

ನವದೆಹಲಿ: ಲಡಾಖ್ ಗಡಿ ಗಲಾಟೆಯ ಬಳಿಕ ಭಾರತೀಯರ ಖಾಸಗಿ ಮಾಹಿತಿಗಳ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಚೀನಾದ 59 ಆ್ಯಪ್ಗಳನ್ನು ಕೇಂದ್ರ ಸರ್ಕಾರ ಸೋಮವಾರವಷ್ಟೇ ನಿಷೇಧಿಸಿದೆ. ಆದರೆ ಭಾರತದಲ್ಲಿ ಮಕ್ಕಳಿಂದ ಯುವಕರವರೆಗೆ ಸಾಕಷ್ಟು ಜನಪ್ರಿಯವಾಗಿರುವ ಮೊಬೈಲ್ ಗೇಮ್ ಆ್ಯಪ್ ಪಬ್ಜಿ ಯಾಕೆ ನಿಷೇಧವಾಗಿಲ್ಲ ಎಂಬ ಪ್ರಶ್ನೆ ಈಗ ಸಾಕಷ್ಟು ಜನರನ್ನು ಕಾಡುತ್ತಿದೆ. ಟಿಕ್ಟಾಕ್, ಶೇರ್ಇಟ್, ಯುಸಿ ಬ್ರೌಸರ್ ಮತ್ತು ಕ್ಯಾಮ್ ಸ್ಕಾನರ್ನಂಥ ಹಲವು ಜನಪ್ರಿಯ ಆ್ಯಪ್ಗಳು ಭಾರತದಲ್ಲಿ ಬ್ಯಾನ್ ಆಗಿದ್ದರೂ, ಪ್ಲೇಯರ್ ಅನ್ನೋನ್ಸ್ ಬ್ಯಾಟಲ್ಗ್ರೌಂಡ್ಸ್ (ಪಬ್ಜಿ)ಗೇಮ್ ಹೇಗೆ ನಿಷೇಧದಿಂದ ಪಾರಾಯಿತು ಎಂಬುದು ಹಲವರಿಗೆ ಅಚ್ಚರಿ ಹುಟ್ಟಿಸಿದೆ. ಇದಕ್ಕೆ ಕಾರಣ ಇಲ್ಲಿದೆ ಓದಿ...
ಪಬ್ಜಿ ಸಂಪೂರ್ಣವಾಗಿ ಚೀನಾದ ಆ್ಯಪ್ ಆಗದೇ ಇರುವುದು ಅದು ನಿಷೇಧಕ್ಕೊಳಗಾಗದಿರಲು ಪ್ರಮುಖ ಕಾರಣವಾಗಿದೆ. ಈ ಗೇಮ್ ಅನ್ನು ದಕ್ಷಿಣ ಕೊರಿಯಾದ ಕಂಪನಿ ಬ್ಲೂಹೋಲ್ ಸಿದ್ಧಪಡಿಸಿದ್ದು, ಅದುವೇ ಇದರ ನಿರ್ವಹಣೆಯನ್ನೂ ಮಾಡುತ್ತಿದೆ. ಆದರೆ ಈ ಗೇಮ್ ಜನಪ್ರಿಯಗೊಂಡ ಬಳಿಕ ಚೀನಾದ ಬಹುರಾಷ್ಟ್ರೀಯ ಕಂಪನಿ ಟೆನ್ಸೆಂಟ್ ಕೂಡ ಈ ಆ್ಯಪ್ನಲ್ಲಿ ಹೂಡಿಕೆ ಮಾಡಿದ್ದು, ಚೀನಾದಲ್ಲೂ ಇದನ್ನು ಸಾಕಷ್ಟು ಜನಪ್ರಿಯಗೊಳಿಸಿದೆ. ಬಳಿಕ ಅದನ್ನು ಭಾರತದಲ್ಲೂ ಹಂಚಿಕೆ ಮಾಡಿ ಜನಪ್ರಿಯಗೊಳಿಸಿದೆ. ಭಾರತದಲ್ಲಿ ಇದರ ಮಾರುಕಟ್ಟೆಯ ಹಕ್ಕು ಟೆನ್ಸೆಂಟ್ ಹೋಲ್ಡಿಂಗ್ಸ್ ಬಳಿಯಲ್ಲಿಯೇ ಇದೆ. ಈ ರೀತಿ ಮಿಶ್ರ ಪಾಲುದಾರಿಕೆ ಹೊಂದಿರುವ ಕಾರಣದಿಂದಾಗಿ ಈ ನಿಷೇಧಕ್ಕೊಳಗಾಗಿಲ್ಲ ಎನ್ನಲಾಗಿದೆ.
ನೆಟ್ಟಿಗರಿಂದ ಟ್ರೋಲ್
ಪಬ್ಜಿ ನಿಷೇಧದಿಂದ ಪಾರಾದ ಬೆನ್ನಲ್ಲೇ ಈ ಗೇಮ್ ಇಷ್ಟಪಡುವವರು, ಟಿಕ್ಟಾಕ್ ಇಷ್ಟಪಡುವವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಪಬ್ಜಿ ಆಡುತ್ತಲೇ ಹೆಚ್ಚಿನ ಸಮಯ ಕಳೆಯುವ ಮಕ್ಕಳ ಪಾಲಕರು, ಪಬ್ಜಿ ನಿಷೇಧಿಸದಿರುವುದಕ್ಕೆ ಕೋಪಗೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.