ಟೀಮ್​ ಇಂಡಿಯಾದಲ್ಲಿ ನಿಮ್ಮ ಫೇವರಿಟ್​ ಬೌಲರ್​, ಬ್ಯಾಟರ್​ ಯಾರು? ಧೋನಿ ಕೊಟ್ಟ ಉತ್ತರ ವೈರಲ್​!

MS Dhoni
Published on

ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಅವರು ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿರುವ ದಿಗ್ಗಜ ಆಟಗಾರ. ಟೀಮ್​ ಇಂಡಿಯಾಗೆ ಬಹುಕಾಲದ ಕನಸಾಗಿದ್ದ ವಿಶ್ವಕಪ್ ನೀಡುವುದರೊಂದಿಗೆ ಭಾರತಕ್ಕೆ ಟಿ20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನೂ ನೀಡಿದ ಅದೃಷ್ಟವಂತ. ನಿವೃತ್ತಿಯ ನಂತರ ಈ ಸ್ಟಾರ್ ಆಟಗಾರ ಐಪಿಎಲ್​ಗೆ ಮಾತ್ರ ಸೀಮಿತವಾಗಿದ್ದರು. ಧೋನಿ ಇತ್ತೀಚೆಗಷ್ಟೇ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಟೀಮ್​​ ಇಂಡಿಯಾದಲ್ಲಿ ನಿಮ್ಮ ನೆಚ್ಚಿನ ಬೌಲರ್ ಮತ್ತು ಬ್ಯಾಟರ್ ಯಾರು? ಎಂಬ ಪ್ರಶ್ನೆಯನ್ನು ಕೇಳಲಾಯಿತು. ಈ ಪ್ರಶ್ನೆಗೆ ಧೋನಿ ನೀಡಿದ ಉತ್ತರ ಇದೀಗ ವೈರಲ್​ ಆಗಿದೆ.

ಸದ್ಯ ಟೀಮ್​ ಇಂಡಿಯಾದಲ್ಲಿರುವ ಬೌಲರ್‌ಗಳ ಪೈಕಿ ತಮ್ಮ ನೆಚ್ಚಿನ ಬೌಲರ್ ಯಾರು ಎಂಬುದನ್ನು ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಹಿರಂಗಪಡಿಸಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿ ನನ್ನ ನೆಚ್ಚಿನ ಬೌಲರ್ ಅಂದರೆ ಅದು ಜಸ್ಪ್ರೀತ್ ಬುಮ್ರಾ. ಆದರೆ ಬ್ಯಾಟರ್ ಬಗ್ಗೆ ನಾನು ಏನನ್ನೂ ಹೇಳಲಾರೆ. ಏಕೆಂದರೆ ನಮ್ಮ ತಂಡದಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಿದ್ದಾರೆ. ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ತುಂಬಾ ಕಷ್ಟ ಎಂದು ಧೋನಿ ಹೇಳಿದರು.

ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಧೋನಿ, ಐಪಿಎಲ್ ಮಾತ್ರ ಆಡುತ್ತಿದ್ದಾರೆ. ಆದರೆ, ಅವರು ತಮ್ಮ ವಯಸ್ಸು ಮತ್ತು ಫಿಟ್ನೆಸ್ ಅನ್ನು ಪರಿಗಣಿಸಿ ಮುಂದಿನ ಐಪಿಎಲ್ ಸೀಸನ್ ಆಡುತ್ತಾರೆಯೇ? ಅಥವಾ ಇಲ್ಲವೇ? ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ.

ಐಪಿಎಲ್ 2025ರ ಸೀಸನ್‌ಗೆ ಮುಂಚಿತವಾಗಿ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೋನಿ ಅವರನ್ನು ಉಳಿಸಿಕೊಳ್ಳುತ್ತದೆಯೇ? ಅಥವಾ ಕೈಬಿಡುತ್ತದೆಯೇ? ಎಂಬ ಕುತೂಹಲ ಎಲ್ಲರಲ್ಲು ಇದೆ. ಧೋನಿ ಇದುವರೆಗೂ ಐಪಿಎಲ್ ನಿವೃತ್ತಿ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಧೋನಿ ಲಭ್ಯವಿದ್ದರೆ ಖಂಡಿತವಾಗಿಯೂ ಅವರನ್ನು ಉಳಿಸಿಕೊಳ್ಳುತ್ತೇವೆ ಎಂದು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಕೂಡ ಸ್ಪಷ್ಟಪಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net