

ಸಿಡ್ನಿ: ಭಾರತ ಮಹಿಳಾ ತಂಡ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಸಿಡ್ನಿ ಶೋ ಗ್ರೌಂಡ್ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಅಸ್ಥಿರ ನಿರ್ವಹಣೆಗೆ ಹೆಸರಾಗಿರುವ ಭಾರತ ತಂಡ ಅಚ್ಚರಿಯ ಫಲಿತಾಂಶ ನೀಡುವ ಶುಭಾರಂಭ ಮಾಡುವ ತವಕದಲ್ಲಿದೆ.
ಇತ್ತೀಚೆಗೆ ನಡೆದ ತ್ರಿಕೋನ ಟಿ20 ಸರಣಿಯಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಎದುರು ಸೋಲು, ಗೆಲುವು ಕಂಡಿರುವ ಭಾರತ ತಂಡ ಟೂರ್ನಿಗೆ ಅಗತ್ಯ ಸಿದ್ಧತೆ ಮಾಡಿಕೊಂಡಂತಿದೆ. ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ದಿಢೀರ್ ಕುಸಿತ ಅನುಭವಿಸುತ್ತಿರುವ ಭಾರತ ತಂಡಕ್ಕೆ ಸಂಘಟಿತ ಹೋರಾಟ ಅಗತ್ಯವಿದೆ. ಕನ್ನಡತಿ ವೇದಾ ಕೃಷ್ಣಮೂರ್ತಿ ಹಲವು ಅವಕಾಶಗಳು ಲಭಿಸುತ್ತಿದ್ದರೂ ಸೂಕ್ತವಾಗಿ ಬಳಸಿಕೊಳ್ಳಲು ವಿಫಲರಾಗುತ್ತಿದ್ದಾರೆ. ಇಂಥ ಟೂರ್ನಿಗಳಲ್ಲಿ ಒತ್ತಡ ರಹಿತವಾಗಿ ಆಟಗಾರ್ತಿಯರು ಹೋರಾಡಬೇಕಿದೆ. 16 ವರ್ಷದ ಶಫಾಲಿ ವರ್ಮ, ಸ್ಮೃತಿ ಮಂದನಾ ಆರಂಭಿಕ ಜೋಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡಬೇಕಿದೆ. ಬೌಲಿಂಗ್ ವಿಭಾಗದ ಮಟ್ಟಿಗೆ ಹೇಳುವುದಾದರೆ, ವೇಗಿ ಶಿಖಾ ಪಾಂಡೆ, ಪೂನಂ ಯಾದವ್, ಕನ್ನಡತಿ ರಾಜೇಶ್ವರಿ ಗಾಯಕ್ವಾಡ್, ದೀಪ್ತಿ ಶರ್ಮ ಒಳಗೊಂಡ ಬೌಲಿಂಗ್ ಪಡೆ ಎದುರಾಳಿಗೆ ಸವಾಲಾಗಬಲ್ಲದು.
ಆಸೀಸ್ಗೆ ಗಾಯದ ಬರೆ: ತವರು ಪ್ರೇಕ್ಷಕರ ಎದುರು ಶುಭಾರಂಭದ ನಿರೀಕ್ಷೆಯಲ್ಲಿರುವ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಟೂರ್ನಿ ಆರಂಭಕ್ಕೂ ಮೊದಲೇ ಗಾಯದ ಸಮಸ್ಯೆ ಕಾಡುತ್ತಿದೆ. ತಂಡದ ಪ್ರಮುಖ ವೇಗಿ ತಾಲ್ಯಾ ವ್ಲಾಮಿನಿಕ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇವರ ಬದಲಿಗೆ ಆಫ್-ಸ್ಪಿನ್ನರ್ ಮೊಲಿ ಸ್ಟ್ರಾನೊ ತಂಡ ಕೂಡಿಕೊಂಡಿದ್ದಾರೆ. ಉಳಿದಂತೆ, ಬಲಿಷ್ಠವಾಗಿರುವ ಆಸೀಸ್ ತಂಡ ಸುಲಭ ಜಯದ ನಿರೀಕ್ಷೆಯಲ್ಲಿದೆ. ತವರು ನೆಲದಲ್ಲೇ ಚುಟುಕು ಕ್ರಿಕೆಟ್ ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ತಂಡವನ್ನು ಮಣಿಸಿ ತ್ರಿಕೋನ ಸರಣಿ ಜಯಿಸಿತ್ತು.
ಮುಖಾಮುಖಿ: 18, ಭಾರತ:5ಆಸ್ಟ್ರೇಲಿಯಾ:13, ಟಿ20 ವಿಶ್ವಕಪ್: 3, ಭಾರತ:1 ,ಆಸ್ಟ್ರೇಲಿಯಾ: 2
ಭಾರತ ತಂಡದ ನಾಯಕಿ ಹರ್ವನ್ಪ್ರೀತ್ ಕೌರ್ ಇನ್ನು 72 ರನ್ಗಳಿಸಿದರೆ, ಟಿ20 ವಿಶ್ವಕಪ್ನಲ್ಲಿ 500 ರನ್ ದಾಖಲಿಸಿದ ಭಾರತದ 2ನೇ ಬ್ಯಾಟುಗಾರ್ತಿ ಎನಿಸಿಕೊಳ್ಳಲಿದ್ದಾರೆ. ಮಿಥಾಲಿ ರಾಜ್ (24 ಪಂದ್ಯ, 726ರನ್) ಮೊದಲ ಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಭಾರತ ಇದುವರೆಗೂ 26 ಪಂದ್ಯಗಳಲ್ಲಿ ಆಡಿದ್ದು, ತಲಾ 13ರಲ್ಲಿ ಗೆಲುವು, ಸೋಲು ಕಂಡಿದೆ. ಟಿ20 ವಿಶ್ವಕಪ್ನಲ್ಲಿ ಇದುವರೆಗೂ 32 ಪಂದ್ಯ ಆಡಿರುವ ಆಸ್ಟ್ರೇಲಿಯಾ 24 ಜಯ, 7 ಸೋಲು, 1 ಟೈ ಕಂಡಿದೆ.
ಪಂದ್ಯ ಆರಂಭ: ಮಧ್ಯಾಹ್ನ 1.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್-2, ಡಿಡಿ ಸ್ಪೋರ್ಟ್ಸ್, ಜಿಯೋ ಟಿವಿ