

ನವದೆಹಲಿ: ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯೊಂದಿಗೆ ಭಾರತೀಯ ಕ್ರಿಕೆಟ್ ಇತಿಹಾಸದ ಅದ್ಭುತ ಯುಗವೊಂದು ಮುಕ್ತಾಯಗೊಂಡಿದೆ. ಇದರ ಜತೆಜತೆಯಲ್ಲೇ ಧೋನಿ ಅವರ ಬ್ರ್ಯಾಂಡ್ ಆಗಿದ್ದ 7ನೇ ನಂಬರ್ ಜೆರ್ಸಿ ಕೂಡ ಟೀಮ್ ಇಂಡಿಯಾದಿಂದ ನಿವೃತ್ತಿ ಹೊಂದುವ ನಿರೀಕ್ಷೆ ಮೂಡಿದೆ. ಧೋನಿ ಅಭಿಮಾನಿಗಳಿಂದ ಈಗಾಗಲೆ ಈ ಬಗ್ಗೆ ಬೇಡಿಕೆಗಳು ಕೇಳಿಬಂದಿದ್ದು, ಬಿಸಿಸಿಐ ಇದಕ್ಕೆ ಸಮ್ಮತಿಸುವ ಸಾಧ್ಯತೆಯೂ ಹೆಚ್ಚಿದೆ.
ಧೋನಿ ಅವರ ಸಮಕಾಲೀಕ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಭಾನುವಾರ ಟ್ವಿಟರ್‌ನಲ್ಲಿ ಮೊದಲಿಗರಾಗಿ 7ನೇ ನಂಬರ್ ಜೆರ್ಸಿಯ ನಿವೃತ್ತಿಗೆ ಧ್ವನಿ ಎತ್ತಿದ್ದಾರೆ. ಕಳೆದ ವರ್ಷದ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಧೋನಿ ಜತೆಗೆ ಕ್ಲಿಕ್ಕಿಸಿಕೊಂಡಿರುವ ಚಿತ್ರ ಪ್ರಕಟಿಸಿರುವ ದಿನೇಶ್ ಕಾರ್ತಿಕ್, ‘ಇದು ಧೋನಿ ಜತೆಗೆ ನಾನು ತೆಗೆಸಿಕೊಂಡಿರುವ ಕೊನೆಯ ಚಿತ್ರ. ಈ ಜರ್ನಿಯ ವೇಳೆ ಹಲವಾರು ಶ್ರೇಷ್ಠ ನೆನಪುಗಳಿವೆ. ವೈಟ್‌ಬಾಲ್ ಕ್ರಿಕೆಟ್‌ನಿಂದ 7ನೇ ನಂ. ಜೆರ್ಸಿಯನ್ನು ಬಿಸಿಸಿಐ ನಿವೃತ್ತಿಗೊಳಿಸುತ್ತದೆ ಎಂಬ ಭರವಸೆಯಲ್ಲಿದ್ದೇನೆ’ ಎಂದು ಟ್ವೀಟಿಸಿದ್ದಾರೆ.
ಧೋನಿಗೆ ಮುನ್ನವೇ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದರು. ಆದರೆ 2004ರಲ್ಲಿ ಧೋನಿ ಎಂಟ್ರಿಯಾದ ಬಳಿಕ ದಿನೇಶ್ ಕಾರ್ತಿಕ್ ಬಹುತೇಕ ತೆರೆಮರೆಗೆ ಸರಿಯುವಂತಾಯಿತು. ಆದರೂ, ತಮಿಳುನಾಡಿನ ಕ್ರಿಕೆಟಿಗ ಧೋನಿ ಬಗ್ಗೆ ಯಾವುದೇ ಅಸೂಯೆ ಇಟ್ಟುಕೊಳ್ಳದೆ, 2ನೇ ಇನಿಂಗ್ಸ್‌ನಲ್ಲೂ ನಿಮ್ಮಿಂದ ಇನ್ನಷ್ಟು ಅಚ್ಚರಿಗಳನ್ನು ನಿರೀಕ್ಷಿಸುವುದಾಗಿ ಹೇಳಿದ್ದಾರೆ.
ನಾಯಕ ಮತ್ತು ಆಟಗಾರನಾಗಿ ಧೋನಿ ನೀಡಿರುವ ಕೊಡುಗೆ ಅಪಾರವಾದುದು. ಹೀಗಾಗಿ ಅವರ ಜೆರ್ಸಿ ನಿವೃತ್ತಿಗೊಳಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸದಸ್ಯೆಯಾಗಿರುವ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ತಿಳಿಸಿದ್ದಾರೆ. ಇಂಥ ಗೌರವಕ್ಕೆ ಧೋನಿ ಅರ್ಹರೂ ಆಗಿದ್ದಾರೆ ಎಂದಿದ್ದಾರೆ. ಭಾರತ ಮಹಿಳಾ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಕೂಡ 7 ನಂ. ಜೆರ್ಸಿಯನ್ನು ನಿವೃತ್ತಿಗೊಳಿಸಬೇಕೆಂದು ಹೇಳಿದ್ದಾರೆ.
ಧೋನಿ ಅವರ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ, 7ನೇ ನಂ. ಜೆರ್ಸಿ ಕೇವಲ ಧೋನಿ ಅವರಿಗೆ ಸೇರಿದ್ದು ಎಂದು ಟೀಮ್ ಇಂಡಿಯಾದಿಂದ ಅದರ ನಿವೃತ್ತಿಗೆ ಬೇಡಿಕೆ ಸಲ್ಲಿಸಿದ್ದಾರೆ. ಧೋನಿ ಅವರ ಫ್ಯಾನ್‌ಪೇಜ್‌ಗಳಲ್ಲಿ ಈಗಾಗಲೆ ನಂ. 7 ಜೆರ್ಸಿಯ ನಿವೃತ್ತಿಗಾಗಿ ಅಭಿಯಾನಗಳೂ ಶುರುವಾಗಿವೆ.
ಈಗಾಗಲೆ ಸಚಿನ್ ನಂ. 10 ಜೆರ್ಸಿ ನಿವೃತ್ತಿ
ಭಾರತೀಯ ಕ್ರಿಕೆಟ್‌ನಲ್ಲಿ ಇರುವರೆಗೆ ದಿಗ್ಗಜ ಸಚಿನ್ ತೆಂಡುಲ್ಕರ್‌ಗೆ ಮಾತ್ರ ಜೆರ್ಸಿ ನಿವೃತ್ತಿಯ ಗೌರವ ಲಭಿಸಿದೆ. ಅವರ 10 ನಂ. ಜೆಸಿಯನ್ನು ಬಿಸಿಸಿಐ 2017ರಲ್ಲಿ ನಿವೃತ್ತಿಗೊಳಿಸಿತ್ತು. 2013ರಲ್ಲಿ ಸಚಿನ್ ನಿವೃತ್ತಿಯಾದ ಬಳಿಕ ಮುಂಬೈ ವೇಗಿ ಶಾರ್ದೂಲ್ ಠಾಕೂರ್ 10 ಜೆರ್ಸಿ ಧರಿಸಿ ಶ್ರೀಲಂಕಾ ಪ್ರವಾಸದಲ್ಲಿ ಕೆಲ ಪಂದ್ಯಗಳನ್ನು ಆಡಿದ್ದರು. ಆದರೆ ಆಗ ಅಭಿಮಾನಿಗಳಿಂದ ಅವರು ತೀವ್ರ ಟೀಕೆಗಳನ್ನು ಎದುರಿಸಿ, ಆ ಜೆರ್ಸಿ ನಂ. ತ್ಯಜಿಸಿದ್ದರು. ಬಳಿಕ ಬಿಸಿಸಿಐ 10 ನಂ. ಜೆರ್ಸಿಯನ್ನು ಅಧಿಕೃತವಾಗಿ ನಿವೃತ್ತಿಗೊಳಿಸಿತ್ತು. ಮುಂದಿನ ದಿನಗಳಲ್ಲಿ ಬೇರೆ ಆಟಗಾರರು 7 ನಂ. ಜೆರ್ಸಿ ಧರಿಸಿದರೂ, ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇರುವುದರಿಂದ ಬಿಸಿಸಿಐ, ಈ ಜೆರ್ಸಿಯನ್ನೂ ನಿವೃತ್ತಿಗೊಳಿಸಬಹುದು. ಈ ವಿಷಯದಲ್ಲಿ ಐಸಿಸಿ ಕೂಡ ಯಾವುದೇ ಆಕ್ಷೇಪ ಎತ್ತುವುದಿಲ್ಲ. ಇದು ಆಯಾ ದೇಶದ ಕ್ರಿಕೆಟ್ ಮಂಡಳಿಗೆ ಬಿಟ್ಟ ವಿಚಾರವಾಗಿರುತ್ತದೆ.