

ನವದೆಹಲಿ: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಈಗಾಗಲೆ ರೋಹಿತ್ ಶರ್ಮ ಸಾರಥ್ಯದ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆದರೆ 16 ಆಟಗಾರರ ತಂಡವನ್ನು ಭಾನುವಾರ ರಾತ್ರಿ ಹೆಸರಿಸಿದ ಸಂದರ್ಭದಲ್ಲಿ ಬಿಸಿಸಿಐ, ಉಪನಾಯಕ ಯಾರು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಇದು ಭಾರತ ಟೆಸ್ಟ್ ತಂಡದ ಭವಿಷ್ಯದ ನಾಯಕ ಯಾರು ಎಂಬ ಗೊಂದಲವನ್ನೂ ಹೆಚ್ಚಿಸಿದೆ.
ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯರನ್ನು ಹಿಂದಿಕ್ಕಿ ಚುಟುಕು ಕ್ರಿಕೆಟ್ ತಂಡದ ಹೊಸ ನಾಯಕರಾಗಿ ನೇಮಕಗೊಂಡಿದ್ದಾರೆ. ಏಕದಿನ ತಂಡಕ್ಕೆ ರೋಹಿತ್ ಶರ್ಮ ನಾಯಕರಾಗಿ ಮುಂದುವರಿದಿದ್ದರೂ, ಶುಭಮಾನ್ ಗಿಲ್ ಹೊಸ ಉಪನಾಯಕರಾಗಿ ನೇಮಕಗೊಂಡಿರುವುದರಿಂದ ಭವಿಷ್ಯದ ನಾಯಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಇದೇ ವೇಳೆ ರೋಹಿತ್ ಶರ್ಮ ಕನಿಷ್ಠ 2025ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ೈನಲ್ ತನಕ ಟೆಸ್ಟ್ ತಂಡದ ನಾಯಕರಾಗಿಯೂ ಮುಂದುವರಿಸುವುದು ಸ್ಪಷ್ಟವಾಗಿದೆ. ಆದರೆ ಟೆಸ್ಟ್ ತಂಡಕ್ಕೆ ಉಪನಾಯಕನನ್ನು ನೇಮಿಸದಿರುವುದರಿಂದ ಭವಿಷ್ಯದಲ್ಲಿ ಸಾರಥ್ಯ ವಹಿಸಿಕೊಳ್ಳುವವರು ಯಾರು ಎಂಬ ಗೊಂದಲ ಮುಂದುವರಿದಿದೆ.
ಕಳೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ವೇಗಿ ಜಸ್ಪ್ರೀತ್ ಬುಮ್ರಾ ತಂಡದ ಉಪನಾಯಕರಾಗಿದ್ದರು. ಇದೀಗ ಬಾಂಗ್ಲಾ ಸರಣಿಗೆ ಬುಮ್ರಾ ಮರಳಿದ್ದರೂ, ಅವರನ್ನು ಉಪನಾಯಕರನ್ನಾಗಿ ಹೆಸರಿಸಲಾಗಿಲ್ಲ.
ಕನ್ನಡಿಗ ಕೆಎಲ್ ರಾಹುಲ್ ಈ ಹಿಂದೆ ಟೆಸ್ಟ್ ಕ್ರಿಕೆಟ್ನಲ್ಲೂ ಹಂಗಾಮಿ ನಾಯಕತ್ವ ವಹಿಸಿದ್ದರು. ರಿಷಭ್ ಪಂತ್ ಕೂಡ 2022ರಲ್ಲಿ ಅಪಘಾತದಲ್ಲಿ ಗಾಯಕ್ಕೊಳ್ಳುವುದಕ್ಕೆ ಮುನ್ನ ಟೆಸ್ಟ್ ತಂಡದ ಭವಿಷ್ಯದ ನಾಯಕರಾಗಿ ಗುರುತಿಸಲ್ಪಟ್ಟಿದ್ದರು. ಇವರಿಬ್ಬರೂ ಕೂಡ ಬಾಂಗ್ಲಾ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಉಪನಾಯಕನ ಜವಾಬ್ದಾರಿಯನ್ನು ನೀಡಲಾಗಿಲ್ಲ.
ಬುಮ್ರಾರನ್ನು ಉಪನಾಯಕನ ಸ್ಥಾನದಲ್ಲಿ ಮುಂದುವರಿಸದಿರುವುದು ಅವರನ್ನು ಭವಿಷ್ಯದ ನಾಯಕನಾಗಿ ಪರಿಗಣಿಸದಿರುವ ಸೂಚನೆ ಎನ್ನಲಾಗುತ್ತಿದೆ. ಕಾರ್ಯದೊತ್ತಡದ ಕಾರಣ ನೀಡಿ ಹಾರ್ದಿಕ್ ಪಾಂಡ್ಯಕ್ಕೆ ಟಿ20 ತಂಡದ ಪೂರ್ಣಪ್ರಮಾಣದ ನಾಯಕತ್ವ ನೀಡದಿರುವಂತೆಯೇ, ಬುಮ್ರಾಗೂ ಕಾರ್ಯದೊತ್ತಡ ತಗ್ಗಿಸಲು ಟೆಸ್ಟ್ ನಾಯಕತ್ವ ನೀಡಲಾಗುತ್ತಿಲ್ಲ ಎನ್ನಲಾಗಿದೆ.
2022ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಮತ್ತು 2023ರಲ್ಲಿ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಬುಮ್ರಾ ಭಾರತ ತಂಡದ ನಾಯಕರಾಗಿದ್ದರು. ಆದರೆ ಫಿಟ್ನೆಸ್ ಮತ್ತು ವಿಶ್ರಾಂತಿಯ ಕಾರಣದಿಂದಾಗಿ ಬುಮ್ರಾ ಆಗಾಗ ಕೆಲ ಪಂದ್ಯಗಳನ್ನು ತಪ್ಪಿಸಿಕೊಳ್ಳುವುದರಿಂದ, ಹೊಸ ಕೋಚ್ ಗೌತಮ್ ಗಂಭೀರ್ ಅಧಿಕಾರಾವಧಿಯಲ್ಲಿ ಅವರನ್ನು ನಾಯಕತ್ವಕ್ಕೆ ಪರಿಗಣಿಸಲಾಗುವುದಿಲ್ಲ ಎನ್ನಲಾಗಿದೆ.
ಗಂಭೀರ್ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಯುವ ಆರಂಭಿಕ ಶುಭಮಾನ್ ಗಿಲ್ ಟಿ20&ಏಕದಿನ ತಂಡದ ಉಪನಾಯಕರಾಗಿ ಅಧಿಕೃತವಾಗಿ ನೇಮಕಗೊಂಡಿದ್ದರು. ಟೆಸ್ಟ್ ಸರಣಿಗೂ ಅವರನ್ನೇ ಉಪನಾಯಕರನ್ನಾಗಿ ನೇಮಿಸಿದ್ದರೆ ಮೂರೂ ಪ್ರಕಾರದ ತಂಡಕ್ಕೆ ಒಬ್ಬರೇ ಉಪನಾಯಕ ಮತ್ತು ಭವಿಷ್ಯದ ನಾಯಕ ಆದಂತಾಗುತಿತ್ತು. ಆದರೆ ಟೆಸ್ಟ್ ತಂಡದ ಆಡುವ 11ರ ಬಳಗದಲ್ಲಿ ಗಿಲ್ ಸ್ಥಾನ ಇನ್ನೂ ಭದ್ರವಾಗಿಲ್ಲ. ಯುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್, ನಾಯಕ ರೋಹಿತ್ ಶರ್ಮ ಜತೆಗೆ ಮೊದಲ ಆಯ್ಕೆಯ ಆರಂಭಿಕರಾಗಿರುತ್ತಾರೆ. ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯಂತೆ ಗಿಲ್ ಈ ಬಾರಿ ಮತ್ತೆ 3ನೇ ಕ್ರಮಾಂಕದಲ್ಲಿ ಆಡಬಹುದು. ಹೀಗಾಗಿ ಗಿಲ್ರನ್ನು ಟೆಸ್ಟ್ ತಂಡಕ್ಕೂ ಉಪನಾಯಕರನ್ನಾಗಿ ನೇಮಿಸುವ ಮುನ್ನ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಸ್ವಲ್ಪ ಸಮಯ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.