ಕಿವೀಸ್ ನಾಯಕತ್ವಕ್ಕೆ ವಿಲಿಯಮ್ಸನ್ ಗುಡ್‌ಬೈ

New-Project-1-7
Published on

ಕ್ರೈಸ್ಟ್‌ಚರ್ಚ್: ನ್ಯೂಜಿಲೆಂಡ್ ತಂಡದ ಯಶಸ್ವಿ ನಾಯಕ ಎನಿಸಿರುವ ಕೇನ್ ವಿಲಿಯಮ್ಸನ್ ಸೀಮಿತ ಮಾದರಿಯ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಜತೆಗೆ 2024-25 ವಾರ್ಷಿಕ ಗುತ್ತಿಗೆಯನ್ನು ನಿರಾಕರಿಸಿ ಅಚ್ಚರಿ ಮೂಡಿಸಿದ್ದಾರೆ. ಇದರೊಂದಿಗೆ ವಿಲಿಯಮ್ಸನ್ ಎಲ್ಲ ಮಾದರಿಯ ನಾಯಕತ್ವಕ್ಕೆ ಗುಡ್‌ಬೈ ಹೇಳಿದಂತಾಗಿದೆ. 2022ರಲ್ಲಿ ಟೆಸ್ಟ್ ನಾಯಕತ್ವ ತೊರೆದಿದ್ದರು.

ಟಿ20 ವಿಶ್ವಕಪ್‌ನ ಲೀಗ್ ಹಂತದಲ್ಲಿ ತಂಡ ನಿರ್ಗಮಿಸಿದ ಬೆನ್ನಲ್ಲೇ 33 ವರ್ಷದ ವಿಲಿಯಮ್ಸನ್ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದು, ಮೂರೂ ಪ್ರಕಾರದ ರಾಷ್ಟ್ರೀಯ ತಂಡದ ಸೇವೆಗೆ ತಾನಿನ್ನೂ ಬದ್ಧನಾಗಿದ್ದೇನೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿದೇಶಿ ಟಿ20 ಲೀಗ್‌ಗಳತ್ತ ಗಮನಹರಿಸಲು ಗುತ್ತಿಗೆ ಪಟ್ಟಿಯಿಂದ ಹೊರಗುಳಿದಿದ್ದಾರೆ ಎನ್ನಲಾಗಿದ್ದು, ನ್ಯೂಜಿಲೆಂಡ್ ತಂಡದ ಗುತ್ತಿಗೆ ಪಡೆದವರು ರಾಷ್ಟ್ರೀಯ ತಂಡ ಹಾಗೂ ದೇಶೀಯ ಟೂರ್ನಿಗಳಲ್ಲಿಯೂ ಆಡಬೇಕು. ಆದರೆ ವಿದೇಶಿ ಟಿ20 ಲೀಗ್ ಹಾಗೂ ದೇಶೀಯ ಟೂರ್ನಿ ಒಂದೇ ಸಮಯದಲ್ಲಿ ನಡೆಯುವುದರಿಂದ ವಿಲಿಯಮ್ಸನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ವಿಲಿಯಮ್ಸನ್ ಕಿವೀಸ್ ಪರ, 100 ಟೆಸ್ಟ್, 165 ಏಕದಿನ ಹಾಗೂ 93 ಟಿ20 ಪಂದ್ಯಗಳನ್ನಾಡಿದ್ದು, 40 ಟೆಸ್ಟ್, 91 ಏಕದಿನ ಹಾಗೂ 75 ಟಿ20ಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. 2015 ಹಾಗೂ 2019 ಏಕದಿನ ವಿಶ್ವಕಪ್, 2021 ಟಿ20 ವಿಶ್ವಕಪ್ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ತಂಡವನ್ನು ೈನಲ್‌ಗೆ ಮುನ್ನಡೆಸಿದ್ದಾರೆ.

‘ನ್ಯೂಜಿಲೆಂಡ್‌ಗಾಗಿ ಆಡುವುದು ಯಾವಾಗಲೂ ಮೌಲ್ಯಯುತವಾಗಿದೆ. ತಂಡಕ್ಕೆ ಮರಳಿ ಕೊಡುಗೆ ನೀಡುವ ಬಯಕೆ ಇನ್ನೂ ಕಡಿಮೆಯಾಗಿಲ್ಲ. ಆದರೆ ಕ್ರಿಕೆಟ್ ಹೊರತಾದ ಜೀವನ ಬದಲಾಗಿದೆ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವುದರ ಜತೆಗೆ ವಿದೇಶಿ ಲೀಗ್‌ಗಳ ಅನುಭವಗಳನ್ನು ಆನಂದಿಸುವುದು ಮುಖ್ಯವಾಗಿದೆ’ ಎಂದು ವಿಲಿಯಮ್ಸನ್ ತಿಳಿಸಿದ್ದಾರೆ. ವಿಲಿಯಮ್ಸನ್ ಹೊರತಾಗಿ ವೇಗಿ ಲಾಕಿ ರ್ಗ್ಯುಸನ್ ಸಹ ಕೇಂದ್ರ ಗುತ್ತಿಗೆ ಸಹಿ ಹಾಕಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಜುಲೈನಲ್ಲಿ ಅಂತಿಮ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net