

ಕ್ರಿಕೆಟ್ನಿಂದ ನಿವೃತ್ತರಾಗಿದ್ದರೂ ಆಗಾಗ ಕ್ರಿಕೆಟ್ ಬಗ್ಗೆ ಹೇಳಿಕೆ ನೀಡುತ್ತ, ಅವ್ಯವಸ್ಥೆಗಳನ್ನು, ಕೆಲವು ಆಟಗಾರರನ್ನು ಟೀಕಿಸುತ್ತಿರುವ ಗೌತಮ್ ಗಂಭೀರ್ ಇದೀಗ ಇನ್ನೊಂದು ಹೊಸ ವಿಷಯ ಮಂಡನೆ ಮಾಡಿದ್ದಾರೆ.
ನಿನ್ನೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಗೆದ್ದ ಬೆನ್ನಲ್ಲೇ, ಇನ್ನು ಮುಂದೆ ಭಾರತ ಕ್ರಿಕೆಟ್ನ ಏಕದಿನ ಪಂದ್ಯ ಮತ್ತು ಐಪಿಎಲ್ ಪಂದ್ಯಾವಳಿಗಳಿಗೆ ರೋಹಿತ್ ಶರ್ಮಾ ನಾಯಕತ್ವ ವಹಿಸುವುದು ಉತ್ತಮ ಎಂದು ಗಂಭೀರ್ ತಿಳಿಸಿದ್ದಾರೆ. ಅದನ್ನೂ ಸ್ವಲ್ಪ ಕಟುವಾಗಿಯೇ ಹೇಳಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದಡಿ ಮುಂಬೈ ಇಂಡಿಯನ್ಸ್ 5ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿದೆ. ಇಷ್ಟಾದರೂ ಭಾರತ ಕ್ರಿಕೆಟ್ನ ಐಪಿಎಲ್ ಮತ್ತು ಏಕದಿನ ಪಂದ್ಯಗಳಿಗೆ ಅವರನ್ನು ನಾಯಕನನ್ನಾಗಿ ಮಾಡದೆ ಇದ್ದರೆ, ಅವರಿಗೇ ನಷ್ಟ, ನಾಚಿಕೆಗೇಡು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅಸಮರ್ಥರು ಎಂದಲ್ಲ. ಆದರೆ ವೈಟ್ಬಾಲ್ ಕ್ರಿಕೆಟ್ಗೆ ರೋಹಿತ್ ಶರ್ಮಾ ಸೂಕ್ತ ಎನ್ನಿಸುತ್ತದೆ. ನಾಯಕತ್ವವನ್ನು ವಿಭಜಿಸಲು ಭಾರತ ಕ್ರಿಕೆಟ್ ಮ್ಯಾನೇಜ್ಮೆಂಟ್ ಚಿಂತಿಸಬೇಕು. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಸೇರಿ ಕೆಲವು ದೇಶಗಳು ಹೀಗೆ ಮಾಡುತ್ತಿವೆ. ಟೆಸ್ಟ್ಗೆ ಮತ್ತು ಸೀಮಿತ ಓವರ್ಗಳ ಪಂದ್ಯಕ್ಕೆ ಬೇರೆ ಬೇರೆ ನಾಯಕ ಇರುವುದು ಸೂಕ್ತ ಎಂದು ಗಂಭೀರ್ ತಮ್ಮ ಚಿಂತನೆ ಮುಂದಿಟ್ಟಿದ್ದಾರೆ.
ವೈಟ್ಬಾಲ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವಕ್ಕೂ, ತಮ್ಮ ನಾಯಕತ್ವಕ್ಕೂ ಇರುವ ವ್ಯತ್ಯಾಸವನ್ನು ರೋಹಿತ್ ಶರ್ಮಾ ತೋರಿಸಿದ್ದಾರೆ. ಇದರಲ್ಲಿ ಓರ್ವ ಆಟಗಾರ ತನ್ನ ನಾಯಕತ್ವದಲ್ಲಿ ಐದು ಸಲ ಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಇನ್ನೋರ್ವ ಆಟಗಾರ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ ಎಂದು ಗಂಭೀರ್ ತಿಳಿಸಿದ್ದಾರೆ. (ಏಜೆನ್ಸೀಸ್)