

ನವದೆಹಲಿ: ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿಯ (Champions Trophy) ಆರನೇ ಪಂದ್ಯದಲ್ಲಿ ಕಿವೀಸ್ ಪಡೆ 5 ವಿಕೆಟ್ಗಳ ಭರ್ಜರಿ ಜಯ ಗಳಿಸಿದ್ದು, ಅಧಿಕೃತವಾಗಿ ಸೆಮಿಫಿನಾಲೆ ಪ್ರವೇಶಿಸಿದೆ. ಇತ್ತ ನ್ಯೂಜಿಲೆಂಡ್ ಜತೆಗೆ ಟೀಮ್ ಇಂಡಿಯಾ ಸೆಮಿಫೈನಲ್ಗೇರಿದರೆ, ಇತ್ತ ಸೋತ ಬಾಂಗ್ಲಾದೇಶ ತನ್ನೊಂದಿಗೆ ಆತಿಥೇಯ ಪಾಕಿಸ್ತಾನವನ್ನು ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡವು ಎದುರಾಳಿಗಳನ್ನು 236 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಬಳಿಕ ಬ್ಯಾಟಿಂಗ್ ಇಳಿದ ನ್ಯೂಜಿಲೆಂಡ್ ತಂಡವು ರಚಿನ್ ರವೀಂದ್ರ (112 ರನ್, 105 ಎಸೆತ, 12 ಬೌಂಡರಿ, 1 ಸಿಕ್ಸರ್) ಶತಕದ ನೆರವಿನಿಂದ ಗುರಿಯನ್ನು 46.1 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ ತಲುಪಿ ಗೆಲುವಿನ ನಗೆ ಬೀರಿತು. ಈ ಮೂಲಕ ಭಾರತದೊಂದಿಗೆ ಅಧಿಕೃತವಾಗಿ ಸೆಮಿಫೈನಲ್ಗೇರಿತು.
2025 ರ ಚಾಂಪಿಯನ್ಸ್ ಟ್ರೋಫಿಯ (Champions Trophy) ಸೆಮಿಫೈನಲ್ ಸ್ಪರ್ಧೆಯಲ್ಲಿ ಉಳಿಯಲು ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದ ಫಲಿತಾಂಶ ಬಾಂಗ್ಲಾದೇಶದ ಪರವಾಗಿ ಬರಬೇಕಿತ್ತು. ಆದರೆ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸುವ ಮೂಲಕ ಪಾಕಿಸ್ತಾನದ ಭರವಸೆಯನ್ನು ಹುಸಿಗೊಳಿಸಿತು. ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ನಿರೀಕ್ಷೆಯೊಂದಿಗೆ ಈ ಟೂರ್ನಿಗೆ ಆತಿಥ್ಯವಹಿಸಿದ್ದ ಪಾಕಿಸ್ತಾನ ತಂಡಕ್ಕೆ ಇದು ದೊಡ್ಡ ಹಿನ್ನಡೆಯಾಗಿದ್ದು, ಭಾರೀ ಮುಖಭಂಗವನ್ನುಂಟು ಮಾಡಿದೆ.
ಪಾಕಿಸ್ತಾನದ ಜೊತೆಗೆ ಬಾಂಗ್ಲಾದೇಶ ತಂಡವೂ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಈ ಎರಡೂ ತಂಡಗಳು ಈ ಟೂರ್ನಿಯಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನ್ನು ಅನುಭವಿಸಿದರೆ, ಎರಡನೇ ಪಂದ್ಯದಲ್ಲಿ ಭಾರತದ ವಿರುದ್ಧ ಸೋಲು ಕಂಡಿತು. ಮತ್ತೊಂದೆಡೆ, ಬಾಂಗ್ಲಾದೇಶ ತಂಡವು ನ್ಯೂಜಿಲೆಂಡ್‌ಗಿಂತ ಮೊದಲು ಭಾರತ ತಂಡದ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದ್ದು, ಈ ಎರಡೂ ತಂಡಗಳು ಗುಂಪು ಹಂತದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಪರಸ್ಪರ ವಿರುದ್ಧ ಆಡಲಿವೆ. ಇದು ಪಾಯಿಂಟ್ ಟೇಬಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.