ವಿಂಡೀಸ್ ವಿರುದ್ಧ ಮೊದಲ ಏಕದಿನಕ್ಕೆ ಮಾತ್ರ ಕೆಎಲ್ ರಾಹುಲ್ ಅಲಭ್ಯ, ಹೀಗಿದೆ ಕಾರಣ...

rahul web
Published on

ಅಹಮದಾಬಾದ್: ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಕನ್ನಡಿಗ ಕೆಎಲ್ ರಾಹುಲ್ ಇದೀಗ ತವರಿನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ. ಇದಕ್ಕೆ ಫಿಟ್ನೆಸ್ ಅಥವಾ ವಿಶ್ರಾಂತಿಯ ನೆಪ ಕಾರಣವಲ್ಲ. ಹಾಗಾದರೆ ಅಸಲಿ ಕಾರಣವೇನು ಗೊತ್ತೇ?

ವಿಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಆರಿಸಿದಾಗ ಬಿಸಿಸಿಐ, ಫೆಬ್ರವರಿ 6ರಂದು ನಡೆಯಲಿರುವ ಮೊದಲ ಪಂದ್ಯಕ್ಕೆ ಮಾತ್ರ ಕೆಎಲ್ ರಾಹುಲ್ ಅಲಭ್ಯರಾಗಲಿದ್ದಾರೆ. ಬಳಿಕ 2ನೇ ಪಂದ್ಯದಿಂದ ಅವರು ತಂಡಕ್ಕೆ ಲಭ್ಯರಾಗಲಿದ್ದಾರೆ ಎಂದು ತಿಳಿಸಿತ್ತು. ಇದರಿಂದ ಕ್ರಿಕೆಟ್ ಪ್ರೇಮಿಗಳು ಗೊಂದಲಕ್ಕೀಡಾಗಿದ್ದರು. ಇನ್ನು ಕೆಲವರು, ರಾಹುಲ್ ಗೆಳತಿ ಹಾಗೂ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಅವರನ್ನು ವಿವಾಹವಾಗಲಿರುವುದೇ ಇದಕ್ಕೆ ಕಾರಣ ಎಂದೂ ವದಂತಿ ಹರಡಿದ್ದರು. ಇದೀಗ ರಾಹುಲ್ ಗೈರಿಗೆ ಅಸಲಿ ಕಾರಣ ಬಹಿರಂಗಗೊಂಡಿದೆ.

ಕೆಎಲ್ ರಾಹುಲ್ ಸಹೋದರಿ ಕೆಎಲ್ ಭಾವನಾ ಅವರ ವಿವಾಹದ ಹಿನ್ನೆಲೆಯಲ್ಲಿ ವಿಂಡೀಸ್ ವಿರುದ್ಧದ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ತಿಳಿದುಬಂದಿದೆ. ಕೆಎಲ್ ಭಾವನಾ ಅವರ ವಿವಾಹ ಸಮಾರಂಭ ಗುರುವಾರ ನಡೆದಿದ್ದು, ರಾಹುಲ್ ಅದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಮೊದಲ ಪಂದ್ಯದಿಂದ ಬಿಡುವು ನೀಡುವಂತೆ ಬಿಸಿಸಿಐಗೆ ಮನವಿ ಸಲ್ಲಿಸಿದ್ದರು. ಕುಟುಂಬದ ಶುಭ ಸಮಾರಂಭವನ್ನು ಮುಗಿಸಿದ ಬಳಿಕ ಅವರು ಅಹಮದಾಬಾದ್‌ನಲ್ಲಿ ತಂಡವನ್ನು ಕೂಡಿಕೊಂಡು, ಕರೊನಾ ಪರೀಕ್ಷೆಗೆ ಒಳಪಟ್ಟು 3 ದಿನಗಳ ಕ್ವಾರಂಟೈನ್‌ಗೂ ಒಳಗಾಗಲಿದ್ದಾರೆ. ಬಳಿಕ ಫೆಬ್ರವರಿ 9ರಂದು ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net