

ಸಿಡ್ನಿ: ಲೀಗ್ ಹಂತದಲ್ಲಿ ಅಜೇಯ ಸಾಧನೆಯೊಂದಿಗೆ ಉಪಾಂತ್ಯಕ್ಕೇರಿರುವ ಭಾರತ ತಂಡ ಗುರುವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಎ ಗುಂಪಿನಲ್ಲಿ ಭಾರತ ಆಡಿದ 4 ಪಂದ್ಯಗಳಲ್ಲೂ ಭಾರತ ಜಯ ದಾಖಲಿಸಿದ ಅಗ್ರಸ್ಥಾನದೊಂದಿಗೆ ಉಪಾಂತ್ಯಕ್ಕೇರಿದೆ.
ದ.ಆಫ್ರಿಕಾ-ವಿಂಡೀಸ್ ಪಂದ್ಯ ರದ್ದು: ದಕ್ಷಿಣ ಆಫ್ರಿಕಾ ಹಾಗೂ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ನಡುವಿನ ಬಿ ಗುಂಪಿನ ಲೀಗ್ ಹಂತದ ಕಡೇ ಪಂದ್ಯ ಮಳೆಯಿಂದಾಗಿ ಒಂದು ಎಸೆತ ಕಾಣದೆ ರದ್ದುಗೊಂಡಿತು. ಇದರಿಂದ 4 ಪಂದ್ಯಗಳಿಂದ 7 ಅಂಕ ಕಲೆಹಾಕಿದ ದ.ಆಫ್ರಿಕಾ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿದರೆ, ಇಂಗ್ಲೆಂಡ್ 2ನೇ ಸ್ಥಾನಕ್ಕಿಳಿಯಿತು. ಇದೇ ಗುಂಪಿನ ಪಾಕಿಸ್ತಾನ ಹಾಗೂ ಥಾಯ್ಲೆಂಡ್ ನಡುವಿನ ಪಂದ್ಯ ಕೂಡ ಮಳೆಯಿಂದ ರದ್ದುಗೊಂಡಿತು.
ಹೊರಬಿದ್ದ ಎಲ್ಲಿಸ್ ಪೆರ್ರಿ: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರಿ ಹಿನ್ನಡೆ ಅನುಭವಿಸಿದೆ. ಸ್ನಾಯು ಸೆಳೆತಕ್ಕೆ ಒಳಗಾಗಿರುವ ತಂಡದ ಸ್ಟಾರ್ ಆಲ್ರೌಂಡರ್ ಎಲ್ಲಿಸ್ ಪೆರ್ರಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಸೋಮವಾರ ನ್ಯೂಜಿಲೆಂಡ್ ಎದುರು ನಡೆದ ಲೀಗ್ ಹಂತದ ಕಡೇ ಹಾಗೂ ನಿರ್ಣಾಯಕ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದರು. ಟೂರ್ನಿ ಮುಕ್ತಾಯದ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸದಿಂದಲೂ ಎಲ್ಲಿಸ್ ಪೆರ್ರಿ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.