ಇಂದು ಆಕ್ಲೆಂಡ್​ನಲ್ಲಿ ಕಾದಾಟ; ಭಾರತಕ್ಕೆ ಸತತ 4ನೇ ಗೆಲುವಿನ ತವಕ

ತಿರುಗೇಟು ನೀಡೀತೇ ಕಿವೀಸ್​?
cricket
ಅಭ್ಯಾಸದ ವೇಳೆ ಇಶಾನ್​ ಕಿಶನ್​-ವೈಭವ್ ಸೂರ್ಯವಂಶಿ ಮಾತುಕತೆ.ಏಜೆನ್ಸಿ
Published on: 

ಆಕ್ಲೆಂಡ್​: ಸತತ ಮೂರು ಗೆಲುವಿನೊಂದಿಗೆ ಟಿ20 ಸರಣಿಯನ್ನು ವಶಪಡಿಸಿಕೊಂಡಿರುವ ಭಾರತ ತಂಡದ ಮುಂದಿನ ಗುರಿ ಕ್ಲೀನ್​ಸ್ವೀಪ್​. ಇದಕ್ಕಾಗಿ ಶ್ರೇಯಸ್​ ಅಯ್ಯರ್​ ಪಡೆ ಆತಿಥೇಯ ನ್ಯೂಜಿಲೆಂಡ್​ ವಿರುದ್ಧ ಈಡನ್​ ಪಾರ್ಕ್​ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ಸರಣಿಯ 4ನೇ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ಜತೆಗೆ ಭಾರತ ತಂಡ ಬೆಂಚು ಕಾಯಿಸುತ್ತಿರುವ ಕುಲದೀಪ್​ ಯಾದವ್​, ವರುಣ್​ ಚಕ್ರವರ್ತಿ ಅವರಂಥ ಆಟಗಾರರಿಗೆ ಆಡುವ ಅವಕಾಶ ಕಲ್ಪಿಸುವುದೇ ಎಂಬ ಕುತೂಹಲವಿದೆ.

ಸರಣಿಯ ಮೊದಲ 3 ಪಂದ್ಯಗಳಲ್ಲಿ ನಾಯಕ ಶ್ರೇಯಸ್​ ಅಯ್ಯರ್​ ಟಾಸ್​ ಜಯಿಸಿದ್ದು ಕೂಡ ಭಾರತ ತಂಡಕ್ಕೆ ವರದಾನವಾಗಿತ್ತು. ಮೂರೂ ಪಂದ್ಯಗಳಲ್ಲಿ ಭಾರತ ದಿಟ್ಟವಾಗಿಯೇ ಚೇಸಿಂಗ್​ ಮಾಡಿ ಗೆದ್ದಿತ್ತು. ಅದರಲ್ಲೂ ವೆಲ್ಲಿಂಗ್ಟನ್​ನಲ್ಲಿ ನ್ಯೂಜಿಲೆಂಡ್​ನ 199 ರನ್​ ಗುರಿ, ಸವಾಲೇ ಅಲ್ಲ ಎಂಬಂತೆ ಗೆದ್ದು ಬೀಗಿತ್ತು. ಇದೀಗ 4ನೇ ಪಂದ್ಯದಲ್ಲೂ ಭಾರತ ಭರ್ಜರಿ ಬ್ಯಾಟಿಂಗ್​ ನಿರ್ವಹಣೆಯನ್ನು ಮುಂದುವರಿಸುವ ನಿರೀೆ ಇದೆ. ಒಂದು ವೇಳೆ ಸರಣಿಯಲ್ಲಿ ಮೊದಲ ಬಾರಿಗೆ ಮೊದಲು ಬ್ಯಾಟಿಂಗ್​ ಮಾಡುವ ಅವಕಾಶ ಸಿಕ್ಕರೆ ಭಾರತ ಯಾವ ರೀತಿಯಲ್ಲಿ ಆರ್ಭಟಿಸಲಿದೆ ಎಂಬುದು ಕೂಡ ಕೌತುಕ ಮೂಡಿಸಿದೆ.

ಬ್ಯಾಟರ್​ಗಳ ಅಸ್ಥಿರ ನಿರ್ವಹಣೆ ಮತ್ತು ಬೌಲಿಂಗ್​ ವಿಭಾಗದಲ್ಲಿ ಗಾಯದ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್​ ತಂಡ ತವರಿನಲ್ಲೇ ಪರದಾಡುವಂತಾಗಿದೆ. ನಾಯಕ ಮಿಚೆಲ್​ ಸ್ಯಾಂಟ್ನರ್​ ಬಿಗಿ ದಾಳಿಯೊಂದಿಗೆ ವಿಕೆಟ್​ ಕೂಡ ಕಬಳಿಸುತ್ತಿದ್ದರೂ, ಅವರಿಗೆ ಮತ್ತೊಂದೆಡೆಯಿಂದ ಸಮರ್ಥ ಬೆಂಬಲ ಲಭಿಸುತ್ತಿಲ್ಲ. ಇದು ಕಿವೀಸ್​ಗೆ ಪ್ರಮುಖ ಹಿನ್ನಡೆ ಎನಿಸಿದೆ.

ಏಕದಿನ&ಟೆಸ್ಟ್​ ಸರಣಿಗೆ ಮುನ್ನ ಭಾರತ ತಂಡ ಗೆಲುವಿನ ಲಯ ಕಾಯ್ದುಕೊಳ್ಳಲು ಪ್ರಯತ್ನಿಸುವುದು ಖಚಿತ. ಹೀಗಾಗಿ ಕೋಚ್​ ಗೌತಮ್​ ಗಂಭೀರ್​, ಭಾರತದ ಪಾಲಿಗೆ ಔಪಚಾರಿಕ ಎನಿಸಿರುವ ಈ ಪಂದ್ಯದಲ್ಲಿ ಹೆಚ್ಚಿನ ಪ್ರಯೋಗಗಳಿಗೆ ಕೈಹಾಕುವುದು ಅನುಮಾನ. ಆದರೆ ತಂಡದ ಸಂಯೋಜನೆಯಲ್ಲಿ ದೊಡ್ಡ ವ್ಯತ್ಯಾಸ ತರದಂಥ ಕೆಲ ಬದಲಾವಣೆ ನಿರೀಕ್ಷಿಸಲಾಗಿದೆ.

ಇಶಾನ್​ ಕಿಶನ್​ ಲಭ್ಯತೆ ಅಸ್ಪಷ್ಟ

ಸರಣಿಯ ಮೊದಲ ಪಂದ್ಯದ ವೇಳೆ ಗಾಯಗೊಂಡಿದ್ದ ವಿಕೆಟ್​ ಕೀಪರ್​-ಬ್ಯಾಟರ್​ ಇಶಾನ್​ ಕಿಶನ್​ 2 ಮತ್ತು 3ನೇ ಪಂದ್ಯದಿಂದ ಹೊರಗುಳಿದಿದ್ದರು. ಈ ಬಗ್ಗೆ ಟೀಮ್​ ಮ್ಯಾನೇಜ್​ಮೆಂಟ್​ ಪಂದ್ಯಕ್ಕೆ ಮುನ್ನಾದಿನವೇ ತಿಳಿಸಿತ್ತು. ಆದರೆ ಇದೀಗ ನಾಲ್ಕನೇ ಪಂದ್ಯದಲ್ಲಿ ಅವರು ಆಡುವರೇ, ಇಲ್ಲವೇ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಹಂಚಿಕೊಂಡಿಲ್ಲ. ಹೀಗಾಗಿ ಕಿಶನ್​ ಲಭ್ಯತೆಯ ಬಗ್ಗೆ ಗೊಂದಲವಿದೆ. ಅವರು ಮತ್ತೆ ಗೈರಾದರೆ ವೈಭವ್​ ಸೂರ್ಯವಂಶಿ ಆರಂಭಿಕರಾಗಿ ಇನ್ನೊಂದು ಅವಕಾಶ ಪಡೆಯಬಹುದು.

ಟೀಮ್​ ನ್ಯೂಸ್​:

ಭಾರತ: ಟೆಸ್ಟ್​-ಏಕದಿನ ಸರಣಿಗೆ ಪೂರ್ವಭಾವಿಯಾಗಿ ನಿತೀಶ್​ ಕುಮಾರ್​ ರೆಡ್ಡಿಗೆ ವಿಶ್ರಾಂತಿ ನೀಡಿದರೆ, ಶಿವಂ ದುಬೆ 11ರ ಬಳಗಕ್ಕೆ ಮರಳಬಹುದು. ಇಶಾನ್​ ಕಿಶನ್​ ಫಿಟ್​ ಆಗಿ ಮರಳಿದರೆ, ವೈಭವ್​ ಸೂರ್ಯವಂಶಿ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಬೌಲಿಂಗ್​ನಲ್ಲಿ ದುಬಾರಿಯಾಗುತ್ತಿರುವ ಅಕ್ಷರ್​ ಪಟೇಲ್​ ಬದಲಿಗೆ ಕುಲದೀಪ್​ ಅಥವಾ ವರುಣ್​ ಚಕ್ರವರ್ತಿ ಅವಕಾಶ ಪಡೆದರೆ ಅಚ್ಚರಿ ಇಲ್ಲ. ಅರ್ಷದೀಪ್​ಗೆ ವಿಶ್ರಾಂತಿ ನೀಡಿ ಮಯಾಂಕ್​ ಯಾದವ್​ಗೆ ಮತ್ತೆ ಅವಕಾಶ ಕಲ್ಪಿಸುವ ಸಾಧ್ಯತೆಯೂ ಇದೆ.

ನ್ಯೂಜಿಲೆಂಡ್​: ಗಾಯದ ಸಮಸ್ಯೆಯು ಆತಿಥೇಯರ ಬೌಲಿಂಗ್​ ವಿಭಾಗಕ್ಕೆ ಪಂದ್ಯದಿಂದ ಪಂದ್ಯಕ್ಕೆ ಹೊಡೆತ ನೀಡುತ್ತಲೇ ಇದೆ. ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿರುವ ಫಗ್ಯುರ್ಸನ್​ ಬದಲಿಗೆ, ಗಂಟೆಗೆ 140 ಕಿಮೀ ವೇಗದಲ್ಲಿ ಬೌಲಿಂಗ್​ ಮಾಡಬಲ್ಲ ಇನ್ನೋರ್ವ ವೇಗಿ ಮ್ಯಾಟ್​ ಫಿಶರ್​ ಆಡುವ ನಿರೀಕ್ಷೆ ಇದೆ. ಬ್ಲೇರ್​ ಟಿಕ್ನರ್​ ಅಥವಾ ನಾಥನ್​ ಸ್ಮಿತ್​ ಕೂಡ ಕಣಕ್ಕಿಳಿಯಬಹುದು.

*ಆರಂಭ: ಮಧ್ಯಾಹ್ನ 12.30

*ನೇರಪ್ರಸಾರ: ಸೋನಿ ಸ್ಪೋರ್ಟ್ಸ್​, ಸೋನಿ ಲಿವ್​.

ಮತ್ತೆ ರನ್​ಮಳೆ ನಿರೀಕ್ಷೆ

ಈಡನ್​ ಪಾರ್ಕ್​ ಮೈದಾನದ ನೇರ ಬೌಂಡರಿ ಅತ್ಯಂತ ಕಿರಿದಾಗಿದೆ. ಅದು ಐಸಿಸಿಯ ಕನಿಷ್ಠ ಮಾನದಂಡಕ್ಕಿಂತಲೂ (59.43 ಮೀ) ಕಡಿಮೆಯಾಗಿದೆ. ಆದರೆ ಈ ನಿಯಮ ಜಾರಿಗೆ ಬರುವ ಮೊದಲೇ ಇದ್ದ ಮೈದಾನವಾಗಿರುವ ಕಾರಣ ಇದಕ್ಕೆ ವಿನಾಯಿತಿ ಇದೆ. ಹೀಗಾಗಿ ಈ ಬಾರಿ ಮತ್ತೆ ರನ್​ಪ್ರವಾಹ ಹರಿಯುವ ನಿರೀಕ್ಷೆ ಇದೆ. ಸ್ಕ್ವೇರ್​ ಬೌಂಡರಿ ದೊಡ್ಡದಾಗಿರುವುದರಿಂದ ಬೌಲರ್​ಗಳು ಕಾರ್ಯತಂತ್ರಕ್ಕೆ ಬೌಲಿಂಗ್​ ಮಾಡುವುದು ಅಗತ್ಯವೆನಿಸಿದೆ.

*3: ಭಾರತ ತಂಡ ಈಡನ್​ ಪಾರ್ಕ್​ನಲ್ಲಿ ಇದುವರೆಗೆ ಆಡಿರುವ 3 ಟಿ20 ಪಂದ್ಯಗಳಲ್ಲೂ ಗೆದ್ದ ಅಜೇಯ ದಾಖಲೆ ಹೊಂದಿದೆ. ನ್ಯೂಜಿಲೆಂಡ್​ ಇಲ್ಲಿ ಆಡಿರುವ 33 ಟಿ20ಯಲ್ಲಿ 13ರಲ್ಲಿ ಗೆದ್ದು, 19ರಲ್ಲಿ ಸೋತಿದೆ. 1 ಪಂದ್ಯ ರದ್ದಾಗಿದೆ.

*ಸರಣಿಯಿಂದ ಫಗ್ಯುರ್ಸನ್​ ಔಟ್​

ನ್ಯೂಜಿಲೆಂಡ್​ ವೇಗಿ ಲಾಕಿ ಫಗ್ಯುರ್ಸನ್​ ಭಾರತ ವಿರುದ್ಧದ ಟಿ20 ಸರಣಿಯ ಕೊನೇ 2 ಪಂದ್ಯಗಳಿಗೂ ಅಲಭ್ಯರಾಗಿದ್ದಾರೆ. ಅವರು ಸರಣಿಯ 2ನೇ ಪಂದ್ಯದ ವೇಳೆ ಕಾಲಿನ ಹಿಂಭಾಗದ ಸ್ನಾಯುವಿನ ಗಾಯಕ್ಕೊಳಗಾಗಿದ್ದರು. ಅವರ ಬದಲಿಗೆ ಮ್ಯಾಟ್​ ಫಿಶರ್​ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಫಗ್ಯುರ್ಸನ್​ ಜತೆಗೆ ಟಿ20 ಸರಣಿಯಿಂದ ಹೊರಬಿದ್ದಿರುವ ಇನ್ನೋರ್ವ ವೇಗಿ ಮ್ಯಾಟ್​ ಹೆನ್ರಿ, ನ.4ರಿಂದ ನಡೆಯಲಿರುವ ಏಕದಿನ ಸರಣಿಗೆ ಫಿಟ್​ ಆಗುವ ವಿಶ್ವಾಸವನ್ನು ಕಿವೀಸ್​ ಕೋಚ್​ ರಾಬ್​ ವಾಲ್ಟರ್​ ವ್ಯಕ್ತಪಡಿಸಿದ್ದಾರೆ.

*ಸರಣಿಯಲ್ಲಿ ಕ್ಲೀನ್​ಸ್ವೀಪ್​ ಸಾಧಿಸಲು ಉತ್ತಮ ಅವಕಾಶವನ್ನು ಹೊಂದಿದ್ದೇವೆ. ಟಿ20 ಸರಣಿಯ ನಿರ್ವಹಣೆಯ ಗುಣಮಟ್ಟವು ಏಕದಿನ-ಟೆಸ್ಟ್​ ಸರಣಿಗೂ ಉತ್ತಮ ಲಯವನ್ನು ನಿರ್ಮಿಸಿಕೊಡಲಿದೆ ಎಂದು ಕೋಚ್​ ಗಂಭೀರ್​ ಸರ್​ ಈಗಾಗಲೆ ತಿಳಿಸಿದ್ದಾರೆ.

| ತಿಲಕ್​ ವರ್ಮ, ಟಿ20 ತಂಡದ ಉಪನಾಯಕ

ಏಕದಿನ ಸರಣಿಗೆ ಗಿಲ್​ ಸಿದ್ಧತೆ ಆರಂಭ

ನವೆಂಬರ್​ 4ರಿಂದ ಈಡನ್​ ಪಾರ್ಕ್​ನಲ್ಲಿ ನಡೆಯಲಿರುವ ಆತಿಥೇಯ ನ್ಯೂಜಿಲೆಂಡ್​ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಗೆ ಪೂರ್ವಭಾವಿಯಾಗಿ ಭಾರತ ತಂಡದ ನಾಯಕ ಶುಭಮಾನ್​ ಗಿಲ್​ ಗುರುವಾರ, ಟಿ20 ತಂಡದ ನೆಟ್ಸ್​ನಲ್ಲೇ ಅಭ್ಯಾಸ ಆರಂಭಿಸಿದರು. ವಿಕೆಟ್​ ಕೀಪರ್​-ಬ್ಯಾಟರ್​ ಹಾಗೂ ಕನ್ನಡಿಗ ಕೆಎಲ್​ ರಾಹುಲ್​ ಮತ್ತು ವೇಗಿ ಗುರುನೂರ್​ ಬ್ರಾರ್​ ಕೂಡ ಜತೆಗಿದ್ದರು. ಅಭ್ಯಾಸದ ನಡುವೆ ಗಿಲ್​ ತನ್ನ ಆಪ್ತ ಸ್ನೇಹಿತ ಹಾಗೂ ಟಿ20 ತಂಡದ ಆರಂಭಿಕ ಅಭಿಷೇಕ್​ ಶರ್ಮ ಜತೆಗೆ ಮಾತುಕತೆಯನ್ನೂ ನಡೆಸಿದರು.