ವಿಶ್ವಕಪ್​ಗೆ ಅರ್ಹತೆಗಾಗಿ ವೆಸ್ಟ್​ ಇಂಡೀಸ್​ ಮುಂದಿರುವ ದುರ್ಗಮ ಹಾದಿ ಹೇಗಿದೆ ಗೊತ್ತೇ?

west indeis web
Published on

ಹರಾರೆ: ಹಿಂದೆ 70-80ರ ದಶಕದಲ್ಲಿ ಕ್ರಿಕೆಟ್​ ಜಗತ್ತಿನಲ್ಲಿ ಪ್ರಾಬಲ್ಯ ಮೆರೆದಿದ್ದ ವೆಸ್ಟ್​ ಇಂಡೀಸ್​, ಏಕದಿನ ವಿಶ್ವಕಪ್​ನ ಆರಂಭಿಕ ಎರಡೂ ಆವೃತ್ತಿಗಳಲ್ಲಿ ಪ್ರಶಸ್ತಿ ಗೆದ್ದು ಬೀಗಿತ್ತು. ಆದರೆ ಈಗ ವೆಸ್ಟ್​ ಇಂಡೀಸ್​ ತಂಡ ಏಕದಿನ ವಿಶ್ವಕಪ್​ ಟೂರ್ನಿಯ ಪ್ರಧಾನ ಸುತ್ತಿಗೆ ಅರ್ಹತೆ ಪಡೆಯಲು ಪರದಾಡುವಂತಾಗಿದೆ. ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳಿಗಿಂತಲೂ ಹಿಂದೆ ಬಿದ್ದು, ಅಗ್ರ 8 ತಂಡಗಳಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ವಿಂಡೀಸ್​ ಸದ್ಯ ಏಕದಿನ ವಿಶ್ವಕಪ್​ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಆಡುತ್ತಿದೆ. ಇಲ್ಲೂ ಆತಿಥೇಯ ಜಿಂಬಾಬ್ವೆ ಮತ್ತು ನೆದರ್ಲೆಂಡ್​ ವಿರುದ್ಧ ಆಘಾತಕಾರಿ ಸೋಲು ಅನುಭವಿಸುವುದರೊಂದಿಗೆ ವಿಂಡೀಸ್​ ತಂಡ ವಿಶ್ವಕಪ್​ಗೆ ಅರ್ಹತೆ ಸಂಪಾದಿಸುವ ಹಾದಿ ಇನ್ನಷ್ಟು ದುರ್ಗಮಗೊಂಡಿದೆ.

ಜಿಂಬಾಬ್ವೆ ಮತ್ತು ನೆದರ್ಲೆಂಡ್​ ವಿರುದ್ಧದ ಸೋಲಿನ ನಡುವೆಯೂ ವಿಂಡೀಸ್​ ತಂಡ ಟೂರ್ನಿಯ ಮುಂದಿನ ಸುತ್ತು ಅಂದರೆ ಸೂಪರ್​ ಸಿಕ್ಸ್​ ಹಂತಕ್ಕೇರುವಲ್ಲಿ ಯಶಸ್ವಿಯಾಗಿದೆ. ಆದರೆ ವಿಂಡೀಸ್​ ತಂಡ ಸೂಪರ್​ ಸಿಕ್ಸ್​ ಹಂತಕ್ಕೆ ಬರಿಗೈಯಲ್ಲಿ ತೆರಳಿರುವುದು ಭಾರಿ ಹಿನ್ನಡೆ ಎನಿಸಿದೆ.

ಟೂರ್ನಿಯ ನಿಯಮಾವಳಿ ಪ್ರಕಾರ, ಗುಂಪು ಹಂತದಿಂದ ಮೇಲೇರುವ ತಂಡಗಳು, ಅಲ್ಲಿಂದ ಮೇಲೇರಿದ ಇನ್ನೆರಡು ತಂಡಗಳ ವಿರುದ್ಧ ಗಳಿಸಿದ ಅಂಕ ಮತ್ತು ರನ್​ರೇಟ್​ಅನ್ನು ಸೂಪರ್​ ಸಿಕ್ಸ್​ ಹಂತಕ್ಕೆ ಕೊಂಡೊಯ್ಯಲಿವೆ. ಆದರೆ, ಎ ಗುಂಪಿನಿಂದ ಸೂಪರ್​ ಸಿಕ್ಸ್​ ಹಂತಕ್ಕೇರಿದ ಜಿಂಬಾಬ್ವೆ, ನೆದರ್ಲೆಂಡ್​ ವಿರುದ್ಧ ಸೋತಿರುವುದರಿಂದ ವಿಂಡೀಸ್​, ಒಂದೂ ಅಂಕವನ್ನು ಕೊಂಡೊಯ್ದಿಲ್ಲ. ಹೀಗಾಗಿ ಸೂಪರ್​ ಸಿಕ್ಸ್​ ಹಂತದಿಂದ ೈನಲ್​ ಹಂತಕ್ಕೇರುವುದು ವಿಂಡೀಸ್​ ಪಾಲಿಗೆ ಬಹುದೊಡ್ಡ ಸವಾಲಾಗಿದೆ.

ಅಗ್ರ 2 ತಂಡಗಳ ಪೈಕಿ ಒಂದಾಗಿ ಫೈನಲ್​ಗೇರಿದರಷ್ಟೇ ವಿಶ್ವಕಪ್​ ಅರ್ಹತೆ ಒಲಿಯಲಿದೆ. ಈ ನಿಟ್ಟಿನಲ್ಲಿ ವಿಂಡೀಸ್​ ತಂಡ ಸೂಪರ್​ ಸಿಕ್ಸ್​ನಲ್ಲಿ ಎಲ್ಲ 3 ಪಂದ್ಯಗಳನ್ನು ಗೆದ್ದರೂ, ಅಗ್ರ 2 ತಂಡಗಳಲ್ಲಿ ಒಂದಾಗುವ ಖಾತ್ರಿ ಇರುವುದಿಲ್ಲ. ಯಾಕೆಂದರೆ ಜಿಂಬಾಬ್ವೆ ಈಗಾಗಲೆ 4 ಅಂಕಗಳನ್ನು ಸೂಪರ್​ ಸಿಕ್ಸ್​ಗೆ ಕೊಂಡೊಯ್ದಿದ್ದರೆ, ಮತ್ತೊಂದು ಗುಂಪಿನಿಂದ ಬರುವ ಶ್ರೀಲಂಕಾ ಕೂಡ 4 ಅಂಕ ಕೊಂಡೊಯ್ಯುವುದು ಬಹುತೇಕ ಖಚಿತವೆನಿಸಿದೆ.

ಬಿ ಗುಂಪಿನಿಂದ ಶ್ರೀಲಂಕಾ, ಸ್ಕಾಟ್ಲೆಂಡ್​ ಮತ್ತು ಓಮನ್​ ಸೂಪರ್​ ಸಿಕ್ಸ್​ ಹಂತಕ್ಕೇರಿದ್ದು, ಈ ಮೂರೂ ತಂಡಗಳ ವಿರುದ್ಧ ಗೆದ್ದರೆ ವಿಂಡೀಸ್​ ರನ್​ರೇಟ್​ ಲೆಕ್ಕಾಚಾರದಲ್ಲಿ ಫೈನಲ್​ಗೇರಿ ವಿಶ್ವಕಪ್​ ಅರ್ಹತೆ ಒಲಿಸಿಕೊಳ್ಳಬಹುದಾಗಿದೆ. ಆದರೆ, ಆಗ ಸೂಪರ್​ ಸಿಕ್ಸ್​ ಹಂತದ ಇತರ ಫಲಿತಾಂಶಗಳೂ ನಿರ್ಣಾಯಕವೆನಿಸಲಿವೆ. ಸೂಪರ್​ ಸಿಕ್ಸ್​ ಹಂತದಲ್ಲಿ ವಿಂಡೀಸ್​ ಒಂದು ಪಂದ್ಯವನ್ನು ಸೋತರೂ, ವಿಶ್ವಕಪ್​ ಆಸೆಯನ್ನು ಬಹುತೇಕ ಕೈಚೆಲ್ಲಬೇಕಾಗುತ್ತದೆ.

ಒಂದು ವೇಳೆ ವಿಂಡೀಸ್​ ಅರ್ಹತೆ ಪಡೆಯಲು ವಿಲವಾದರೆ, ಅಕ್ಟೋಬರ್​-ನವೆಂಬರ್​ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ಟೂರ್ನಿಯು, ಅರ್ಜೆಂಟೀನಾ ಅಥವಾ ಬ್ರೆಜಿಲ್​ ತಂಡವಿಲ್ಲದ ಫಿಫಾ ವಿಶ್ವಕಪ್​, ಭಾರತ ತಂಡವಿಲ್ಲದ ಹಾಕಿ ವಿಶ್ವಕಪ್​, ಅಮೆರಿಕ ಅಥವಾ ಚೀನಾ ಸ್ಪರ್ಧಿಗಳಿಲ್ಲದ ಒಲಿಂಪಿಕ್ಸ್​ ಮತ್ತು ಯುರೋಪ್​ ಆಟಗಾರರಿಲ್ಲದ ಟೆನಿಸ್​ ಗ್ರಾಂಡ್​ ಸ್ಲಾಂ ಟೂರ್ನಿಯಂತಾಗಲಿದೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net