

ದುಬೈ: ಎರಡು ಬಾರಿಯ ಚಾಂಪಿಯನ್ ತಂಡ ವೆಸ್ಟ್ ಇಂಡೀಸ್ ಹಾಗೂ ಹಾಲಿ ರನ್ನರ್‌ಅಪ್ ಇಂಗ್ಲೆಂಡ್ ತಂಡಗಳು ದಿನದ 2ನೇ ಪಂದ್ಯದಲ್ಲಿ ಎದುರಾಗಲಿವೆ. 2016ರ ಟೂರ್ನಿಯ ಫೈನಲ್‌ನಲ್ಲಿ ಎದುರಾಗಿದ್ದ ಉಭಯ ತಂಡಗಳ ಕದನ ರೋಚಕತೆಗೆ ಸಾಕ್ಷಿಯಾಗಿತ್ತು. ಕೋಲ್ಕತದಲ್ಲಿ ನಡೆದ ಫೈನಲ್‌ನ ಕಡೇ ಓವರ್‌ನಲ್ಲಿ ವೆಸ್ಟ್ ಇಂಡೀಸ್ ಎದುರು ಅನುಭವಿಸಿದ್ದ ನಿರಾಸೆಗೆ ಇಂಗ್ಲೆಂಡ್ ತಂಡ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಟಿ20 ತಜ್ಞರನ್ನೇ ಹೊಂದಿರುವ ವೆಸ್ಟ್ ಇಂಡೀಸ್ ತಂಡ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಸೋಲು ಕಂಡ ಹಿನ್ನಡೆ ಹೊಂದಿದೆ.
ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳ ಎದುರು ವಿಂಡೀಸ್ ಬ್ಯಾಟರ್‌ಗಳು ರನ್‌ಬರ ಎದುರಿಸಿದ್ದರು. ಅನುಭವಿ ಆಲ್ರೌಂಡರ್ ಆಂಡ್ರೆ ರಸೆಲ್ ಕೂಡ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2 ವರ್ಷಗಳ ಹಿಂದಷ್ಟೇ ಏಕದಿನ ವಿಶ್ವಕಪ್ ಜಯಿಸಿದ್ದ ಇಂಗ್ಲೆಂಡ್ ತಂಡ ಮತ್ತೊಂದು ಗೆಲುವಿನ ಕನಸಿನಲ್ಲಿದೆ. ಬೆನ್ ಸ್ಟೋಕ್ಸ್, ಆರ್ಚರ್ ಹಾಗೂ ಸ್ಯಾಮ್ ಕರ‌್ರನ್‌ರಂಥ ಪ್ರಮುಖರ ಅನುಪಸ್ಥಿತಿ ನಡುವೆ ಬಲಿಷ್ಠ ತಂಡ ಸಂಯೋಜನೆಯ ಸವಾಲು ಹೊಂದಿದೆ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಟಿ20 ವಿಶ್ವಕಪ್ ಮುಖಾಮುಖಿ: 5, ಇಂಗ್ಲೆಂಡ್: 0, ವೆಸ್ಟ್ ಇಂಡೀಸ್: 5
ಮುಖಾಮುಖಿ: 18, ಇಂಗ್ಲೆಂಡ್: 7, ವೆಸ್ಟ್ ಇಂಡೀಸ್: 11