ಕೊಹ್ಲಿ ಜತೆ ಕಿರಿಕ್​ ಮಾಡಿ ಸುದ್ದಿಯಾಗಿದ್ದ ಸ್ಟಾರ್​ ಕ್ರಿಕೆಟಿಗನಿಗೆ ಏನಾಯ್ತು? ಬೇಗ ಗುಣಮುಖರಾಗಿ ಎಂದ ಫ್ಯಾನ್ಸ್​

Naveen ul Haq
Published on

ನವದೆಹಲಿ: ತಾವು ತುಂಬಾ ಮೆಚ್ಚುವ ಕ್ರಿಕೆಟಿಗರಿಗೆ ಏನಾದರೂ ತೊಂದರೆ ಆದರೆ ಅಭಿಮಾನಿಗಳು ಸ್ವಲ್ಪವೂ ಸಹಿಸುವುದಿಲ್ಲ. ಅಭಿಮಾನಿಗಳು ಕೂಡ ನೋವು ಅನುಭವಿಸುತ್ತಾರೆ. ಬೇಗನೆ ತೊಂದರೆಯಿಂದ ಹೊರಬಂದು ತಮ್ಮ ಆಟದ ಮೂಲಕ ಮನರಂಜನೆ ನೀಡಲೆಂದು ಬಯಸುತ್ತಾರೆ. ಆದರೆ, ಇತರ ದೇಶಗಳಲ್ಲಿ ಕ್ರಿಕೆಟಿಗರ ಮೇಲಿನ ಅಭಿಮಾನ ತುಂಬಾ ಕಡಿಮೆ ಎಂದೇ ಹೇಳಬಹುದು. ಆದರೆ ಭಾರತದಲ್ಲಿ ಮಾತ್ರ ಕ್ರಿಕೆಟಿಗರು ಅದ್ವಿತೀಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇಲ್ಲಿ ಆಟಗಾರರನ್ನು ದೇವರಂತೆ ನೋಡಲಾಗುತ್ತದೆ. ನೆಚ್ಚಿನ ಕ್ರಿಕೆಟಿಗರು ಮಾಡುವ ಎಲ್ಲವನ್ನೂ ಅನುಸರಿಸುತ್ತಾರೆ. ಆಟಗಾರರಿಗೆ ಏನಾದರೂ ಆದರೆ ಚಡಪಡಿಸುತ್ತಾರೆ. ಇತ್ತೀಚೆಗೆ ಕ್ರಿಕೆಟಿಗರೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಅವರು ಗುಣಮುಖರಾಗಲೆಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಅಫ್ಘಾನಿಸ್ತಾನದ ಸ್ಟಾರ್​ ಬೌಲರ್ ನವೀನ್​ ಉಲ್ ಹಕ್, ಬಿರುಸಿನ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಉತ್ತಮ ವೇಗಿ ಎಂಬ ಖ್ಯಾತಿ ಗಳಿಸಿದ್ದಾರೆ. ಅವರು ಅಫ್ಘಾನಿಸ್ತಾನದಲ್ಲಿ ಆಡುವುದಕ್ಕಿಂತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹೆಚ್ಚು ಖ್ಯಾತಿಯನ್ನು ಗಳಿಸಿದರು. ಐಪಿಎಲ್​ನಲ್ಲಿ ಲಖನೌ ತಂಡದ ಪರ ಉತ್ತಮ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಅದರಲ್ಲೂ ಹಿಂದೊಮ್ಮೆ ವಿರಾಟ್​ ಕೊಹ್ಲಿ ಜತೆ ಕಿರಿಕ್​ ಮಾಡಿಕೊಳ್ಳುವ ಮೂಲಕ ನವೀನ್​ ಬಹಳ ಸುದ್ದಿ ಮಾಡಿದ್ದರು. ಅಲ್ಲದೆ, ವಿರಾಟ್​ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದ್ದರು.

ಸದ್ಯ ಗಾಯದಿಂದ ಬಳಲುತ್ತಿರುವ ನವೀನ್​ ಉಲ್​ ಹಕ್​ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವಿಷಯವನ್ನು ಅವರ ಸಹ ಕ್ರಿಕೆಟಿಗ, ಅಫ್ಘಾನಿಸ್ತಾನದ ಟಿ20 ನಾಯಕ ರಶೀದ್ ಖಾನ್ ಬಹಿರಂಗಪಡಿಸಿದ್ದಾರೆ. ನವೀನ್​ ಆಸ್ಪತ್ರೆಯ ಬೆಡ್ ಮೇಲೆ ಇರುವ ಫೋಟೋವನ್ನು ರಶೀದ್, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನವೀನ್​ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಅಲ್ಲದೆ, ಟೆನ್ಶನ್ ಪಡುವ ಅಗತ್ಯವಿಲ್ಲ, ಎಲ್ಲವೂ ಸರಿ ಹೋಗುತ್ತದೆ ಎಂದು ತಮ್ಮ ಪೋಸ್ಟ್​ನಲ್ಲಿ ರಶೀದ್​ ಬರೆದುಕೊಂಡಿದ್ದಾರೆ.

ಅಂದಹಾಗೆ ರಶೀದ್ ಮತ್ತು ನವೀನ್ ನಡುವೆ ಉತ್ತಮ ಬಾಂಧವ್ಯವಿದೆ. ಇದು ಅಫ್ಘಾನ್ ಪಂದ್ಯಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಇದೀಗ ತಮ್ಮ ಸ್ನೇಹಿತ ಆಸ್ಪತ್ರೆಯಲ್ಲಿರುವುದರಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಕ್ರಿಕೆಟ್ ಪ್ರೇಮಿಗಳು ಸಹ ನವೀನ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಅಂದಹಾಗೆ ನವೀನ್ 2023 ಸೆಪ್ಟೆಂಬರ್ 27ರಂದು ಏಕದಿನ ಪಂದ್ಯಗಳಿಂದ ನಿವೃತ್ತರಾದರು. ಆದರೆ, ಟಿ20ಯಲ್ಲಿ ಮುಂದುವರಿಯುತ್ತಿದ್ದಾರೆ. ಇತ್ತೀಚೆಗೆ ನಡೆದ ಕಿರು ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಪರ ಆಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net