

ನವದೆಹಲಿ: ಐಪಿಎಲ್ 2025ರ 18ನೇ ಆವೃತ್ತಿ (IPL) ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಲೆಕ್ಕಾಚಾರಗಳು ಭುಗಿಲೆದ್ದಿವೆ. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಯಾರು ಈಗಿರುವ ತಮ್ಮ ತಂಡದಿಂದ ಹೊರನಡೆಯಲಿದ್ದಾರೆ? ಯಾರನ್ನು ಫ್ರಾಂಚೈಸಿ ಉಳಿಸಿಕೊಳ್ಳಲಿದೆ ಎಂಬ ಪ್ರಶ್ನೆ ಅನೇಕರಲ್ಲಿ ಕಾಡುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚಿನ ವರದಿಗಳು ಕೂಡ ಜಾಲತಾಣಗಳಲ್ಲಿ ಹರಿದಾಡಿದ್ದು, ಕ್ರಿಕೆಟ್ ಪ್ರಿಯರಲ್ಲಿ ಬಹುತೇಕ ಖಚಿತ ಎನ್ನುವಂತೆ ಮಾಡಿತ್ತು. ಆದರೆ, ಇದೀಗ ಅಧಿಕೃತವಾಗಿ ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ವಿರಾಟ್ ಕೊಹ್ಲಿಯನ್ನು ಆರ್ಸಿಬಿ 21 ಕೋಟಿ ರೂ.ಗೆ ರಿಟೈನ್ ಮಾಡಿಕೊಂಡಿದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ
ಒಂದೆಡೆ 21 ಕೋಟಿ ರೂ.ಗೆ ವಿರಾಟ್ ಕೊಹ್ಲಿಯನ್ನು ಆರ್ಸಿಬಿ ಉಳಿಸಿಕೊಂಡರೆ, ಹೆನ್ರಿಕ್ ಕ್ಲಾಸೆನ್ 23 ಕೋಟಿ ರೂ.ಗೆ ಉಳಿದುಕೊಳ್ಳುವ ಮುಖೇನ ಐಪಿಎಲ್ ರಿಟೆನ್ಶನ್ನಲ್ಲಿ ಹೊಸ ದಾಖಲೆಯನ್ನೇ ಬರೆದಿದ್ದಾರೆ. ಇದರೊಟ್ಟಿಗೆ ಮೂರು ಫ್ರಾಂಚೈಸಿಯ ಕ್ಯಾಪ್ಟನ್ಗಳು ತಮ್ಮ ತಂಡದಿಂದ ಹೊರಬಿದ್ದಿದ್ದಾರೆ. ಲಖನೌ ಸೂಪರ್ ಜೈಂಟ್ಸ್ನಿಂದ ಕೆ.ಎಲ್. ರಾಹುಲ್, ಕೆಕೆಆರ್ ತಂಡದಿಂದ ಶ್ರೇಯಸ್ ಅಯ್ಯರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ನಿಂದ ರಿಷಭ್ ಪಂತ್ ಹೊರಗುಳಿದಿದ್ದಾರೆ. ಇದೀಗ ಈ ಮೂವರ ಮೇಲೆ 7 ಫ್ರಾಂಚೈಸಿಗಳ ಕಣ್ಣು ಬಿದ್ದಿದ್ದು, ಯಾರು ಯಾವ ತಂಡದ ಪಾಲಾಗಲಿದ್ದಾರೆ ಎಂಬುದನ್ನು ಸದ್ಯ ಕಾದು ನೋಡಬೇಕು. ಅದರಲ್ಲಿ ಒಬ್ಬರ ಹೆಸರು ಈಗಾಗಲೇ ಐದು ಬಾರಿ ಚಾಂಪಿಯನ್ಸ್ ಆಗಿರುವ ಸಿಎಸ್ಕೆ ಪಟ್ಟಿಯಲ್ಲಿ ಮೊದಲಿಗಿದೆ.
ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಅತ್ಯಂತ ಯಶಸ್ವಿ ಐಪಿಎಲ್ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಟೀಮ್ ಮ್ಯಾನೇಜ್ಮೆಂಟ್ ಐಪಿಎಲ್ ರಿಟೆನ್ಶನ್ ಪ್ರಕ್ರಿಯೆಗೂ ಮುನ್ನವೇ ರಿಷಭ್ ಪಂತ್ರನ್ನು ಆಯ್ಕೆ ಮಾಡಿಕೊಂಡಿತ್ತು. ವಿಕೆಟ್ ಕೀಪರ್ ಹಾಗೂ ಉತ್ತಮ ಬ್ಯಾಟರ್ ಆಗಿರುವ ರಿಷಭ್, ಒಬ್ಬ ಅತ್ಯುತ್ತಮ ಟಿ20 ಸ್ಪೆಷಲಿಸ್ಟ್ ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿರುವ ಸಂಗತಿಯೇ. ಇದೇ ಅಂಶವನ್ನು ಟಾರ್ಗೆಟ್ ಮಾಡಿಕೊಂಡಿರುವ ಸಿಎಸ್ಕೆ, ಹರಾಜಿನಲ್ಲಿ ತಮ್ಮ ತಂಡಕ್ಕೆ ಪಂತ್ ಬಂದರೆ ಉತ್ತಮ ಎಂದು ನಿರ್ಧರಿಸಿದೆ. ಇದಕ್ಕೆ ರಿಟೆನ್ಶನ್ ಅಡ್ಡಿಯಾಗಿತ್ತು. ಆದರೆ, ಇದೀಗ ಅದೆಲ್ಲವೂ ತಿಳಿಯಾಗಿದೆ. ಹೀಗಾಗಿ ಆಕ್ಷನ್ನಲ್ಲಿ ಸಿಎಸ್ಕೆಯ ಮೊದಲ ಆಯ್ಕೆ ರಿಷಭ್ ಪಂತ್ ಎಂಬುದು ಬಹುತೇಕ ಖಚಿತವಾಗಿದೆ,(ಏಜೆನ್ಸೀಸ್).