

ಬೆಂಗಳೂರು: ಕನ್ನಡಿಗ ಕೆಎಲ್ ರಾಹುಲ್ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಆಗಿ ಭಾರತ ತಂಡಕ್ಕೆ ಉತ್ತಮ ಸಮತೋಲನ ತಂದಿದ್ದಾರೆ. ಇದರಿಂದಾಗಿ ಸದ್ಯಕ್ಕೆ ಅವರು ಇದೇ ಪಾತ್ರದಲ್ಲಿ ಮುಂದುವರಿಯಲಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕೆಎಲ್ ರಾಹುಲ್ ಭಾರತ ತಂಡಕ್ಕೆ ಎಷ್ಟು ಉಪಯುಕ್ತರೆಂದು ಆಸೀಸ್ ವಿರುದ್ಧ ಸರಣಿಯಲ್ಲಿ ನಿರೂಪಿಸಿದ್ದಾರೆ. ಮೊದಲ ಪಂದ್ಯದಲ್ಲಿ ಮಹತ್ವದ 3ನೇ ಕ್ರಮಾಂಕದಲ್ಲಿ ಆಡಿ 47 ರನ್ ಗಳಿಸಿದ್ದ ಅವರು, 2ನೇ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ 80 ರನ್ಗಳ ಉಪಯುಕ್ತ ಆಟವಾಡಿದ್ದರು. ಅಂತಿಮ ಪಂದ್ಯದಲ್ಲಿ ಧವನ್ ಗಾಯದಿಂದಾಗಿ ಇನಿಂಗ್ಸ್ ಆರಂಭಿಸಲು ಅಲಭ್ಯರಾದಾಗ ಮತ್ತೆ ಆರಂಭಿಕರಾಗಿ ಆಡಿದರು. ಇದರ ನಡುವೆ ರಿಷಭ್ ಪಂತ್ ಗೈರಿನಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸಿ 4 ಕ್ಯಾಚ್, 1 ಸ್ಟಂಪಿಂಗ್ ಮಾಡಿದ್ದಾರೆ. ಈ ಮೂಲಕ ಬಲಿಷ್ಠ ಆಸೀಸ್ ಎದುರು ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 2003ರ ವಿಶ್ವಕಪ್ ವೇಳೆ ಭಾರತ ತಂಡಕ್ಕೆ ಬ್ಯಾಟಿಂಗ್ನಲ್ಲೂ ಉಪಯುಕ್ತರೆನಿಸುವ ವಿಕೆಟ್ ಕೀಪರ್ ಕೊರತೆ ಕಾಡಿದಾಗ ರಾಹುಲ್ ದ್ರಾವಿಡ್ ಕೀಪಿಂಗ್ ಮಾಡಿ ಸೌರವ್ ಗಂಗೂಲಿ ಬಳಗಕ್ಕೆ ಸಮತೋಲನ ತಂದಿದ್ದರು.
‘ರಾಹುಲ್ ಕೀಪಿಂಗ್ ಮಾಡುವುದರಿಂದ ನಮಗೆ ಹೆಚ್ಚುವರಿ ಬ್ಯಾಟ್ಸ್ಮನ್ ಆಡಿಸಲು ಅವಕಾಶ ದೊರೆತಿದೆ. ಇದು ನಮ್ಮ ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ತುಂಬಿದೆ. ಆಸೀಸ್ ವಿರುದ್ಧದ ಸತತ 2 ಗೆಲುವಿನಲ್ಲೂ ಇದು ನೆರವಾಗಿದೆ. ಹೀಗಾಗಿ ತಂಡದಲ್ಲಿ ಬದಲಾವಣೆ ತರಲು ಯಾವುದೇ ಕಾರಣ ಕಾಣಿಸುತ್ತಿಲ್ಲ. 2003ರ ವಿಶ್ವಕಪ್ನಲ್ಲಿ ರಾಹುಲ್ ಭಾಯಿ (ದ್ರಾವಿಡ್) ಕೂಡ ಕೀಪಿಂಗ್ ಮಾಡಿ ತಂಡಕ್ಕೆ ಸಮತೋಲನ ತಂದಿದ್ದರು’ ಎಂದು ಕೊಹ್ಲಿ ಬೆಂಗಳೂರಿನಲ್ಲಿ ಸರಣಿ ಗೆದ್ದ ಬಳಿಕ ಹೇಳಿದ್ದಾರೆ. ಈ ಮೂಲಕ ರಿಷಭ್ ಪಂತ್ ಗಾಯದಿಂದ ಫಿಟ್ ಆದರೂ ಸದ್ಯಕ್ಕೆ ಆಡುವ ಹನ್ನೊಂದರ ಬಳಗಕ್ಕೆ ಮರಳುವ ಸಾಧ್ಯತೆ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ.ರಾಹುಲ್ ಅವರೊಬ್ಬ ಸಮರ್ಥ ಬ್ಯಾಟ್ಸ್ಮನ್ ಆಗಿರುವುದರಿಂದ ಯಾವುದೇ ಕ್ರಮಾಂಕದಲ್ಲಿ ಆಡಬಲ್ಲರು. ಮ್ಯಾಚ್ ವಿನ್ನರ್ ಕೂಡ ಆಗಿ ಬೆಳೆದಿದ್ದಾರೆ ಎಂದು ಕೊಹ್ಲಿ ಪ್ರಶಂಸಿಸಿದ್ದಾರೆ.
ಕಳೆದ ಬಾರಿಗಿಂತ ಬಲಿಷ್ಠವಾಗಿದ್ದ ಆಸೀಸ್ ತಂಡದೆದುರು ಬಂದ ಗೆಲುವು ಹೆಚ್ಚು ಖುಷಿ ನೀಡಿದೆ. ಈ ಬಾರಿ ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್, ಮಾರ್ನಸ್ ಲಬುಶೇನ್ರಂಥ ಬ್ಯಾಟ್ಸ್ಮನ್ಗಳಿದ್ದರು. ಬೌಲಿಂಗ್ ವಿಭಾಗವೂ ಬಲಿಷ್ಠವಾಗಿತ್ತು. ಮೊದಲ ಪಂದ್ಯ ಸೋತ ಬಳಿಕ ಕೊನೇ 2 ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡಿದ್ದು ತೃಪ್ತಿಕರವಾಗಿದೆ. | ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕ
ಕಿವೀಸ್ ಮೇಲೆ ಒತ್ತಡ
ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವಿನಿಂದ ವಿಶ್ವಾಸ ವೃದ್ಧಿಸಿಕೊಂಡಿರುವ ಭಾರತ ತಂಡ ಮುಂಬರುವ ನ್ಯೂಜಿಲೆಂಡ್ ಪ್ರವಾಸದಲ್ಲಿ ಕಳೆದ ವರ್ಷದಂತೆ ಆತಿಥೇಯರ ಮೇಲೆ ಮೊದಲ ಎಸೆತದಿಂದಲೇ ಒತ್ತಡ ಹೇರಲಿದೆ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಕಿವೀಸ್ ಪ್ರವಾಸದಲ್ಲಿ 5 ಪಂದ್ಯಗಳ ಟಿ20 ಸರಣಿ ಜನವರಿ 24ರಿಂದ ನಡೆಯಲಿದೆ. ಬಳಿಕ 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಕಳೆದ ವರ್ಷಾರಂಭದಲ್ಲೂ ಕಿವೀಸ್ ಪ್ರವಾಸ ಮಾಡಿದ್ದ ಭಾರತ 4-1ರಿಂದ ಏಕದಿನ ಸರಣಿ ಜಯಿಸಿತ್ತು. ‘ಕಳೆದ ವರ್ಷ ನ್ಯೂಜಿಲೆಂಡ್ನಲ್ಲಿ ತೋರಿದ ನಿರ್ವಹಣೆಯಿಂದ ಆತ್ಮವಿಶ್ವಾಸ ಪಡೆಯಲಿದ್ದೇವೆ. ಸಕಾರಾತ್ಮಕ ಕ್ರಿಕೆಟ್ನೊಂದಿಗೆ ನಮ್ಮ ಆಟವನ್ನು ಆನಂದಿಸಲಿದ್ದೇವೆ. ವಿದೇಶಿ ನೆಲದಲ್ಲಿ ಆಡುವಾಗ ಆತಿಥೇಯ ತಂಡದ ಮೇಲೆ ಒತ್ತಡ ಹೇರುವುದು ಪ್ರಮುಖವಾಗುತ್ತದೆ. ಯಾಕೆಂದರೆ ಆತಿಥೇಯ ತಂಡಕ್ಕೆ ಗೆಲ್ಲುವ ಒತ್ತಡ ಹೆಚ್ಚಿರುತ್ತದೆ’ ಎಂದು ಕೊಹ್ಲಿ, ಕಿವೀಸ್ ಪ್ರವಾಸದ ಸಿದ್ಧತೆಯ ಬಗ್ಗೆ ಹೇಳಿದ್ದಾರೆ. ಭಾರತ ತಂಡ ಸೋಮವಾರ ರಾತ್ರಿ ನ್ಯೂಜಿಲೆಂಡ್ಗೆ ಪ್ರಯಾಣ ಬೆಳೆಸಿದೆ.