PHOTO| 2020ಕ್ಕೆ ಬೆನ್ನು ತೋರಿಸಿದ ಕ್ರಿಕೆಟರ್ ವೇದಾ, ಗಮನಸೆಳೆದ ಟ್ಯಾಟೂ!

veda tattoo web
Published on

ಬೆಂಗಳೂರು: ಕ್ರಿಕೆಟ್ ಮೈದಾನದೊಳಗೆ ಮತ್ತು ಹೊರಗೆ ಸದಾ ಚುರುಕಾಗಿರುವ ಆಟಗಾರ್ತಿ ವೇದಾ ಕೃಷ್ಣಮೂರ್ತಿ. ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದ ಪ್ರಮುಖ ಭಾಗವಾಗಿರುವ ಕನ್ನಡತಿ ವೇದಾ ಕೃಷ್ಣಮೂರ್ತಿ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸದ್ದು ಮಾಡಿದ್ದಾರೆ. ಅದಕ್ಕೆ ಕಾರಣ ಅವರು ಪೋಸ್ಟ್ ಮಾಡಿರುವ ಬೆನ್ನ ಹಿಂದಿರುವ ದೊಡ್ಡ ‘ಮಹಾದೇವ’ನ ಟ್ಯಾಟೂ.

ಇತ್ತೀಚೆಗೆ ಫೋಟೋಶೂಟ್ ಒಂದರಲ್ಲಿ ಪಾಲ್ಗೊಂಡಿರುವ ವೇದಾ ಕೃಷ್ಣಮೂರ್ತಿ, ಇದೇ ವೇಳೆ ಬೆನ್ನಮೇಲ್ಬಾಗದ ಟ್ಯಾಟೂ ಜತೆಗೂ ಪೋಸ್ ನೀಡಿದ್ದು, ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳ ಗಮನಸೆಳೆದಿದ್ದಾರೆ.

ದೊಡ್ಡದಾಗಿರುವ ‘ಮಹಾದೇವ’ನ ಟ್ಯಾಟೂ ಚಿತ್ರದ ಜತೆಗೆ 28 ವರ್ಷದ ವೇದಾ, ‘ವರ್ಷದ ಕೊನೆಯ ದಿನದ ಶೂಟ್‌ನಲ್ಲಿ ತೆಗೆದ ಕೊನೇ ಚಿತ್ರ ಇದಾಗಿದೆ. ಬೈ ಬೈ 2020’ ಎಂದು ಬರೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಅವರ ಅಭಿಮಾನಿಗಳು, ‘ಮಹಾದೇವ’ನ ಟ್ಯಾಟೂಗೆ ಮೆಚ್ಚುಗೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಜತೆಗೆ ಇನ್ನು ಕೆಲವರು, ‘ಬೆನ್ನು ತೋರಿಸುವ ಮೂಲಕ 2020ಕ್ಕೆ ಸರಿಯಾದ ವಿದಾಯವನ್ನೇ ನೀಡಿದ್ದೀರಿ’ ಎಂದು ಬರೆದಿದ್ದಾರೆ. ಸಾವಿರಾರು ಲೈಕ್ಸ್‌ಗಳನ್ನೂ ಈ ಚಿತ್ರಗಳು ಪಡೆದುಕೊಂಡಿವೆ.

ಚಿಕ್ಕಮಗಳೂರಿನ ಕಡೂರು ಮೂಲದವರಾದ ವೇದಾ ಕೃಷ್ಣಮೂರ್ತಿ ಭಾರತ ತಂಡದ ಪರ ಇದುವರೆಗೆ 48 ಏಕದಿನ ಮತ್ತು 74 ಟಿ20 ಪಂದ್ಯಗಳನ್ನು ಆಡಿದ್ದಾರೆ. 2017ರ ಏಕದಿನ ಮತ್ತು 2020ರ ಟಿ20 ವಿಶ್ವಕಪ್ ರನ್ನರ್‌ಅಪ್ ತಂಡಗಳ ಭಾಗವೂ ಆಗಿದ್ದರು. ಆಸ್ಟ್ರೇಲಿಯಾದ ಮಹಿಳೆಯರ ಬಿಗ್ ಬಾಷ್ ಲೀಗ್‌ನಲ್ಲೂ ಆಡಿರುವ ವೇದಾ, ಸ್ಫೋಟಕ ಬ್ಯಾಟುಗಾರ್ತಿ ಮತ್ತು ಚುರುಕಿನ ಫೀಲ್ಡರ್ ಆಗಿ ಮಿಂಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net