

ನವದೆಹಲಿ: ಕರ್ನಾಟಕದ ವೇದಾ ಕೃಷ್ಣಮೂರ್ತಿ, ರಾಜೇಶ್ವರಿ ಗಾಯಕ್ವಾಡ್ ಹಾಗೂ ಯುವ ಆಟಗಾರ್ತಿ ಅನಘಾ ಮುರಳಿಪ್ರಸಾದ್, ನವೆಂಬರ್ 4 ರಿಂದ 9 ರವರೆಗೆ ಯುಎಇಯಲ್ಲಿ ನಡೆಯಲಿರುವ ಮಹಿಳೆಯರ ಟಿ20 ಚಾಲೆಂಜ್ ಟೂರ್ನಿಗೆ ಆಯ್ಕೆಯಾಗಿದ್ದಾರೆ. ಹಿರಿಯ ಆಟಗಾರ್ತಿಯರಾದ ಮಿಥಾಲಿ ರಾಜ್ (ವೆಲಾಸಿಟಿ), ಹರ್ಮಾನ್ ಪ್ರೀತ್ ಕೌರ್ (ಸೂಪರ್‌ನೊವಾಸ್) ಹಾಗೂ ಸ್ಮತಿ ಮಂದನಾ (ಟ್ರೈಲ್ ಬ್ಲೇಜರ್ಸ್) ಅವರಿಗೆ ಮೂರು ತಂಡಗಳ ನಾಯಕತ್ವ ವಹಿಸಲಾಗಿದೆ. ಥಾಯ್ಲೆಂಡ್ ಆಟಗಾರ್ತಿಯೊಬ್ಬರು ಮೊದಲ ಬಾರಿಗೆ ಮಿನಿ ಲೀಗ್‌ನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ವೇದಾ ಕೃಷ್ಣಮೂರ್ತಿ, ವೆಲಾಸಿಟಿ ತಂಡಕ್ಕೆ ಉಪ-ನಾಯಕಿಯಾಗಿದ್ದಾರೆ. ಇದೇ ತಂಡದಲ್ಲಿ ಅನಘಾ ಸ್ಥಾನ ಪಡೆದಿದ್ದಾರೆ. ರಾಜೇಶ್ವರಿ ಗಾಯಕ್ವಾಡ್ ಟ್ರೈಲ್ ಬ್ಲೇಜರ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ಆಟಗಾರ್ತಿಯರು ನಾಲ್ಕು ಪಂದ್ಯಗಳ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 3 ತಂಡಗಳಲ್ಲೂ ತಲಾ 4 ವಿದೇಶಿ ಆಟಗಾರ್ತಿಯರಿಗೆ ಸ್ಥಾನ ನೀಡಲಾಗಿದೆ. ಆಟಗಾರ್ತಿಯರು ಯುಎಇ ತಲುಪಿ ಒಂದು ವಾರ ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಿದ ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ. ಈ ವೇಳೆ ಹಲವು ಬಾರಿ ಕೋವಿಡ್-19ರ ಟೆಸ್ಟ್‌ಗೆ ಒಳಗಾಗಬೇಕಿದೆ. ಟೂರ್ನಿಯ ವೇಳಾಪಟ್ಟಿ ಅಂತಿಮಗೊಳಿಸಿದ್ದರೂ ಯಾವ ನಗರದಲ್ಲಿ ನಡೆಯಲಿದೆ ಎಂಬುದು ಅಂತಿಮವಾಗಿಲ್ಲ. ಬಹುತೇಕ ಶಾರ್ಜಾ ತಾಣವೇ ಅಂತಿಮಗೊಳ್ಳುವ ಸಾಧ್ಯತೆಗಳಿವೆ.
ವೇಳಾಪಟ್ಟಿ
ನ. 4 ಸೂಪರ್‌ನೊವಾಸ್ - ವೆಲಾಸಿಟಿ,
ನ.5 ವೆಲಾಸಿಟಿ-ಟ್ರೈಲ್‌ಬ್ಲೇಜರ್ಸ್,
ನ.7 ಟ್ರೈಲ್ ಬ್ಲೇಜರ್ಸ್-ಸೂಪರ್‌ನೊವಾಸ್
ನ.9. ಫೈನಲ್