ಪಂಜಾಬ್​ ಕಿಂಗ್ಸ್ ಫ್ರಾಂಚೈಸಿ ಮಾಲೀಕರ ನಡುವೆ ಬಿಕ್ಕಟ್ಟು ಏರ್ಪಟ್ಟಿದ್ದೇಕೆ? ಹೀಗಿದೆ ಕಾರಣ...

web pun kings
Published on

ನವದೆಹಲಿ: ಐಪಿಎಲ್ ಫ್ರಾಂಚೈಸಿ ಪಂಜಾಬ್​ ಕಿಂಗ್ಸ್​ನ ಮಾಲೀಕರ ನಡುವೆ ಜಗಳ ನಡೆದಿದೆ. ತಂಡದ ನಾಲ್ವರು ಸಹ-ಮಾಲೀಕರಲ್ಲಿ ಒಬ್ಬರಾಗಿರುವ ಮೋಹಿತ್​ ಬರ್ಮನ್​ ತನ್ನ ಷೇರುಗಳನ್ನು ಹೆಸರು ಬಹಿರಂಗಪಡಿಸದ 3ನೇ ವ್ಯಕ್ತಿಗೆ ಮಾರಾಟ ಮಾಡುವುದನ್ನು ವಿರೋಧಿಸಿ ಮತ್ತೋರ್ವ ಸಹ&ಮಾಲಕಿ ಹಾಗೂ ಬಾಲಿವುಡ್​ ನಟಿ ಪ್ರೀತಿ ಝಿಂಟಾ, ಪಂಜಾಬ್​-ಹರಿಯಾಣ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಆಗಸ್ಟ್​ 20ರಂದು ನ್ಯಾಯಾಲಯ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಮಧ್ಯಸ್ಥಿಕೆ ಮತ್ತು ರಾಜಿ ಕಾಯ್ದೆ&1996ರ ಸೆಕ್ಷನ್​-9ರ ಅಡಿಯಲ್ಲಿ ಪ್ರೀತಿ ಝಿಂಟಾ, ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ತನ್ನ ಮತ್ತು ಬರ್ಮನ್​ ನಡುವಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಷೇರುಗಳ ಮಾರಾಟ ರ್ನಿಬಂಧಿಸಿ ಮಧ್ಯಂತರ ಆದೇಶ ನೀಡುವಂತೆ ಕೇಳಿಕೊಂಡಿದ್ದಾರೆ.
ಪಂಜಾಬ್​ ಕಿಂಗ್ಸ್​ ಫ್ರಾಂಚೈಸಿಯ ಒಡೆತನ ಹೊಂದಿರುವ ಕೆಪಿಎಚ್​ ಡ್ರೀಮ್​ ಕ್ರಿಕೆಟ್​ ಪೆವೇಟ್​ ಲಿಮಿಟೆಡ್​ ಕಂಪನಿಯಲ್ಲಿ ಬರ್ಮನ್​ ಗರಿಷ್ಠ ಅಂದರೆ ಶೇ.48ರಷ್ಟು ಷೇರುಗಳನ್ನು ಹೊಂದಿದ್ದಾರೆ. ಪ್ರೀತಿ ಝಿಂಟಾ ಮತ್ತು ಉದ್ಯಮಿ ನೆಸ್​ ವಾಡಿಯಾ ತಲಾ ಶೇ. 23 ಷೇರು ಹೊಂದಿದ್ದಾರೆ. ಉಳಿದ ಷೇರುಗಳು 4ನೇ ಸಹ&ಮಾಲೀಕ ಕರಣ್​ ಪೌಲ್​ ಬಳಿ ಇದೆ.

ಡಾಬರ್​ ಆಯುರ್ವೇದಿಕ್​ ಮತ್ತು ಎಫ್​ಎಂಸಿಜಿ ಕಂಪನಿಯ ಚೇರ್ಮನ್​ ಕೂಡ ಆಗಿರುವ ಮೋಹಿತ್​ ಬರ್ಮನ್​, ಪಂಜಾಬ್​ ಕಿಂಗ್ಸ್​ ಫ್ರಾಂಚೈಸಿಯ ಶೇ.11.5 ಷೇರುಗಳನ್ನು ವ್ಯಕ್ತಿಯೊಬ್ಬರಿಗೆ ಮಾರಲು ಬಯಸಿದ್ದು, ಪ್ರೀತಿ ಝಿಂಟಾ ಇದನ್ನು ವಿರೋಧಿಸುತ್ತಿದ್ದಾರೆ. ಈ ನಡುವೆ ಬರ್ಮನ್​, ತನಗೆ ಷೇರು ಮಾರಾಟ ಮಾಡುವ ಯಾವ ಯೋಜನೆಯೂ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಬರ್ಮನ್​ ಕೆರಿಬಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಸೇಂಟ್​ ಲೂಸಿಯಾ ಕಿಂಗ್ಸ್​ ತಂಡದ ಸಹ-ಮಾಲೀಕರೂ ಆಗಿದ್ದಾರೆ.

ಹೊರಗಿನವರಿಗೆ ಮಾರಾಟಕ್ಕೆ ವಿರೋಧ?
ಬರ್ಮನ್​ ಷೇರುಗಳ ಮಾರಾಟ ಮಾಡುವುದಕ್ಕೆ ಪ್ರೀತಿ ಝಿಂಟಾ ಯಾಕೆ ಆಕ್ಷೇಪ ಎತ್ತುತ್ತಿದ್ದಾರೆ ಎಂಬುದಕ್ಕೆ ಕಾರಣ ಅಸ್ಪಷ್ಟವಾಗಿದೆ. ಆದರೆ ಫ್ರಾಂಚೈಸಿ ಮಾಲೀಕರು ತಾವೇ ಈ ಮುನ್ನ ಮಾಡಿಕೊಂಡಿರುವ ಒಪ್ಪಂದದ ಅನ್ವಯ, ತಂಡದಲ್ಲಿ ಹೂಡಿಕೆ ಮಾಡಿರುವ ಷೇರುಗಳನ್ನು ಹಾಲಿ ಇರುವ ಸಹ-ಮಾಲೀಕರಿಗೆ ಮಾತ್ರ ಮಾರಾಟ ಮಾಡಲು ಅವಕಾಶವಿದೆ. ಅಲ್ಲದೆ, ಹಾಲಿ ಸಹ&ಮಾಲೀಕರು ಆ ಷೇರುಗಳನ್ನು ಖರೀದಿಸಲು ನಿರಾಕರಿಸಿದರೆ ಮಾತ್ರ ಬೇರೆಯವರಿಗೆ ಮಾರಾಟ ಮಾಡಲು ಅವಕಾಶವಿದೆ ಎನ್ನಲಾಗಿದೆ.

5 ಸಾವಿರ ಕೋಟಿ ರೂ.ಗೂ ಅಧಿಕ ಬ್ರ್ಯಾಂಡ್ ಮೌಲ್ಯ: 2008ರ ಮೊದಲ ಆವೃತ್ತಿಯಿಂದಲೂ ಐಪಿಎಲ್​ ಭಾಗವಾಗಿರುವ ಪಂಜಾಬ್​ ಕಿಂಗ್ಸ್​ ತಂಡ, ಪ್ರಸಕ್ತ 5,300ರಿಂದ 5,800 ಕೋಟಿ ರೂ. ಬ್ರ್ಯಾಂಡ್​ ಮೌಲ್ಯ ಹೊಂದಿದೆ. ಈ ಪೈಕಿ ಶೇ. 11.5 ಷೇರುಗಳ ಮೌಲ್ಯ ಸುಮಾರು 540ರಿಂದ 600 ಕೋಟಿ ರೂ. ಆಗಿದೆ. ಬರ್ಮನ್​ ಈ ಷೇರುಗಳನ್ನು 700 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಪಂಜಾಬ್​ ತಂಡ 2014ರಲ್ಲಿ ಒಮ್ಮೆ ಫೈನಲ್​ಗೇರಿ ರನ್ನರ್​ಅಪ್​ ಆಗಿರುವುದೇ ಐಪಿಎಲ್​ನಲ್ಲಿ ಅದರ ಶ್ರೇಷ್ಠ ನಿರ್ವಹಣೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net