

ಸಿಡ್ನಿ: ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಬಿದ್ದಾಗ ಸುಮಾರು 1 ಲಕ್ಷ ಜನರಿಂದ ತುಂಬಿದ್ದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗ್ರಂಥಾಲಯದಂತೆ ಮೌನ ಆವರಿಸಿತ್ತು ಎಂದು ಚಾಂಪಿಯನ್ ಆಸ್ಟ್ರೆಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಬಣ್ಣಿಸಿದ್ದಾರೆ.
ಕೆಎಲ್ ರಾಹುಲ್ ಜತೆ ಉಪಯುಕ್ತ ಜತೆಯಾಟವಾಡುತ್ತಿದ್ದ ಕೊಹ್ಲಿ 54 ರನ್ ಗಳಿಸಿ ಕಮ್ಮಿನ್ಸ್ ಎಸೆತದಲ್ಲಿ ಬೌಲ್ಡಾಗಿದ್ದರು. ನಂತರದಲ್ಲಿ ಭಾರತಕ್ಕೆ ಪಂದ್ಯದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಗಲೇ ಇಲ್ಲ. ಕೊಹ್ಲಿ ಆ ಹಂತದಲ್ಲಿ ಔಟಾಗಿದ್ದರಿಂದ ಭಾರತಕ್ಕೆ 300ರ ಸನಿಹ ತಲುಪುವ ಅವಕಾಶವೂ ತಪ್ಪಿದಂತಾಯಿತು. ಹೀಗಾಗಿ ಕೊಹ್ಲಿ ವಿಕೆಟ್ನ ಮಹತ್ವವನ್ನು ಅರಿತಿದ್ದ ಪ್ರೇಕ್ಷಕರು ಆಘಾತಕ್ಕೊಳಗಾಗಿ ಮೌನವಾಗಿದ್ದರು.
"ನಾವು ಕೊಹ್ಲಿ ವಿಕೆಟ್ನ ಸಂಭ್ರಮಾಚರಣೆ ನಡೆಸುತ್ತಿದ್ದಾಗ ಸ್ಟೀವನ್ ಸ್ಮಿತ್, 1 ಲಕ್ಷ ಭಾರತೀಯರಿಂದ ತುಂಬಿದ್ದ ಸ್ಟೇಡಿಯಂನಲ್ಲಿ ನೀರವ ಮೌನ ಆವರಿಸಿದ್ದನ್ನು ಗಮನಕ್ಕೆ ತಂದರು. ನಮ್ಮ ಪಾಲಿಗೆ ಅದೊಂದು ಸ್ಮರಣೀಯವಾದ ಕ್ಷಣ' ಎಂದು ಕಮ್ಮಿನ್ಸ್ ಹೇಳಿದ್ದಾರೆ.