

ನವದೆಹಲಿ: ಐಪಿಎಲ್ನಲ್ಲಿ ರೋಹಿತ್ ಶರ್ಮ ತವರಿನ ಮುಂಬೈ ಇಂಡಿಯನ್ಸ್ ತಂಡವನ್ನೇ ಮುನ್ನಡೆಸುತ್ತ ಹೆಚ್ಚಿನ ಯಶಸ್ಸು ಕಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ತವರಿನ ಡೆಲ್ಲಿ ತಂಡಕ್ಕೆ ಬದಲಾಗಿ ಕರ್ನಾಟಕದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿದ್ದಾರೆ. 2008ರ ಚೊಚ್ಚಲ ಐಪಿಎಲ್ ಆವೃತ್ತಿಯಿಂದಲೂ ಅವರು ಆರ್ಸಿಬಿ ತಂಡದ ಪರವಾಗಿಯೇ ಆಡುತ್ತಿದ್ದಾರೆ. ಹಾಗಾದರೆ ವಿರಾಟ್ ಕೊಹ್ಲಿ ತವರಿನ ಡೆಲ್ಲಿ ಡೇರ್ಡೆವಿಲ್ಸ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯಾಕೆ ಹೋಗಲಿಲ್ಲ ಗೊತ್ತೇ? ಐಪಿಎಲ್ ಮಾಜಿ ಸಿಒಒ ಅಧಿಕಾರಿ ಸುಂದರ್ ರಾಮನ್ ಇದಕ್ಕೆ ಕಾರಣವನ್ನು ವಿವರಿಸಿದ್ದಾರೆ.
2008ರಲ್ಲಿ ವಿರಾಟ್ ಕೊಹ್ಲಿ ಸಾರಥ್ಯದಲ್ಲಿ 19 ವಯೋಮಿತಿ ವಿಶ್ವಕಪ್ ಜಯಿಸಿದ ಭಾರತ ತಂಡದ ಹೆಚ್ಚಿನ ಆಟಗಾರರನ್ನು ಖರೀದಿಸಲು ಐಪಿಎಲ್ ತಂಡಗಳ ನಡುವೆ ಪೈಪೋಟಿ ನಡೆದಿತ್ತು. ಆದರೆ ಆಗಿನ ಡೆಲ್ಲಿ ಡೇರ್ಡೆವಿಲ್ಸ್ ತಂಡ ತನ್ನ ಊರಿನ ಹುಡುಗ ವಿರಾಟ್ ಕೊಹ್ಲಿ ಅವರನ್ನು ಖರೀದಿಸಲು ಆಸಕ್ತಿ ತೋರಿರಲಿಲ್ಲ. ಬದಲಾಗಿ ಕಿರಿಯರ ತಂಡದ ಪ್ರಮುಖ ವೇಗಿಯಾಗಿದ್ದ ಪ್ರದೀಪ್ ಸಂಗ್ವಾನ್ ಖರೀದಿಗೆ ಪೈಪೋಟಿ ನಡೆಸಿ, ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
‘ಐಪಿಎಲ್ ಆಟಗಾರರ ಹರಾಜಿಗೆ ಒಂದು ತಿಂಗಳು ಮುನ್ನವಷ್ಟೇ 19 ವಯೋಮಿತಿ ವಿಶ್ವಕಪ್ ಮುಗಿದಿತ್ತು. ಆಗ 19 ವಯೋಮಿತಿ ತಂಡದ ಆಟಗಾರರಿಗಾಗಿ ಹರಾಜು ಪ್ರಕ್ರಿಯೆಗೆ ಬದಲಾಗಿ ಪ್ರತ್ಯೇಕ ಡ್ರ್ಟಾ ನಡೆದಿತ್ತು. ಆದರೆ ಅಲ್ಲಿ ವಿರಾಟ್ ಕೊಹ್ಲಿ ಡ್ರ್ಟಾನಲ್ಲಿ ಆಯ್ಕೆಯಾದ ಮೊದಲ ಆಟಗಾರ ಆಗಿರಲಿಲ್ಲ. ಡೆಲ್ಲಿ ತಂಡ ಆಗ ಕೊಹ್ಲಿ ಅವರನ್ನು ಕಡೆಗಣಿಸಿ ಪ್ರದೀಪ್ ಸಂಗ್ವಾನ್ ಅವರನ್ನು ಸೇರಿಸಿಕೊಂಡಿತ್ತು. ಅವರ ತಂಡಕ್ಕೆ ಆಗ ಮತ್ತೊಬ್ಬ ಬ್ಯಾಟ್ಸ್ಮನ್ ಅಗತ್ಯವಿರಲಿಲ್ಲ. ವೀರೇಂದ್ರ ಸೆಹ್ವಾಗ್, ಎಬಿ ಡಿವಿಲಿಯರ್ಸ್ ಅವರಂಥ ಸ್ಟಾರ್ ಬ್ಯಾಟ್ಸ್ಮನ್ಗಳು ತಂಡದಲ್ಲಿದ್ದರು. ಹೀಗಾಗಿ ಅವರು ವೇಗದ ಬೌಲರ್ಗೆ ಆದ್ಯತೆ ನೀಡಿದ್ದರು. ಕೊನೆಗೆ ಆರ್ಸಿಬಿ ತಂಡ ವಿರಾಟ್ ಕೊಹ್ಲಿ ಅವರನ್ನು ಆರಿಸಿಕೊಂಡಿತ್ತು. ಉಳಿದದ್ದು ಈಗ ಇತಿಹಾಸ’ ಎಂದು ಸುಂದರ್ ರಾಮನ್ ವಿವರಿಸಿದ್ದಾರೆ.
ಇದನ್ನೂ ಓದಿ: ಭಾರತದ ಟೆಸ್ಟ್ ಕ್ರಿಕೆಟ್ ಪದಾರ್ಪಣೆಗೆ 88 ವರ್ಷ
ವಿರಾಟ್ ಕೊಹ್ಲಿ ಅವರು ಈಗ ಐಪಿಎಲ್ ಇತಿಹಾಸದ ಯಶಸ್ವಿ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದು, 169 ಇನಿಂಗ್ಸ್ಗಳಲ್ಲಿ 5,412 ರನ್ ಗಳಿಸಿದ್ದಾರೆ. 6 ಶತಕಗಳೂ ಇದರಲ್ಲಿ ಸೇರಿವೆ. ಮತ್ತೊಂದೆಡೆ ಪ್ರದೀಪ್ ಸಂಗ್ವಾನ್ ಐಪಿಎಲ್ನಲ್ಲಿ 39 ಪಂಧ್ಯ ಆಡಿ 35 ವಿಕೆಟ್ ಕಬಳಿಸಿದ್ದು, ಈಗ ತೆರೆಮರೆಗೆ ಸರಿದಿದ್ದಾರೆ. ಉದ್ದೀಪನ ಪ್ರಕರಣದಲ್ಲಿ ಅವರು ಬಿಸಿಸಿಐನಿಂದ 15 ತಿಂಗಳ ನಿಷೇಧಕ್ಕೂ ಒಳಗಾಗಿದ್ದರು.