

ಬ್ರಿಜ್ಟೌನ್: ವೆಸ್ಟ್ ಇಂಡೀಸ್ ಕ್ರಿಕೆಟ್ ಬ್ಯಾಟಿಂಗ್ ದಿಗ್ಗಜ ಎವರ್ಟನ್ ವೀಕ್ಸ್ ಬುಧವಾರ ನಿಧನ ಹೊಂದಿದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ದಶಕಕ್ಕೂ ಹೆಚ್ಚು ಕಾಲ ವಿಂಡೀಸ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದ್ದ ‘3 ಡಬ್ಲ್ಯುಸ್’ ಖ್ಯಾತಿಯ ತ್ರಿವಳಿ ಬ್ಯಾಟ್ಸ್ಮನ್ಗಳ ವೀಕ್ಸ್ ಒಬ್ಬರಾಗಿದ್ದರು. ಫ್ರಾಂಕ್ ವೋರೆಲ್ ಮತ್ತು ಕ್ಲೈಡ್ ವಾಲ್ಕಟ್ ಮತ್ತಿಬ್ಬರು. ಬಾರ್ಬಡೋಸ್ನಲ್ಲಿ ಜನಿಸಿದ ವೀಕ್ಸ್ ಕೋಚ್, ವೀಕ್ಷಕವಿವರಣೆಕಾರ, ಟೀಮ್ ಮ್ಯಾನೇಜರ್, ಐಸಿಸಿ ರೆಫ್ರಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಐಸಿಸಿಯ ಹಾಲ್ ಆಫ್ ಫೇಮ್ೂ ಸೇರ್ಪಡೆಗೊಂಡಿದ್ದರು. ವೀಕ್ಸ್ 1995ರಲ್ಲಿ ಬ್ರಿಟನ್ನಿಂದ ಪ್ರತಿಷ್ಠಿತ ‘ಸರ್’ (ನೈಟ್ಹುಡ್) ಗೌರವಕ್ಕೂ ಪಾತ್ರರಾಗಿದ್ದರು. 22ನೇ ವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ಧ ಕೆನ್ಸಿಂಗ್ಸ್ಟನ್ ಓವಲ್ನಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅವರು, ದಶಕದ ನಂತರ ಪಾಕಿಸ್ತಾನ ವಿರುದ್ಧ ಟ್ರಿನಿಡಾಡ್ನಲ್ಲಿ ಅಂತಿಮ ಟೆಸ್ಟ್ ಆಡಿದ್ದರು.
ವಿಂಡೀಸ್ಗೆ ಬಲ ತುಂಬಿದ್ದ 3 ಡಬ್ಲ್ಯುಸ್
ಬಲಗೈ ಬ್ಯಾಟ್ಸ್ಮನ್ ವೀಕ್ಸ್ ಅವರು ‘3 ಡಬ್ಲ್ಯುಸ್’ ಖ್ಯಾತರಲ್ಲಿ ನಿಧನ ಹೊಂದಿದ ಕೊನೆಯವರಾಗಿದ್ದಾರೆ. ಮೂವರೂ 1948ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಮೂವರೂ 1924ರ ಆಗಸ್ಟ್ನಿಂದ 1926ರ ಜನವರಿ ನಡುವೆ 18 ತಿಂಗಳ ಅಂತರದಲ್ಲಿ ಜನಿಸಿದವರು. ವೊರೆಲ್ 1967ರಲ್ಲಿ 42ನೇ ವಯಸ್ಸಿನಲ್ಲೇ ನಿಧನ ಹೊಂದಿದ್ದರೆ, ವಾಲ್ಕಟ್ 2006ರಲ್ಲಿ 80ನೇ ವಯಸ್ಸಿನಲ್ಲಿ ತೀರಿಕೊಂಡಿದ್ದರು. ಮೂವರು ಒಟ್ಟಾರೆಯಾಗಿ 39 ಟೆಸ್ಟ್ ಶತಕ ಸಿಡಿಸಿದ್ದರು. ಕ್ರಿಕೆಟ್ ಜಗತ್ತಿನಲ್ಲಿ ವಿಂಡೀಸ್ ಪ್ರಾಬಲ್ಯ ಸಾಧಿಸಲು ಇವರು ಹಾಕಿಕೊಟ್ಟ ಬುನಾದಿಯೇ ಪ್ರಮುಖವಾಗಿತ್ತು. ವೊರೆಲ್, ವಾಲ್ಕಟ್ ಸಮಾಧಿ ಇರುವ ಬ್ರಿಜ್ಟೌನ್ ಹೊರವಲಯದ ಭೂಮಿಯಲ್ಲೇ ವೀಕ್ಸ್ ಅವರ ಅಂತ್ಯಸಂಸ್ಕಾರವನ್ನೂ ಮಾಡಲಾಗಿದೆ. ಇದರಿಂದ ‘3 ಡಬ್ಲ್ಯುಸ್’ ಮತ್ತೆ ಒಗ್ಗೂಡಿದ್ದಾರೆ.
ಭಾರತ ವಿರುದ್ಧ ಸತತ 4 ಶತಕ!
ಟೆಸ್ಟ್ ಕ್ರಿಕೆಟ್ನಲ್ಲಿ ಸತತ 5 ಇನಿಂಗ್ಸ್ಗಳಲ್ಲಿ ಶತಕ ಸಿಡಿಸಿದ್ದು ಈಗಲೂ ಎವರ್ಟನ್ ವೀಕ್ಸ್ ಹೆಸರಿನಲ್ಲಿರುವ ಅಪರೂಪದ ವಿಶ್ವದಾಖಲೆ. 1948ರಲ್ಲಿ ಅವರು ಇಂಗ್ಲೆಂಡ್ ವಿರುದ್ಧ 141 ರನ್ ಬಾರಿಸಿದ್ದರು. ಬಳಿಕ ಭಾರತ ಪ್ರವಾಸದಲ್ಲಿ 128, 194, 162 ಮತ್ತು 101 ರನ್ ಸಿಡಿಸಿದ್ದರು. ಸತತ 6ನೇ ಶತಕ ಸಿಡಿಸುವ ಸನಿಹ ಕೂಡ ಬಂದಿದ್ದ ಅವರು 90 ರನ್ ಗಳಿಸಿದ್ದಾಗ ವಿವಾದಾತ್ಮಕ ತೀರ್ಪಿನಿಂದ ರನೌಟ್ ಆಗಿದ್ದರು. ಅವರ 58.61 ಸರಾಸರಿಯು ಟೆಸ್ಟ್ ಕ್ರಿಕೆಟ್ ಇತಿಹಾಸದ ಅಗ್ರ 10 ಸರಾಸರಿಗಳಲ್ಲಿ ಸ್ಥಾನ ಪಡೆದಿದೆ.
ಡಾನ್ ಬ್ರಾಡ್ಮನ್ಗಿಂತ ವೇಗವಾಗಿ ಸಾವಿರ ರನ್
ಎವರ್ಟನ್ ವೀಕ್ಸ್ ಕೇವಲ 12 ಇನಿಂಗ್ಸ್ ಗಳಲ್ಲೇ (9 ಪಂದ್ಯ) ಸಾವಿರ ರನ್ ಸಿಡಿಸಿದ್ದರು. ಇದು ದಿಗ್ಗಜ ಸರ್ ಡಾನ್ ಬ್ರಾಡ್ಮನ್ಗಿಂತಲೂ (13 ಇನಿಂಗ್ಸ್) ವೇಗದ ಸಾಧನೆಯಾಗಿದೆ. ಆಡಿದ 4ನೇ ಟೆಸ್ಟ್ನಲ್ಲೇ ಶತಕ ಸಿಡಿಸಿದ ಬಳಿಕ ಅವರು ಮುಂದಿನ 13 ಇನಿಂಗ್ಸ್ಗಳಲ್ಲಿ 6 ಶತಕ ಮತ್ತು 5 ಅರ್ಧಶತಕ ಸಿಡಿಸಿದ್ದರು. ಈ ವೇಳೆ 48 ರನ್ ಅವರ ಕನಿಷ್ಠ ಗಳಿಕೆಯಾಗಿತ್ತು.
ಕ್ರಿಕೆಟ್ ಜಗತ್ತಿನ ಕಂಬನಿ
ಐಸಿಸಿ, ಎಂಸಿಸಿ, ದಿಗ್ಗಜ ಸಚಿನ್ ತೆಂಡುಲ್ಕರ್ ಸಹಿತ ಕ್ರಿಕೆಟ್ ಜಗತ್ತು ಎವರ್ಟನ್ ವೀಕ್ಸ್ ನಿಧನಕ್ಕೆ ಕಂಬನಿ ಮಿಡಿದಿದೆ. ಭಾರತ ತಂಡದ ಕೋಚ್ ರವಿಶಾಸ್ತ್ರಿ, ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್ ಕೂಡ ಸಂತಾಪ ಸೂಚಿಸಿದ್ದಾರೆ. ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗರಾದ ವಿವ್ ರಿಚರ್ಡ್ಸ್, ಇಯಾನ್ ಬಿಷಪ್ ಅವರೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈಡನ್ ಗಾರ್ಡನ್ಸ್ನಲ್ಲಿ ನಿರ್ವಿುಸಲಾಗುವ ಕ್ರಿಕೆಟ್ ಮ್ಯೂಸಿಯಂನಲ್ಲಿ ವೀಕ್ಸ್ಗೆ ಪ್ರಮುಖ ಸ್ಥಾನ ಸಿಗಲಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ತಿಳಿಸಿದೆ. 1948ರಲ್ಲಿ ಅವರು ಕೋಲ್ಕತ ಟೆಸ್ಟ್ನಲ್ಲಿ 162 ಮತ್ತು 101 ರನ್ ಸಿಡಿಸಿದ್ದರು. ಸ್ವಾತಂತ್ರ್ಯದ ಬಳಿಕ ಈಡನ್ನಲ್ಲಿ ಅಂತಾರಾಷ್ಟ್ರೀಯ ಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಯೂ ಅವರದಾಗಿದೆ.
ದಿಗ್ಗಜ ಸರ್ ಎವರ್ಟನ್ ವೀಕ್ಸ್ ಇನ್ನಿಲ್ಲವೆಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರ ಕುಟುಂಬ ಮತ್ತು ಆಪ್ತರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ. ದೇಶದ ಅತ್ಯಂತ ಶ್ರೇಷ್ಠ ಕ್ರಿಕೆಟಿಗರಲ್ಲಿ ಅವರೂ ಒಬ್ಬರು. ನಿಜವಾದ ಐಕಾನ್. | ವಿವ್ ರಿಚರ್ಡ್ಸ್ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ