

ಬೆಂಗಳೂರು: ಪ್ರತಿಷ್ಠಿತ ವಿಪ್ರೋ ಬೆಂಗಳೂರು ಮ್ಯಾರಥಾನ್ ಅಕ್ಟೋಬರ್ 6ರ ಭಾನುವಾರದಂದು ಆಯೋಜನೆಗೊಂಡಿದೆ. ಈ ವರ್ಷ ಮ್ಯಾರಥಾನ್ನಲ್ಲಿ 30,000ಕ್ಕೂ ಹೆಚ್ಚು ಓಟಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಂಠೀರವ ಸ್ಟೇಡಿಯಂನಿಂದ ಓಟ ಆರಂಭಗೊಳ್ಳಲಿದ್ದು, ನಗರದ ಪ್ರಮುಖ ಸ್ಥಳಗಳಾದ ಎಂ.ಜಿ.ರಸ್ತೆ, ವಿಧಾನಸೌಧ, ಕಬ್ಬನ್ ಪಾರ್ಕ್ ಮೂಲಕ ಸಂಚರಿಸಲಿದೆ.
ಇದು ವಿಪ್ರೋ ಬೆಂಗಳೂರು ಮ್ಯಾರಥಾನ್ನ 11ನೇ ಆವೃತ್ತಿಯಾಗಿದ್ದು, ಇದನ್ನು ವಿಪ್ರೋ ಕಂಪನಿ ಪ್ರಾಯೋಜಿಸಿದೆ. 42.195 ಕಿ.ಮೀ. ಫುಲ್ ಮ್ಯಾರಥಾನ್, 21.1 ಕಿ.ಮೀ. ಹಾಫ್ ಮ್ಯಾರಥಾನ್ ಹಾಗೂ 5ಕೆ ಹೋಪ್ ರನ್ ವಿಭಾಗದಲ್ಲಿ ಸ್ಪರ್ಧೆಗಳಿವೆ. ಎಐಎಂಎಸ್ (ಅಸೋಸಿಯೇಷನ್ ಆಫ್ ಇಂಟರ್ನ್ಯಾಷನಲ್ ಮ್ಯಾರಥಾನ್) ಮಾನ್ಯತೆ ಹೊಂದಿರುವ ಈ ಮ್ಯಾರಥಾನ್ನಲ್ಲಿ ಎಲ್ಲಾ ವಯೋಮಿತಿ, ವರ್ಗದ ಜನರಿಗೆ ಭಾಗವಹಿಸಲು ಅವಕಾಶವಿದೆ.
ವಿಪ್ರೋ ಬೆಂಗಳೂರು ಮ್ಯಾರಥಾನ್ ಮೂಲಕ ಅವಕಾಶವಂಚಿತ ಹಾಗೂ ದುರ್ಬಲ ವರ್ಗದ ಮಕ್ಕಳ ಶಿಕ್ಷಣ ಸೇರಿದಂತೆ ಅವರ ಸರ್ವತೋಮುಖ ಏಳ್ಗೆಗೆ ನೆರವು ನೀಡಲಾಗುತ್ತದೆ. ಅನನ್ಯ ಟ್ರಸ್ಟ್, ಸ್ನೇಹಗ್ರಾಮ, ಪಾಸಿಟಿವ್ ರನ್ನಿಂಗ್ ಪ್ರೋಗ್ರಾಂ, ತಾಯಿ ಮನೆ, ಮಾತೃಭೂಮಿ, ಥುಲಿರ್ ಸೃಷ್ಟಿ ಸ್ಪೆಷಲ್ ಅಕಾಡೆಮಿ, ಸೂರ್ಯೋದಯ ಬಾಯ್ಸ್ ಸೆಂಟರ್, ಟ್ರಾಂಕ್ವಿಲ್ ಚಾರಿಟೇಬಲ್ ಫೌಂಡೇಶನ್ ಹಾಗೂ ಬೆಂಗಳೂರು ಸ್ಕೂಲ್ಸ್ ಸ್ಪೋರ್ಟ್ಸ್ ಫೌಂಡೇಶನ್ ಸಂಸ್ಥೆಗಳು ಇದರಲ್ಲಿ ಕೈಜೋಡಿಸಿವೆ.
ರೇಸ್ ಡೈರೆಕ್ಟರ್ ನಾಗರಾಜ ಅಡಿಗ ಮಾತನಾಡಿ, `ಈ ವರ್ಷ ವಿಪ್ರೋ ಬೆಂಗಳೂರು ಮ್ಯಾರಥಾನ್ನಲ್ಲಿ ವಿವಿಧ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ನಿಧಿ ಸಂಗ್ರಹಿಸಲು 10ಕೆ ಓಟದ ವಿಭಾಗ ಸೇರ್ಪಡೆ ಮಾಡಿದ್ದೇವೆ’ ಎಂದು ಹೇಳಿದರು. ಕಾರ್ಯಕ್ರಮದ ರಾಯಭಾರಿ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತೆ ಡಾ.ರೀತ್ ಅಬ್ರಹಾಂ, `ಬೆಂಗಳೂರು ಮ್ಯಾರಥಾನ್ನ ಭಾಗವಾಗಲು ನನಗೆ ಸಂತೋಷವಾಗುತ್ತಿದೆ’ ಎಂದರು. ವಿಪ್ರೋದ ಚೀಫ್ ಎಚ್ಆರ್ ಅಧಿಕಾರಿ ಸೌರಭ್ ಗೋವಿಲ್ ಮಾತನಾಡಿ, `ಸತತ ಎರಡನೇ ವರ್ಷ ಬೆಂಗಳೂರು ಮ್ಯಾರಥಾನ್ಗೆ ಪ್ರಾಯೋಜಕತ್ವ ನೀಡುತ್ತಿದ್ದೇವೆ. ಆರೋಗ್ಯಕರ ಜೀವನಶೈಲಿಗೆ ಪ್ರೋತ್ಸಾಹ ನೀಡುವ ನಮ್ಮ ಸಂಸ್ಥೆಯ ಮೌಲ್ಯವನ್ನು ಈ ಓಟ ಎತ್ತಿ ಹಿಡಿಯುತ್ತಿದೆ’ ಎಂದು ಹೇಳಿದರು.
ಬೆಂಗಳೂರು ಮ್ಯಾರಥಾನ್ ಜೊತೆಗೇ ವಿಪ್ರೋ ಕಂಪನಿ 18ನೇ ಆವೃತ್ತಿಯ ತನ್ನ ವಾರ್ಷಿಕ `ಸ್ಪಿರಿಟ್ ಆಫ್ ವಿಪ್ರೋ ರನ್’ ಓಟ ಕೂಡ ಆಯೋಜಿಸಿದೆ. ಅದರಲ್ಲಿ ಕಂಪನಿಯ ಉದ್ಯೋಗಿಗಳು ಹಾಗೂ ಅವರ ಕುಟುಂಬದವರು ಭಾಗವಹಿಸಲಿದ್ದಾರೆ.
ಬೆಂಗಳೂರು ಮ್ಯಾರಥಾನ್ನ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಗೃಹ ಸಚಿವ ಜಿ.ಪರಮೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್, ಪುಲ್ಲೇಲ ಗೋಪಿಚಂದ್, ಮಾಜಿ ಕ್ರೀಡಾಪಟು ಅಶ್ವಿನಿ ನಾಚಪ್ಪ ಹಾಗೂ ಅಂಜು ಬಾಬಿ ಜಾರ್ಜ್ ಪಾಲ್ಗೊಳ್ಳಲಿದ್ದಾರೆ. ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಅಕ್ಟೋಬರ್ 6ರ ಭಾನುವಾರ ಬೆಳಗ್ಗೆ 4 ಗಂಟೆಗೆ ಮ್ಯಾರಥಾನ್ ಉದ್ಘಾಟನೆಗೊಳ್ಳಲಿದೆ. ಬೆಳಗ್ಗೆ 6.20ಕ್ಕೆ ಹಾಫ್ ಮ್ಯಾರಥಾನ್, ಬೆಳಗ್ಗೆ 7.45ಕ್ಕೆ 10ಕೆ ಓಟ ಹಾಗೂ ಬೆಳಗ್ಗೆ 8.50ಕ್ಕೆ 5ಕೆ ಓಟ ಆರಂಭಗೊಳ್ಳಲಿದೆ.