

ಚೆನ್ನೈ: ಮುಂದಿನ ಕೆಲವೇ ದಿನಗಳಲ್ಲಿ ಶುರುವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ತಂಡವನ್ನು ಘೋಷಿಸಿದ್ದು, ಟೂರ್ನಿಗೆ ಈಗಾಗಲೇ ತಯಾರಿಯನ್ನು ಆರಂಭಿಸಿವೆ. ಇನ್ನೂ ಭಾರತ ತಂಡದ ವಿಚಾರಕ್ಕೆ ಬರುವುದಾದರೆ ಮೊಹಮ್ಮದ್ ಶಮಿ ಹೊರತುಪಡಿಸಿ ಟಿ20 ವಿಶ್ವಕಪ್ನಲ್ಲಿ ಆಡಿದ್ದ ತಂಡವನ್ನು ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಲಾಗಿದ್ದು, ಅಚ್ಚರಿ ಎಂಬಂತೆ ಶುಭಮನ್ ಗಿಲ್ಗೆ (Shubman Gill) ಉಪನಾಯಕತ್ವ ನೀಡಲಾಗಿದೆ.
ತಮ್ಮ ಚಾಣಾಕ್ಷ ಆಟದಿಂದಲೇ ಹೆಸರುವಾಸಿಯಾಗಿರುವ ಶುಭಮನ್ ಗಿಲ್ (Shubman Gill) ರಾಷ್ಟ್ರೀಯ ತಂಡದಲ್ಲಿ ಈಗಾಗಲೇ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದು, ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಈ ಮೊದಲು ಹಾರ್ದಿಕ್ ಪಾಂಡ್ಯಗೆ ಉಪನಾಯಕತ್ವ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಶುಭಮನ್ ಗಿಲ್ಗೆ ಉಪನಾಯಕತ್ವ ನೀಡಿರುವ ವಿಚಾರ ಹೊಸ ಚರ್ಚೆಯನ್ನ ಹುಟ್ಟುಹಾಕಿದ್ದು, ಪರ-ವಿರೋಧಕ್ಕೆ ಕಾರಣವಾಗಿದೆ. ಇದೀಗ ಈ ವಿಚಾರದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಸ್ಟಾರ್ ಆಟಗಾರ ಆರ್. ಅಶ್ವಿನ್ ಮಾತನಾಡಿದ್ದು, ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಒಂದನ್ನುಹಂಚಿಕೊಂಡಿರುವ ಅಶ್ವಿನ್, ಈಗ ಚಾಂಪಿಯನ್ಸ್ ಟ್ರೋಫಿಗೆ ಪ್ರಕಟಿಸಿರುವ ತಂಡವನ್ನು ನೋಡುವುದಾದರೆ ಯಾರಿಗೆ ಉಪನಾಯಕತ್ವವನ್ನು ನೀಡಬೇಕಿತ್ತು ಎಂಬುದುದೊಡ್ಡ ಚರ್ಚೆಯಾಗಿದೆ. ಶುಭಮನ್ ಗಿಲ್ಗೆ( Shubman Gill) ಉಪನಾಯಕತ್ವ ನೀಡಿರುವ ವಿಚಾರವನ್ನು ನಾನು ಸರಿ ಅಥವಾ ತಪ್ಪು ಎಂದು ಹೇಳುತ್ತಿಲ್ಲ. ಆದರೆ, ಕಳೆದ ಸರಣಿಯಲ್ಲಿ ಗಿಲ್ ಉಪನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೂ ಅವರನ್ನೇ ಮುಂದುವರೆಸಲಾಗಿದೆ.
ಭವಿಷ್ಯದ ದೃಷ್ಟಿಯಿಂದ ಶುಭಮನ್ ಗಿಲ್ಗೆ (Shubman Gill) ಉಪನಾಯಕತ್ವ ನೀಡಿರುವುದು ನನ್ನ ಪ್ರಕಾರ ಸರಿಯಾದ ಅಂಶ. ಇದರೊಟ್ಟಿಗೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಅಕ್ಷರ್ ಪಟೇಲ್ರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಇನ್ನೂ ಆಡುವ ಹನ್ನೊಂದರ ಬಳಗಕ್ಕೆ ಬಂದರೆ ಅಕ್ಷರ್ ಹಾಗೂ ಜಡೇಜಾ ನಡುವೆ ತೀವ್ರ ಪೈಪೋಟಿ ಇದೆ. ಹಾಗೆಯೇ ರಿಷಭ್ ಪಂತ್ ಹಾಗೂ ರಾಹುಲ್ ಪೈಕಿ ಯಾರು ವಿಕೆಟ್ ಕೀಪಿಂಗ್ ಮಾಡಲಿದ್ದಾರೆ ಎಂಬುದು ಕೂಡ ದೊಡ್ಡ ಪ್ರಶ್ನೆಯಾಗಿದೆ. ಹೀಗಾಗಿ ಆಡುವ 11ರ ಬಳಗದಲ್ಲಿ ಕಾಯಂ ಸ್ಥಾನ ಪಡೆಯುವ ಆಟಗಾರನಿಗೆ ಉಪನಾಯಕತ್ವವನ್ನು ನೀಡಲಾಗಿದೆ.
ಭವಿಷ್ಯದಲ್ಲಿ ಶುಭಮನ್ ಗಿಲ್ಗೆ (Shubman Gill) ತಂಡದ ನಾಯಕನಾಗಿ ಅಧಿಕಾರ ವಹಿಸಿಕೊಂಡರೆ ಆತನಿಗೆ ವಿರಾಟ್ ಹಾಗೂ ಬುಮ್ರಾ ಸರಿಯಾದ ಮಾರ್ಗದರ್ಶನ ನೀಡಲಿದ್ದಾರೆ. ಅಂತಿಮವಾಗಿ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುದನ್ನು ನಾವೆಲ್ಲರೂ ಎದುರುನೋಡಬೇಕಿದೆ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಆರ್. ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಅಭಿಪ್ರಾಯಪಟ್ಟಿದ್ದಾರೆ.