

ಲಂಡನ್: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಈಗಾಗಲೆ ಕರೊನಾ ಹಾವಳಿಯ ನಡುವೆಯೂ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಯಲ್ಲಿ ಆಡಲು ಸಜ್ಜಾಗುತ್ತಿದೆ. ಜೈವಿಕ-ಸುರಕ್ಷಾ ವಾತಾವರಣದಲ್ಲಿ ನಡೆಯಲಿರುವ ಈ ಸರಣಿಗೆ ಮುನ್ನ ವಿಂಡೀಸ್ ಆಟಗಾರರು ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ವೇಗದ ಬೌಲರ್ ಕೆಮಾರ್ ರೋಚ್ ಜನ್ಮದಿನದ ಸಂಭ್ರಮಾಚರಣೆಯ ವೇಳೆಯೂ ಸಹ-ಆಟಗಾರರು ಮತ್ತು ತಂಡದ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದು ಇದಕ್ಕೆ ಸಾಕ್ಷಿ.
ಹೆಚ್ಚಿನ ಕಡೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಜವಾಬ್ದಾರಿ ಮೆರೆಯಲಾಗುತ್ತಿದೆ. ಆದರೆ ವಿಂಡೀಸ್ ಕ್ರಿಕೆಟಿಗರ ನಡೆ ಎಲ್ಲರಿಗೂ ಮಾದರಿಯಾಗಿದೆ. ರೋಚ್ ಬರ್ತ್ಡೇ ಪಾರ್ಟಿಯ ವಿಡಿಯೋವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಲಾಗಿದ್ದು, ಇದರಲ್ಲಿ ಆಟಗಾರರು ಸಾಮಾಜಿಕ ಅಂತರ ಕಾಯ್ದುಕೊಂಡು ರೋಚ್ಗೆ ಶುಭಾಶಯ ಹೇಳಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋ ಕೂಡ ವೈರಲ್ ಆಗಿದೆ.
ಜೂನ್ 9ರಂದೇ ಇಂಗ್ಲೆಂಡ್ಗೆ ಆಗಮಿಸಿರುವ ವಿಂಡೀಸ್ ಕ್ರಿಕೆಟಿಗರು, ಜುಲೈ 8ರಿಂದ ಆತಿಥೇಯರ ಎದುರು 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ. ವಿಂಡೀಸ್ ತಂಡದ 30 ಆಟಗಾರರ ನಡುವೆ 2 ತಂಡಗಳನ್ನು ರಚಿಸಿ ಈಗಾಗಲೆ ತ್ರಿದಿನ ಅಭ್ಯಾಸ ಪಂದ್ಯವನ್ನೂ ಆಡಲಾಗಿದೆ.