ಎಂದೂ ಬೌಲ್​ ಮಾಡದ ರಿಂಕುಗೆ 19ನೇ ಓವರ್​ ಕೊಟ್ಟಿದ್ಯಾಕೆ? ಪ್ಲಾನ್ ಬಹಿರಂಗಪಡಿಸಿದ ಕ್ಯಾಪ್ಟನ್ ಸೂರ್ಯ

ವಿಜಯವಾಣಿ - 2024-07-31T115333.325
Published on

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಕೈಗೊಂಡಿದ್ದ ಟೀಮ್ ಇಂಡಿಯಾ, ನಿನ್ನೆ (ಜು.30) ನಡೆದ ಮೂರನೇ ಪಂದ್ಯದಲ್ಲಿ ಸೂಪರ್​ ಓವರ್​ನಲ್ಲಿ ರೋಚಕ ಜಯ ಸಾಧಿಸಿತು. ಲಂಕಾ ಪಡೆಯನ್ನು 3-0 ಅಂತರದಿಂದ ಕ್ಲೀನ್​ ಸ್ವೀಪ್ ಮಾಡಿದ ಭಾರತ, ಇದೀಗ ಟಿ20 ಸರಣಿ ವಶಪಡಿಸಿಕೊಂಡಿದೆ. ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಸರಣಿ ಗೆದ್ದಿರುವ ಟೀಮ್ ಇಂಡಿಯಾ ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಸಿರೀಸ್​ ಗೆಲ್ಲಲು ಎದುರುನೋಡುತ್ತಿದೆ. ಈ ಮಧ್ಯೆ ಕ್ರಿಕೆಟ್ ಪ್ರಿಯರನ್ನು ಅಕ್ಷರಶಃ ಬೆರಗಾಗಿಸಿದ್ದು ರಿಂಕು ಸಿಂಗ್ ಬೌಲಿಂಗ್ ದಾಳಿ! ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 19ನೇ ಓವರ್​ ಬೌಲ್ ಮಾಡಿದ ರಿಂಕು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ, ಭಾರತಕ್ಕೆ ಬ್ಯಾಟ್ ಮಾಡುವಂತೆ ತಿಳಿಸಿತು. 20 ಓವರ್​ಗಳಲ್ಲಿ ಟೀಮ್ ಇಂಡಿಯಾ 9 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಲಂಕಾ ಪಡೆ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸುವ ಮುಖೇನ ಪಂದ್ಯ ಟೈ ಮಾಡಿತು. ಇದರ ಬೆನ್ನಲ್ಲೇ ನಡೆದ ಸೂಪರ್​ಓವರ್​ನಲ್ಲಿ ಭಾರತ ರೋಚಕ ಗೆಲುವು ದಾಖಲಿಸಿತು. ಮೂರು ಮ್ಯಾಚ್​ಗಳಲ್ಲಿ ಜಯ ಸಾಧಿಸಿದ ಟೀಮ್ ಇಂಡಿಯಾ ಟಿ20 ಸರಣಿ ವಶಪಡಿಸಿಕೊಂಡಿತು. ಗೆಲುವಿನ ಬಗ್ಗೆ ಮುಕ್ತವಾಗಿ ಮಾತನಾಡಿದ ಕ್ಯಾಪ್ಟನ್ ಸೂರ್ಯಕುಮಾರ್​ ಯಾದವ್​, ತಾನು ಯಾವ ಕಾರಣಕ್ಕೆ 19ನೇ ಓವರ್​ನ ರಿಂಕುಗೆ ಹಸ್ತಾಂತರಿಸಿದೆ ಎಂಬುದರ ಹಿಂದಿದ್ದ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಇನ್ನು ಒಂದು ಓವರ್ ಬಾಕಿ ಉಳಿಸಿಕೊಂಡಿದ್ದ ವೇಗಿ ಮೊಹಮ್ಮದ್​ ಸಿರಾಜ್​ನ ಕೈಬಿಟ್ಟು ಎಂದೂ ಬೌಲ್ ಮಾಡದ ರಿಂಕು ಸಿಂಗ್​ಗೆ ಬಾಲ್ ಕೊಟ್ಟ ಸೂರ್ಯಕುಮಾರ್ ಯಾದವ್​, "ಈ ಪಿಚ್​ ಕಂಡೀಷನ್​ಗೆ ಬಲಗೈ ಸ್ಪಿನ್​ ಬಹಳ ಅಗತ್ಯವಿತ್ತು. 20ನೇ ಓವರ್​ ಯಾರು ಮಾಡಬೇಕೆಂಬುದು ನೇರವಾಗಿತ್ತು. ಆದ್ರೆ, 19ನೇ ಓವರ್ ಮಾತ್ರ ಸಿಕ್ಕಾಪಟ್ಟೆ ಚಾಲೆಂಜಿಂಗ್ ಆಗಿತ್ತು" ಎಂದರು.

"ಆಗ ನನಗನಿಸಿದ್ದು ಇದಕ್ಕೆ ರಿಂಕುನೇ ಸೂಕ್ತ ಎಂದು. ಅಭ್ಯಾಸದ ಪಂದ್ಯಗಳಲ್ಲಿ ಅವರ ಬೌಲಿಂಗ್ ನೋಡಿದ್ದೆ. ಹೀಗಾಗಿ ನನ್ನ ನಿರ್ಧಾರದ ಮೇಲೆ ನನಗೆ ಬಲವಾದ ನಂಬಿಕೆ ಇತ್ತು. ಅದೇ ಧೈರ್ಯದಿಂದ​ ಅವರಿಗೆ ಬಾಲ್ ಕೊಟ್ಟಿದ್ದು, ಮುಂದೆ ಏನಾಯ್ತು ಎಂಬುದು ನಿಮಗೆ ತಿಳಿದಿದೆ. ನನ್ನ ಕೆಲಸವನ್ನು ರಿಂಕು ತುಂಬ ಸುಲಭ ಮಾಡಿಬಿಟ್ಟರು" ಎಂದು ರಿಂಕು ಸಂತಸ ವ್ಯಕ್ತಪಡಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net