸ್ಟ್​ ಇಂಡೀಸ್​ ಆಲ್ರೌಂಡರ್​ ಡಿಯೆಂಡ್ರಾ ಡಾಟಿನ್​ ಹಾಗೂ ಇಂಗ್ಲೆಂಡ್​ ನಾಯಕಿ ಹೀದರ್​ ನೈಟ್​ ಗರಿಷ್ಠ 50 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ದೆಹಲಿಯ 13 ವರ್ಷದ ಎಡಗೈ ವೇಗಿ ಅಂಶು ನಗರ್​ ಹರಾಜಿನಲ್ಲಿರುವ ಅತಿ ಕಿರಿಯರಾಗಿದ್ದರೆ, ಆಸ್ಟ್ರೆಲಿಯಾದ 34 ವರ್ಷದ ಬ್ಯಾಟರ್​ ಲೌರಾ ಹ್ಯಾರಿಸ್​ ಅತಿ ಹಿರಿಯರೆನಿಸಿದ್ದಾರೆ. ಆಲ್ರೌಂಡರ್​ ಸ್ನೇಹಾ ರಾಣಾ (30 ಲಕ್ಷ ರೂ. ಮೂಲಬೆಲೆ) ಹರಾಜಿನಲ್ಲಿರುವ ಭಾರತದ ಪ್ರಮುಖ ಆಟಗಾರ್ತಿಯರಾಗಿದ್ದಾರೆ.

ಹಾಲಿ ಚಾಂಪಿಯನ್​ ಆರ್​ಸಿಬಿ, ಡೆಲ್ಲಿ, ಗುಜರಾತ್​, ಮುಂಬೈ ತಂಡಗಳಿಗೆ ತಲಾ 4 ಆಟಗಾರ್ತಿಯರು ಬೇಕಿದ್ದರೆ, ಯುಪಿ ವಾರಿಯರ್ಸ್​ಗೆ ಮೂವರು ಆಟಗಾರ್ತಿಯರು ಬೇಕಿದೆ. ಮೂರನೇ ಆವೃತ್ತಿಯ ಡಬ್ಲುಪಿಎಲ್ ಫೆಬ್ರವರಿ-ಮಾರ್ಚ್​ನಲ್ಲಿ ನಡೆಯುವ ನಿರೀೆ ಇದೆ.

ಒಟ್ಟು 16.7 ಕೋಟಿ ರೂ. ಬಜೆಟ್​: ಐದು ತಂಡಗಳು ಒಟ್ಟಾರೆ 16.7 ಕೋಟಿ ರೂ. ಮೊತ್ತದೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿವೆ. ಈ ಪೈಕಿ ಆರ್​ಸಿಬಿ 3.25 ಕೋಟಿ ರೂ., ಯುಪಿ ವಾರಿಯರ್ಸ್​ 3.9 ಕೋಟಿ ರೂ., ಮುಂಬೈ ಇಂಡಿಯನ್ಸ್​ 2.65 ಕೋಟಿ ರೂ., ಗುಜರಾತ್​ ಜೈಂಟ್ಸ್​ 4.4 ಕೋಟಿ ರೂ. ಮತ್ತು ಡೆಲ್ಲಿ ಕ್ಯಾಪಿಟಲ್ಸ್​ 2.5 ಕೋಟಿ ರೂ. ಹೊಂದಿವೆ. ರಿಟೇನ್​ ಸೇರಿದಂತೆ ಪ್ರತಿ ತಂಡಗಳ ಗರಿಷ್ಠ ಬಜೆಟ್​ ಮಿತಿ 15 ಕೋಟಿ ರೂ. ಆಗಿದೆ.

ಕಣದಲ್ಲಿ ನಾಲ್ವರು ಕನ್ನಡತಿಯರು

ಡಬ್ಲ್ಯುಪಿಎಲ್​ ಹರಾಜು ಪಟ್ಟಿಯಲ್ಲಿ ಕರ್ನಾಟಕದ ನಾಲ್ವರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ರಾಜ್ಯದ ಸಿ . ಪ್ರತ್ಯುಷಾ, ಶುಭಾ ಸತೀಶ್​ ತಲಾ 30 ಲಕ್ಷ ರೂ. ಮೂಲಬೆಲೆ ಮತ್ತು ಪ್ರತ್ಯುಷಾ ಕುಮಾರ್​, ನಿಕ್ಕಿ ಪ್ರಸಾದ್​ ತಲಾ 10 ಲಕ್ಷ ರೂ. ಮೂಲಬೆಲೆ ಹೊಂದಿದ್ದಾರೆ. ಕಳೆದ ವರ್ಷ ಗುಜರಾತ್​ ಪರ ಆಡಿ ರಿಲೀಸ್​ ಆಗಿದ್ದ ವೇದಾ ಕೃಷ್ಣಮೂರ್ತಿ ಈ ಬಾರಿ ಹರಾಜಿನಲ್ಲಿ ಪಾಲ್ಗೊಳ್ಳುತ್ತಿಲ್ಲ. ಶ್ರೇಯಾಂಕಾ ಪಾಟೀಲ್​ (ಆರ್​ಸಿಬಿ) ಹಾಗೂ ವೃಂದಾ ದಿನೇಶ್​, ರಾಜೇಶ್ವರಿ ಗಾಯಕ್ವಾಡ್​ (ಯುಪಿ) ಈಗಾಗಲೆ ತಂಡಗಳಲ್ಲಿ ರಿಟೇನ್​ ಆಗಿರುವ ಮೂವರು ಕನ್ನಡತಿಯರಾಗಿದ್ದಾರೆ.

*ಆರಂಭ: ಮಧ್ಯಾಹ್ನ 3.00

*ನೇರಪ್ರಸಾರ: ಜಿಯೋಸಿನಿಮಾ, ಸ್ಪೋರ್ಟ್ಸ್​18, ಸ್ಟಾರ್​ ಸ್ಪೋರ್ಟ್ಸ್​1.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net