

ಬೆಂಗಳೂರು: ಮಾರಕ ಕರೊನಾ ಭೀತಿ ಕಾಣಿಸಿಕೊಂಡ ಬೆನ್ನಲ್ಲೇ ಎಲ್ಲ ಕ್ರಿಕೆಟ್ ಚಟುವಟಿಕೆಗಳಿಗೆ ತೆರೆ ಎಳೆಯಲಾಗಿತ್ತು. ರಣಜಿ ಟ್ರೋಫಿ ಫೈನಲ್ ಪಂದ್ಯ ಆಗಷ್ಟೇ ಮುಕ್ತಾಯ ಕಂಡಿತ್ತು. ಪಂದ್ಯದ ಕೊನೆಯ ದಿನದಾಟ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆದಿತ್ತು. ಬಳಿಕ ದೇಶೀಯ ಕ್ರಿಕೆಟ್ ಋತುವಿನ ಕೊನೆಯ ಪಂದ್ಯವಾಗಿದ್ದ ಇರಾನಿ ಟ್ರೋಫಿ ರದ್ದುಗೊಂಡಿತ್ತು. ಹೀಗಾಗಿ ಪುರುಷರ ವಿಭಾಗದ ದೇಶೀಯ ಕ್ರಿಕೆಟ್ ಋತುವಿಗೆ ಹೆಚ್ಚಿನ ಹೊಡೆತ ಬೀಳಲಿಲ್ಲ. ಆದರೆ ಮಹಿಳೆಯರ ದೇಶೀಯ ಕ್ರಿಕೆಟ್ ಋತುವಿನ ಅರ್ಧದಷ್ಟು ಪಂದ್ಯಗಳು ಇನ್ನೂ ಬಾಕಿ ಉಳಿದಿವೆ.
ವಿವಿಧ ವಯೋಮಿತಿಗಳಲ್ಲಿ ಇನ್ನೂ ಹಾಲಿ ಋತುವಿನ 7 ಟೂರ್ನಿಗಳು ಮತ್ತು 168 ಪಂದ್ಯಗಳ ಭವಿಷ್ಯ ಅನಿಶ್ಚಿತತೆಯಲ್ಲಿ ನಿಂತಿವೆ. ಸದ್ಯ ಮೇ 3ರವರೆಗೆ ಯಾವುದೇ ಪಂದ್ಯಗಳನ್ನು ನಡೆಸುವಂತಿಲ್ಲ. ಜೂನ್ ನಂತರದಲ್ಲಿ ದೇಶದ ಹೆಚ್ಚಿನ ಭಾಗದಲ್ಲಿ ಮಳೆ ಬೀಳುವುದರಿಂದಾಗಿ 2019-20ರ ಮಹಿಳೆಯರ ದೇಶೀಯ ಕ್ರಿಕೆಟ್ ಋತು ಅತಂತ್ರ ಸ್ಥಿತಿಯಲ್ಲಿದೆ.
2021ರ ಮಹಿಳೆಯರ ಏಕದಿನ ವಿಶ್ವಕಪ್ಗೆ ಭಾರತ ತಂಡ ನೇರಪ್ರವೇಶ ಪಡೆದಿರುವ ಸಂಭ್ರಮದ ಸಮಯದಲ್ಲಿ ಇದು ನಿರಾಶಾದಾಯಕವೆನಿಸುತ್ತಿದೆ. ಮಹಿಳೆಯರ ಸೀನಿಯರ್ ಟಿ20 ಟೂರ್ನಿ ನವೆಂಬರ್ನಲ್ಲೇ ಮುಕ್ತಾಯ ಕಂಡಿದ್ದರೆ, 23 ವಯೋಮಿತಿ ಟಿ20 ಟ್ರೋಫಿ ಡಿಸೆಂಬರ್ನಲ್ಲಿ ಮುಗಿದಿತ್ತು. ಈ ವಿಭಾಗಗಳ ಚಾಲೆಂಜರ್ ಟ್ರೋಫಿಗಳು ಈಗಾಗಲೆ ಪೂರ್ಣಗೊಂಡಿವೆ. ಆದರೆ ಮಾರ್ಚ್ ತಿಂಗಳಲ್ಲಿ ಕರೊನಾ ಭೀತಿ ಹೆಚ್ಚಾದ ಬಳಿಕ ಮಹಿಳಾ ಕ್ರಿಕೆಟ್ನಲ್ಲೂ ಎಲ್ಲ ದೇಶೀಯ ಪಂದ್ಯಗಳು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿವೆ.