ಕರ್ನಾಟಕಕ್ಕೆ ಕಠಿಣ ಸವಾಲೆಸೆದ ಬಂಗಾಳ; ಚೇಸಿಂಗ್​ಗೆ ಬಲ ತುಂಬದ ರಾಹುಲ್​, ಕರುಣ್​

Karnataka Challenge 2 March 20
Published on

ಕೋಲ್ಕತ: ಆತೀಥೇಯ ಬಂಗಾಳ ನೀಡಿದ ಕಠಿಣ ಸವಾಲು ಬೆನ್ನಟ್ಟಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ಸೆಮಿಫೈನಲ್ ಹೋರಾಟದಲ್ಲಿ ಆರಂಭಿಕ ಆಘಾತದ ನಡುವೆಯೂ ಪ್ರತಿಹೋರಾಟದ ಸೂಚನೆ ರವಾನಿಸಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನದಾಟದಲ್ಲಿ ಕರುಣ್ ನಾಯರ್ ಪಡೆ ಸರ್ವಾಂಗೀಣ ನಿರ್ವಹಣೆ ಮೂಲಕ ಗೆಲುವಿನ ಆಸೆ ಉಳಿಸಿಕೊಂಡಿದೆ. ಪಂದ್ಯ ಸ್ಪಷ್ಟ ಫಲಿತಾಂಶದತ್ತ ಸಾಗಿದ್ದು, ಮಂಗಳವಾರದ ದಿನದಾಟ ಕುತೂಹಲ ಕೆರಳಿಸಿದೆ.

ಬಂಗಾಳ ನೀಡಿದ 352 ರನ್​ಗಳ ಸವಾಲಿನ ಗುರಿ ಬೆನ್ನಟ್ಟಿರುವ 8 ಬಾರಿಯ ಚಾಂಪಿಯನ್ ಕರ್ನಾಟಕ, ದೇವದತ್ ಪಡಿಕಲ್ (50* ರನ್, 109 ಎಸೆತ, 6 ಬೌಂಡರಿ) ಅಜೇಯ ಅರ್ಧಶತಕದಾಟದ ನೆರವಿನಿಂದ 3ನೇ ದಿನದಂತ್ಯಕ್ಕೆ 3 ವಿಕೆಟ್​ಗೆ 98 ರನ್ ಪೇರಿಸಿದ್ದು, ಗೆಲುವಿಗಾಗಿ ಇನ್ನೂ 254 ರನ್ ಗಳಿಸಬೇಕಿದೆ. ಇದಕ್ಕೂ ಮೊದಲು 4 ವಿಕೆಟ್​ಗೆ 72 ರನ್​ಗಳಿಂದ ದಿನದಾಟ ಆರಂಭಿಸಿದ ಬಂಗಾಳ ತಂಡ, ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ (23ಕ್ಕೆ 4) ಹಾಗೂ ಕೆ.ಗೌತಮ್ (15ಕ್ಕೆ 3) ಮಾರಕ ದಾಳಿಗೆ ನಲುಗಿ 161 ರನ್​ಗಳಿಗೆ ಪತನ ಕಂಡಿತು. ಬಂಗಾಳ ಮೊದಲ ಇನಿಂಗ್ಸ್​ನಲ್ಲಿ 312 ರನ್ ಗಳಿಸಿದ್ದರೆ, ಕರ್ನಾಟಕ 122 ರನ್​ಗಳಿಗೆ ಆಲೌಟ್ ಆಗಿ 190 ರನ್ ಹಿನ್ನಡೆ ಅನುಭವಿಸಿತ್ತು.

ಪಡಿಕಲ್ ‘ಸಮರ್ಥ’ ನಿರ್ವಹಣೆ: ಭೋಜನ ವಿರಾಮದ ಬಳಿಕ ಕೆಲ ಹೊತ್ತಿನಲ್ಲೇ ಬಂಗಾಳ ತಂಡವನ್ನು ಕಟ್ಟಿಹಾಕಿ ಇನಿಂಗ್ಸ್ ಆರಂಭಿಸಿದ ಪ್ರವಾಸಿ ಕರ್ನಾಟಕಕ್ಕೆ ರಾಷ್ಟ್ರೀಯ ತಂಡದ ಸದಸ್ಯ ಕೆ.ಎಲ್ ರಾಹುಲ್ ಉತ್ತಮ ಆರಂಭ ಒದಗಿಸಲು ವಿಫಲರಾದರು. ವೇಗಿ ಇಶಾನ್ ಪೊರೆಲ್ ಎಸೆದ ಇನಿಂಗ್ಸ್​ನ 2ನೇ ಎಸೆತದಲ್ಲೇ ಎಲ್​ಬಿ ಬಲೆಗೆ ಬಿದ್ದರು. ಡಿಆರ್​ಎಸ್ ಉಪಯೋಗಿಸಿಕೊಳ್ಳಲು ವಿಳಂಬ ಮಾಡಿದ ಕಾರಣ ಅಂಪೈರ್ ತೀರ್ಪಿಗೆ ತಲೆಬಾಗಿ ನಿರಾಸೆಯೊಂದಿಗೆ ಪೆವಿಲಿಯನ್​ಗೆ ವಾಪಸಾದರು. ಸಮರ್ಥ್ (27 ರನ್, 69 ಎಸೆತ, 2 ಬೌಂಡರಿ) ಕೂಡಿಕೊಂಡ ಯುವ ಬ್ಯಾಟ್ಸ್​ಮನ್ ದೇವದತ್ ಪಡಿಕಲ್ ವಿಕೆಟ್ ಕಾಯ್ದುಕೊಳ್ಳಲು ಯತ್ನಿಸಿದರು. ಬಂಗಾಳ ವೇಗಿಗಳ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಆರಂಭಿಕ ಹಂತದಲ್ಲಿ ಯಾವುದೇ ಅಪಾಯವಾಗದಂತೆ ಎಚ್ಚರಿಕೆ ವಹಿಸಿತು. ಅಂತಿಮವಾಗಿ ಆಕಾಶ್ ದೀಪ್ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. 2ನೇ ವಿಕೆಟ್​ಗೆ 57 ರನ್ ಕಲೆ ಹಾಕಿದ್ದ ವೇಳೆ ಸಮರ್ಥ್ ಎಲ್​ಬಿ ಬಲೆಗೆ ಬಿದ್ದರು. ಅಂಪೈರ್ ತೀರ್ಪಿನ ವಿರುದ್ಧ ಸಮರ್ಥ್ ಡಿಆರ್​ಎಸ್ ಮೊರೆ ಹೋದರೂ ಉಪಯೋಗವಾಗಲಿಲ್ಲ. ನಂತರ ನಾಯಕ ಕರುಣ್ ನಾಯರ್ (6) ಬಂದಷ್ಟೇ ವೇಗವಾಗಿ ವಾಪಸಾದರು. ಇದರಿಂದ 76 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡ ಕರ್ನಾಟಕ ಅಪಾಯದ ಸುಳಿಗೆ ಸಿಲುಕಿತು. ಮನೀಷ್ ಪಾಂಡೆ (11*) ಹಾಗೂ ಪಡಿಕಲ್ ಜೋಡಿ ಜವಾಬ್ದಾರಿಯುತ ನಿರ್ವಹಣೆಯೊಂದಿಗೆ ಮುರಿಯದ 4ನೇ ವಿಕೆಟ್​ಗೆ 22 ರನ್ ಪೇರಿಸಿದೆ.

ದಿಢೀರ್ ಕುಸಿತ ಕಂಡ ಸೌರಾಷ್ಟ್ರ

ರಾಜ್​ಕೋಟ್​ನಲ್ಲಿ ನಡೆಯುತ್ತಿರುವ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಚಿಂತನ್ ಗಜಾ (15ಕ್ಕೆ 5) ಮಾರಕ ದಾಳಿ ನೆರವಿನಿಂದ ಮಾಜಿ ಚಾಂಪಿಯನ್ ಗುಜರಾತ್, ಆತಿಥೇಯ ಸೌರಾಷ್ಟ್ರ ತಂಡಕ್ಕೆ ತಿರುಗೇಟು ನೀಡಿದೆ. ಮೊದಲ ಇನಿಂಗ್ಸ್ ಹಿನ್ನಡೆ ನಡುವೆಯೂ ಗುಜರಾತ್ ತಂಡ ಮೂರನೇ ದಿನದಾಟದಲ್ಲಿ ಮೇಲುಗೈ ಸಾಧಿಸಿತು. 6 ವಿಕೆಟ್​ಗೆ 119 ರನ್​ಗಳಿಂದ ಇನಿಂಗ್ಸ್ ಆರಂಭಿಸಿದ ಗುಜರಾತ್ 252 ರನ್​ಗಳಿಸಿತು. ಬಳಿಕ 2ನೇ ಸರದಿ ಬ್ಯಾಟಿಂಗ್ ಆರಂಭಿಸಿರುವ ಸೌರಾಷ್ಟ್ರ 5 ವಿಕೆಟ್​ಗೆ 66 ರನ್​ಗಳಿಸಿದ್ದು ಒಟ್ಟಾರೆ 118 ರನ್ ಮುನ್ನಡೆ ಸಾಧಿಸಿದೆ. ಸೌರಾಷ್ಟ್ರ ಮೊದಲ ಇನಿಂಗ್ಸ್​ನಲ್ಲಿ 304 ರನ್ ಪೇರಿಸಿದ್ದು, 52 ರನ್ ಇನಿಂಗ್ಸ್ ಮುನ್ನಡೆ ಕಂಡಿತ್ತು.

ಬಂಗಾಳ ಪ್ರಥಮ ಇನಿಂಗ್ಸ್: 312ಕರ್ನಾಟಕ ಪ್ರಥಮ ಇನಿಂಗ್ಸ್: 122ಬಂಗಾಳ ದ್ವಿತೀಯ ಇನಿಂಗ್ಸ್: 54.4 ಓವರ್​ಗಳಲ್ಲಿ 161 (ಭಾನುವಾರ 4 ವಿಕೆಟ್​ಗೆ 72)

ಸುದೀಪ್ ಚಟರ್ಜಿ ಎಲ್​ಬಿಡಬ್ಲ್ಯು ಬಿ ರೋನಿತ್ 45

ಅನುಷ್ಟಪ್ ಸ್ಟಂಪ್ ಶರತ್ ಬಿ ಗೌತಮ್41

ಶ್ರೀವತ್ಸ ಗೋಸ್ವಾಮಿ ಸಿ ಶರತ್ ಬಿ ರೋನಿತ್ 0

ಶಾಬಾಜ್ ಎಲ್​ಬಿಡಬ್ಲ್ಯು ಬಿ ಕೆ. ಗೌತಮ್31

ಆಕಾಶ್ ದೀಪ್ ಸಿ ಶರತ್ ಬಿ ಮಿಥುನ್ 1

ಮುಕೇಶ್ ಕುಮಾರ್ ಔಟಾಗದೆ 6

ಇಶಾನ್ ಪೊರೆಲ್ ಸ್ಟಂಪ್ ಶರತ್ ಬಿ ಗೌತಮ್0

ಇತರ: 12. ವಿಕೆಟ್ ಪತನ: 4-61, 5-89, 6-89, 7-150, 8-153, 9-155. ಬೌಲಿಂಗ್: ಮಿಥುನ್ 16-5-23-4, ಪ್ರಸಿದ್ಧಕೃಷ್ಣ 16-2-45-1, ರೋನಿತ್ ಮೋರೆ 13-1-56-2, ಕೆ. ಗೌತಮ್ 7.4-4-15-3, ಕರುಣ್ 2-0-12-0.

ಕರ್ನಾಟಕ ದ್ವಿತೀಯ ಇನಿಂಗ್ಸ್: 38 ಓವರ್​ಗಳಲ್ಲಿ 3 ವಿಕೆಟ್​ಗೆ 98 (ಗುರಿ: 352 ರನ್)

ಕೆಎಲ್ ರಾಹುಲ್ ಎಲ್​ಬಿಡಬ್ಲ್ಯು ಬಿ ಪೊರೆಲ್ 0

ಸಮರ್ಥ್ ಆರ್. ಎಲ್​ಬಿಡಬ್ಲ್ಯು ಬಿ ಆಕಾಶ್ 27

ದೇವದತ್ ಪಡಿಕಲ್ ಬ್ಯಾಟಿಂಗ್ 50

ಕರುಣ್ ಎಲ್​ಬಿಡಬ್ಲ್ಯು ಬಿ ಮುಕೇಶ್ 6

ಮನೀಷ್ ಪಾಂಡೆ ಬ್ಯಾಟಿಂಗ್ 11

ಇತರ: 4. ವಿಕೆಟ್ ಪತನ: 1-0, 2-57, 3-76. ಬೌಲಿಂಗ್: ಇಶಾನ್ ಪೊರೆಲ್ 12-4-19-1, ಮುಕೇಶ್ ಕುಮಾರ್ 12-1-33-1, ಆಕಾಶ್ ದೀಪ್ 10-1-32-1, ಅರ್ನಾಬ್ ನಂದಿ 4-0-10-0.

ಅಲ್ಪಮೊತ್ತಕ್ಕೆ ಕುಸಿದ ಬಂಗಾಳ

ದಿನದ ಆರಂಭದಲ್ಲೇ ಬಂಗಾಳ ತಂಡಕ್ಕೆ ಕಡಿವಾಣ ಹೇರುವ ಮೂಲಕ ಕರ್ನಾಟಕದ ಬೌಲರ್​ಗಳು ಮೇಲುಗೈ ಸಾಧಿಸಿದರು. ಸಂದೀಪ್ ಚಟರ್ಜಿ-ಅನುಷ್ಟಪ್ ಮಜುಮ್ದಾರ್ ಜೋಡಿಯನ್ನು ಆರಂಭದಲ್ಲೇ ರೋನಿತ್ ಮೋರೆ ಬೇರ್ಪಡಿಸಿದರು. ಇದರೊಂದಿಗೆ ಬಂಗಾಳ ತಂಡದ ಕುಸಿತ ಆರಂಭಗೊಂಡಿತು. ಭಾನುವಾರದ ಕೊನೇ ಓವರ್​ನಲ್ಲಿ ಜೀವದಾನ ಗಿಟ್ಟಿಸಿಕೊಂಡಿದ್ದ ಮೊದಲ ಇನಿಂಗ್ಸ್ ಶತಕ ಸಾಧಕ ಅನುಷ್ಟಪ್ ಮಜುಮ್ದಾರ್ (41) ಮತ್ತೊಮ್ಮೆ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೊತ್ತುಕೊಂಡರು. ಬಂಗಾಳ ಕೆಳ ಕ್ರಮಾಂಕಕ್ಕೆ ಕೆ.ಗೌತಮ್ ಶಾಕ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net