

ಗಯಾನ: ಭರ್ಜರಿ ಪ್ರದರ್ಶನದ ಮೂಲಕ 09ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಅಜೇವಾಗಿ ಫೈನಲ್ ಪ್ರವೇಶಿಸಿದ್ದು, ಕಪ್ ಬರವನ್ನು ಈ ಬಾರಿ ನೀಗಿಸುವ ಸ್ಪಷ್ಟ ಸಂದೇಶ ರವಾನಿಸಿದೆ. ಶನಿವಾರ (ಜೂನ್ 29) ನಡೆಯುವ ಟಿ20 ವಿಶ್ವಕಪ್ನ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದು, ಕಪ್ ಗೆಲ್ಲುವ ನಿಟ್ಟಿನಲ್ಲಿ ರೋಹಿತ್ ಪಡೆ ತಾಲೀಮು ನಡೆಸುತ್ತಿದೆ.
ಈ ಬಾರಿಯ ಚುಟುಕು ವಿಶ್ವ ಸಮರದಲ್ಲಿ ಟೀಮ್ ಇಂಡಿಯಾ ಹಲವು ದಾಖಲೆಗಳನ್ನು ನಿರ್ಮಿಸಿದ್ದು, ಇದೀಗ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಸರಿಗಟ್ಟಿ ತನ್ನದಾಗಿಸಿಕೊಳ್ಳುವ ಮೂಲಕ ವರ್ಲ್ಡ್ ರೆಕಾರ್ಡ್ ನಿರ್ಮಿಸಿದೆ. ರೋಹಿತ್ ಪಡೆಯ ನಿರ್ಮಿಸಿರುವ ಈ ದಾಖಲೆ ಬೇರೆ ತಂಡಗಳ ನಿದ್ದೆಗೆಡಿಸಿದೆ.
ಐಸಿಸಿ ಅಡಿಯಲ್ಲಿ ಟೂರ್ನಮೆಂಟ್ಗಳಲ್ಲಿ ಅತಿ ಹೆಚ್ಚು ಬಾರಿ ಫಯನಲ್ ಆಡಿದ ವಿಶ್ವದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. ಮಾಜಿ ವಿಶ್ವ ಚಾಂಪಿಯನ್ನರು ಐಸಿಸಿ ಅಡಿಯಲ್ಲಿ ನಡೆಯುವ ಟೂರ್ನಿಗಳಲ್ಲಿ ಒಟ್ಟು 13ಬಾರಿ ಫೈನಲ್ ಪ್ರವೇಶಿಸಿದ್ದು, ಇದೀಗ ಈ ದಾಖಲೆಯನ್ನು ಟೀಮ್ ಇಂಡಿಯಾ ಸರಿಗಟ್ಟುವ ಮೂಲಕ ಆಸ್ಟ್ರೇಲಿಯಾಗೆ ಶಾಕ್ ನೀಡಿದೆ. ಟೀಮ್ ಇಂಡಿಯಾದ ಈ ಸಾಧನೆಗೆ ಮಾಜಿ ಕ್ರಿಕೆಟಿಗರು ಹಾಡಿ ಹೊಗಳುತ್ತಿದ್ದಾರೆ.
ಐಸಿಸಿ ನಡೆಸುವ ಟೂರ್ನಿಗಳಲ್ಲಿ ಅಂದರೆ ಏಕದಿನ, ಟಿ20, ಚಾಂಪಿಯನ್ಸ್ ಟ್ರೋಫಿ, ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಒಟ್ಟು 12 ಬಾರಿ ಫೈನಲ್ ಆಡಿರುವ ಟೀಮ್ ಇಂಡಿಯಾ ಇದೀಗ 13ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. ಈ ಮೂಲಕ 13 ಬಾರಿ ಐಸಿಸಿ ಫೈನಲ್ ಆಡಿರುವ ಆಸ್ಟ್ರೇಲಿಯಾ ತಂಡದ ದಾಖಲೆಯನ್ನು ಟೀಮ್ ಇಂಡಿಯಾ ಸರಿಗಟ್ಟಿದೆ.
ಈ ಹಿಂದಿನ 12 ಐಸಿಸಿ ಫೈನಲ್ನಲ್ಲಿ ಭಾರತ ತಂಡವು 5 ಬಾರಿ ಮಾತ್ರ ಪ್ರಶಸ್ತಿ ಗೆದ್ದುಕೊಂಡಿದೆ. 1983 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದುಕೊಂಡರೆ, 2007 ರಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಇನ್ನು 2002 ಮತ್ತು 2013 ರಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಇದಿಗ 13ನೇ ಬಾರಿಗೆ ಫೈನಲ್ಗೆ ಪ್ರವೇಶಿಸಿರುವ ಟೀಮ್ ಇಂಡಿಯಾ 6ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ. ಶನಿವಾರ (ಜೂನ್ 29) ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನ ಫೈನಲ್ನಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಮಣಿಸುವ ಮೂಲಕ ಎರಡನೇ ಬಾರಿಗೆ ಟಿ20 ವಿಶ್ವಕಪ್ಅನ್ನು ಮುಡಿಗೇರಿಸಿಕೊಳ್ಳಲಿದೆಯಾ ಎಂದು ಕಾದು ನೋಡಬೇಕಿದೆ.