

ನವದೆಹಲಿ: ಗುಜರಾತ್ ಟೈಟಾನ್ಸ್ಗೆ 2022ರಲ್ಲಿ ಪದಾರ್ಪಣೆಯ ವರ್ಷದಲ್ಲೇ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟ ಬಳಿಕ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎಂದೇ ಬಿಂಬಿಸಲ್ಪಟ್ಟಿದ್ದರು. ಇದರೊಂದಿಗೆ ಟೀಮ್ ಇಂಡಿಯಾದ ಉಪನಾಯಕನ ಪಟ್ಟವೂ ಲಭಿಸಿತ್ತು. ಆದರೆ ಇದೀಗ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಗಂಭೀರ್ ಹೊಸ ಕೋಚ್ ಆಗಿ ಬಂದಾಗ ಹಾರ್ದಿಕ್ ಪಾಂಡ್ಯಗೆ ನಾಯಕನ ಪಟ್ಟ ಮಾತ್ರವಲ್ಲ, ಉಪನಾಯಕನ ಸ್ಥಾನವೂ ತಪ್ಪಿದೆ. ಇದರಿಂದ ಈಗ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವೂ ಪಾಂಡ್ಯ ಕೈತಪ್ಪುವ ಭೀತಿ ಎದುರಾಗಿದೆ.
ಭಾರತದ ಟೆಸ್ಟ್-ಏಕದಿನ ನಾಯಕ ರೋಹಿತ್ ಶರ್ಮ ಮತ್ತು ಟಿ20 ನಾಯಕ ಸೂರ್ಯಕುಮಾರ್ ಇಬ್ಬರೂ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದಾರೆ. ಮುಂಬರುವ ಮೆಗಾ ಹರಾಜಿಗೆ ಮುನ್ನ ಈ ಮೂವರನ್ನೂ ರಿಟೇನ್ ಮಾಡಿಕೊಳ್ಳುವುದು ಮುಂಬೈಗೆ ಕಠಿಣ ಟಾಸ್ಕ್ ಎನಿಸಿದೆ. ಹೀಗಾಗಿ ರೋಹಿತ್ ಅಥವಾ ಸೂರ್ಯಕುಮಾರ್ಗೆ ನಾಯಕತ್ವದ ಆಮಿಷ ಒಡ್ಡಿ ತಂಡದಲ್ಲಿ ಉಳಿಸಿಕೊಳ್ಳಲು ಮುಂಬೈ ಪ್ರಯತ್ನಿಸುವ ಸಾಧ್ಯತೆ ಇದೆ. ಇದರ ನಡುವೆ ತಂಡದ ಮತ್ತೋರ್ವ ಪ್ರಮುಖ ಆಟಗಾರ ಜಸ್ಪ್ರೀತ್ ಬುಮ್ರಾರನ್ನು ರಿಟೇನ್ ಮಾಡಿಕೊಳ್ಳುವುದು ಕೂಡ ಸವಾಲೆನಿಸಿದೆ.