ವಿಮಾನ ಮಿಸ್ ಮಾಡಿಕೊಂಡು ಸಿಪಿಎಲ್‌ನಿಂದ ಹೊರಬಿದ್ದ ವಿಂಡೀಸ್ ಕ್ರಿಕೆಟಿಗ!

Fabian Allen Ruled Out of CPL
Published on

ಪೋರ್ಟ್ ಆಫ್​ ಸ್ಪೇನ್: ಕರೊನಾ ವೈರಸ್ ಹಾವಳಿಯ ನಡುವೆ ವೆಸ್ಟ್ ಇಂಡೀಸ್‌ನಲ್ಲಿ ಪ್ರತಿಷ್ಠಿತ ಟಿ20 ಟೂರ್ನಿ ಕೆರಿಬಿಯನ್ ಪ್ರೀಮಿಯರ್ ಲೀಗ್‌ಗೆ (ಸಿಪಿಎಲ್) ವೇದಿಕೆ ಸಜ್ಜಾಗುತ್ತಿದೆ. ಆದರೆ ಆಲ್ರೌಂಡರ್ ಫ್ಯಾಬಿಯನ್ ಅಲೆನ್ ಅವರೀಗ ವಿಶಿಷ್ಟ ಕಾರಣದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಗಾಯದ ಸಮಸ್ಯೆಯಾಗಲಿ, ಕರೊನಾ ವೈರಸ್ ಅಥವಾ ಬೇರಾವುದೇ ಸಮಸ್ಯೆಗಳಿಲ್ಲದೆ ಫಿಟ್ ಆಗಿರುವ ಹೊರತಾಗಿಯೂ ಅಲೆನ್ ಟೂರ್ನಿಯಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ.

ಕಳೆದ ತಿಂಗಳು ನಡೆದ ಆಟಗಾರರ ಡ್ರ್‌ಟಾನಲ್ಲಿ ಅಲೆನ್, ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪ್ಯಾಟ್ರಿಯಾಟ್ಸ್ ತಂಡದ ಪರ ಉಳಿದುಕೊಂಡಿದ್ದರು. ಆದರೆ ಆಗಸ್ಟ್ 3ರಂದು ಅವರು, ಟೂರ್ನಿ ನಡೆಯಲಿರುವ ಟ್ರಿನಿಡಾಡ್‌ಗೆ ಪ್ರಯಾಣಿಸುವ ಮುನ್ನ ಬಾರ್ಬಡೋಸ್‌ಗೆ ವಿಮಾನ ಪ್ರಯಾಣ ಮಿಸ್ ಮಾಡಿಕೊಂಡಿದ್ದರು. ತಡವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಾರಣ ಅವರು ವಿಮಾನವನ್ನು ಮಿಸ್ ಮಾಡಿಕೊಂಡಿದ್ದರು. ಈ ಕಾರಣದಿಂದಾಗಿ ಅವರು ಈಗ ಟೂರ್ನಿಯಲ್ಲಿ ಆಡುವ ಅವಕಾಶವನ್ನೇ ಮಿಸ್ ಮಾಡಿಕೊಂಡಿದ್ದಾರೆ.

‘ವಿಮಾನದ ಮಾಹಿತಿ ಬಗೆಗಿನ ಗೊಂದಲದಿಂದಾಗಿ ಅಲೆನ್ ಸರಿಯಾದ ಸಮಯದಲ್ಲಿ ವಿಮಾನ ನಿಲ್ದಾಣಕ್ಕೆ ತಲುಪಿರಲಿಲ್ಲ. ಆದರೆ ಕರೊನಾ ವೈರಸ್ ಹಾವಳಿಯಿಂದಾಗಿ ಅವರು ಇನ್ನು ಟ್ರಿನಿಡಾಡ್ ತಲುಪಲು ಸಾಧ್ಯವಿಲ್ಲ. ಇನ್ನು ಅವರು ಬಾಡಿಗೆ ವಿಮಾನದ ಮೂಲಕ ಮಾತ್ರ ಟ್ರಿನಿಡಾಡ್ ತಲುಪಬಹುದಾಗಿದೆ’ ಎಂದು ಅಲೆನ್ ಅವರ ಏಜೆಂಟ್ ತಿಳಿಸಿದ್ದಾರೆ. ಸಿಪಿಎಲ್ ಟೂರ್ನಿ ಆಗಸ್ಟ್ 18ರಂದು ಆರಂಭವಾಗಲಿದ್ದು, ಸೆಪ್ಟೆಂಬರ್ 10ರವರೆಗೆ ಸಾಗಲಿದೆ.

ಸಿಪಿಎಲ್‌ನಲ್ಲಿ ಪಾಲ್ಗೊಳ್ಳುವ 162 ಮಂದಿ ಕರೊನಾ ನೆಗೆಟಿವ್

ಸಿಪಿಎಲ್ ಭಾಗವಹಿಸಲು ಟ್ರಿನಿಡಾಡ್ ಹಾಗೂ ಟೊಬ್ಯಾಗೊಗೆ ಪ್ರಯಾಣ ಬೆಳೆಸಿದ ಆಟಗಾರರು, ಸಹಾಯಕ ಸಿಬ್ಬಂದಿ, ಪಂದ್ಯದ ಅಧಿಕಾರಿಗಳು, ಆಡಳಿತಗಾರರು ಒಳಗೊಂಡಂತೆ 162 ಮಂದಿಯ ಕೋವಿಡ್-19 ವರದಿ ನೆಗೆಟಿವ್ ಬಂದಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಶಿಷ್ಟಾಚಾರ ಪಾಲನೆ ಹಿನ್ನೆಲೆಯಲ್ಲಿ 3 ಆಟಗಾರರು ಹಾಗೂ ಒಬ್ಬ ಕೋಚ್ ಪ್ರಯಾಣ ಬೆಳೆಸುತ್ತಿಲ್ಲ ಎನ್ನಲಾಗಿದೆ.

ಪ್ರಯಾಣಕ್ಕೂ 72 ಗಂಟೆಗೂ ಮುನ್ನ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಜಮೈಕಾ ಮೂಲದ ಒಬ್ಬ ಆಟಗಾರನಿಗೆ ಕೋವಿಡ್-19 ದೃಢಪಟ್ಟಿತ್ತು. ಆತನೊಂದಿಗೆ ಆಡಿದ್ದ ಇತರ ಇಬ್ಬರು ಆಟಗಾರರು ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಆಸ್ಟ್ರೇಲಿಯಾ ಮೂಲದ ಕೋಚ್‌ಗೂ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸಿಪಿಎಲ್‌ನಲ್ಲಿ ಭಾಗವಹಿಸುತ್ತಿಲ್ಲ. ಇದೀಗ 162 ಮಂದಿಯನ್ನು 14 ದಿನಗಳ ಕಾಲ ಕ್ವಾರಂಟೈನ್‌ಗೆ ಇಡಲಾಗಿದ್ದು, ಹಂತ ಹಂತವಾಗಿ ಕೋವಿಡ್-19 ಪರೀಕ್ಷೆ ನಡೆಸಲಾಗುವುದು. ಈ ವೇಳೆ ಪಾಸಿಟಿವ್ ಕಂಡು ಬಂದ ಆಟಗಾರರನ್ನು ತಂಡದಿಂದ ಕೈಬಿಡಲಾಗುವುದು ಎಂದು ಸಿಪಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net