ಇಂದಿನಿಂದ ಮುಂಬೈನಲ್ಲಿ ಭಾರತ-ನ್ಯೂಜಿಲೆಂಡ್ ನಿರ್ಣಾಯಕ ಟೆಸ್ಟ್

ind vs nz web
Published on

ಮುಂಬೈ: ಕೊನೆಯ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗದೆ ಕಾನ್ಪುರದಲ್ಲಿ ಡ್ರಾಕ್ಕೆ ತೃಪ್ತಿಪಟ್ಟಿರುವ ಆತಿಥೇಯ ಭಾರತ ತಂಡ ಶುಕ್ರವಾರದಿಂದ ನಡೆಯಲಿರುವ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆದ್ದು ಸರಣಿ ವಶಪಡಿಸಿಕೊಳ್ಳುವ ಹಂಬಲದಲ್ಲಿದೆ. ಟೆಸ್ಟ್ ವಿಶ್ವ ಚಾಂಪಿಯನ್ ಪಟ್ಟಕ್ಕೆ ತಕ್ಕ ನಿರ್ವಹಣೆ ತೋರಿದ ವಿಶ್ವಾಸದಲ್ಲಿರುವ ಕೇನ್ ವಿಲಿಯಮ್ಸನ್ ಬಳಗಕ್ಕೆ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತೀಯ ಸ್ಪಿನ್ನರ್‌ಗಳಿಂದ ಇನ್ನಷ್ಟು ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ. ಹೊಸ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ವಿರಾಟ್ ಕೊಹ್ಲಿ ಕಾಂಬಿನೇಷನ್‌ನಲ್ಲಿ ಭಾರತ ತಂಡ ಆಡಲಿರುವ ಮೊದಲ ಪಂದ್ಯ ಇದಾಗಿರಲಿದೆ.

ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಿರ್ಣಾಯಕ ಟೆಸ್ಟ್ ಪಂದ್ಯಕ್ಕೆ ಮರಳಿದ್ದು, ಅಜಿಂಕ್ಯ ರಹಾನೆ ನಾಯಕತ್ವವನ್ನು ಅವರಿಗೆ ಬಿಟ್ಟುಕೊಡಲಿದ್ದಾರೆ. ಕಳೆದ 2 ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ನಡುವೆಯೂ ಕೊಹ್ಲಿ ಸೇರ್ಪಡೆ ಭಾರತ ತಂಡದ ಬಲ ಹೆಚ್ಚಿಸಿದ್ದು, ಮುಂಬೈನಲ್ಲಿ ಇನ್ನಷ್ಟು ಆಕ್ರಮಣಕಾರಿ ಆಡುವ ನಿರೀಕ್ಷೆ ಇದೆ.

ನ್ಯೂಜಿಲೆಂಡ್ ವಿರುದ್ಧ ತವರಿನ ಪ್ರಾಬಲ್ಯವನ್ನು ಮುಂದುವರಿಸುವ ಸವಾಲು ಭಾರತ ತಂಡದ ಮುಂದಿದೆ. ಭಾರತ ತಂಡ 2003-04ರಲ್ಲಿ ಕೊನೆದಾಗಿ ಕಿವೀಸ್ ವಿರುದ್ಧ ತವರಿನ ಟೆಸ್ಟ್ ಸರಣಿಯಲ್ಲಿ ಸಮಬಲಕ್ಕೆ ತೃಪ್ತಿಪಟ್ಟಿತ್ತು. ನಂತರ ಆಡಿದ 3 ಸರಣಿಗಳಲ್ಲೂ ಭಾರತ ಸುಲಭವಾಗಿ ಗೆದ್ದಿತ್ತು. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಮುಂಬೈ ಟೆಸ್ಟ್ ವಿರಾಟ್ ಕೊಹ್ಲಿ ಬಳಗಕ್ಕೆ ಉತ್ತಮ ಅವಕಾಶವಾಗಿದೆ. ಮುಂಬರುವ ಸವಾಲಿನ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಮುನ್ನ ವಿಶ್ವಾಸ ವೃದ್ಧಿಸಿಕೊಳ್ಳುವಂಥ ನಿರ್ವಹಣೆಯನ್ನು ಟೀಮ್ ಇಂಡಿಯಾ ಪ್ರದರ್ಶಿಸಬೇಕಾಗಿದೆ.

*ಆರಂಭ: ಬೆಳಗ್ಗೆ 9.30
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

*ವಾಂಖೆಡೆಯಲ್ಲಿ ಭಾರತ
ಟೆಸ್ಟ್: 25
ಜಯ: 11
ಸೋಲು: 7
ಡ್ರಾ: 7

*2: ಭಾರತ-ನ್ಯೂಜಿಲೆಂಡ್ ತಂಡಗಳು ವಾಂಖೆಡೆಯಲ್ಲಿ ಇದುವರೆಗೆ 2 ಟೆಸ್ಟ್‌ಗಳಲ್ಲಿ ಮುಖಾಮುಖಿ ಆಗಿದ್ದು, ತಲಾ 1ರಲ್ಲಿ ಜಯಿಸಿವೆ. 1988ರಲ್ಲಿ ಇಲ್ಲಿ ಆಡಿದ ಕೊನೇ ಟೆಸ್ಟ್‌ನಲ್ಲಿ ಗೆದ್ದಿರುವುದು ಈಗ ಕಿವೀಸ್‌ಗೆ ಸ್ಫೂರ್ತಿಯಾಗಿದೆ.

ಮೊದಲ ದಿನ ಮಳೆ ಭೀತಿ
ವಾಣಿಜ್ಯ ರಾಜಧಾನಿಯಲ್ಲಿ ಬುಧವಾರ ಸುರಿದ ಮಳೆ ಅಭ್ಯಾಸವನ್ನು ರದ್ದುಗೊಳಿಸಿದ್ದರೆ, ಗುರುವಾರ ಒಳಾಂಗಣದಲ್ಲಿ ಅಭ್ಯಾಸ ನಡೆಸುವಂತೆ ಮಾಡಿತ್ತು. ಇನ್ನೀಗ ಶುಕ್ರವಾರದ ಮೊದಲ ದಿನದಾಟಕ್ಕೂ ಮಳೆ ಅಡಚಣೆ ತರುವ ಭೀತಿ ಇದೆ. ಆದರೆ 2ನೇ ದಿನದಾಟದಿಂದ ಮಳೆ ಕಾಡುವ ಸಾಧ್ಯತೆ ಇಲ್ಲ. ಇದರಿಂದ ಭಾರತ ತಂಡ 4 ದಿನಗಳ ಆಟದಲ್ಲೇ ಗೆಲುವು ಒಲಿಸಿಕೊಳ್ಳಬೇಕಾದ ಸವಾಲನ್ನೂ ಎದುರಿಸುತ್ತಿದೆ.

ಕರುಣ್ ಮಾದರಿ ಶ್ರೇಯಸ್‌ಗೆ ಕೊಕ್?
ಕಾನ್ಪುರದಲ್ಲಿ ಕೊಹ್ಲಿ ಗೈರಿನಲ್ಲಿ ಶ್ರೇಯಸ್ ಅಯ್ಯರ್ ಟೆಸ್ಟ್ ಪದಾರ್ಪಣೆಯ ಅವಕಾಶ ಪಡೆದುಕೊಂಡಿದ್ದರು. ಇದನ್ನು ಅತ್ಯುತ್ತಮವಾಗಿ ಬಳಸಿಕೊಂಡ ಶ್ರೇಯಸ್ ಶತಕ ಮತ್ತು ಅರ್ಧಶತಕ ಸಿಡಿಸಿ ಮಿಂಚಿದ್ದರು. ಆದರೂ ಮುಂಬೈ ಟೆಸ್ಟ್‌ಗೆ ಅವರ ಸ್ಥಾನ ಭದ್ರವೆನಿಸಿಲ್ಲ. ಈ ಹಿಂದೆ ಕನ್ನಡಿಗ ಕರುಣ್ ನಾಯರ್ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ತ್ರಿಶತಕ ಸಿಡಿಸಿ ಮಿಂಚಿದ್ದರೂ, ಮುಂದಿನ ಬಾಂಗ್ಲಾ ವಿರುದ್ಧ ಟೆಸ್ಟ್‌ಗೆ ಅನುಭವಿ ರಹಾನೆ ಬಂದಾಗ ಸ್ಥಾನ ಕಳೆದುಕೊಂಡಿದ್ದರು. ಇದೀಗ ಕೊಹ್ಲಿ ಮರಳಿದಾಗ ಅದೇ ಪರಿಸ್ಥಿತಿ ಶ್ರೇಯಸ್‌ಗೂ ಎದುರಾಗುವುದನ್ನು ತಳ್ಳಿಹಾಕುವಂತಿಲ್ಲ. ಆದರೆ ಇದು ಅತ್ಯಂತ ಕ್ಷೀಣ ಸಾಧ್ಯತೆ.

ವೃದ್ಧಿಮಾನ್ ಸಾಹ ಫಿಟ್
ಕುತ್ತಿಗೆ ನೋವಿನಿಂದಾಗಿ ಕಾನ್ಪುರದಲ್ಲಿ ವಿಕೆಟ್ ಕೀಪಿಂಗ್ ನಿರ್ವಹಿಸದ ವೃದ್ಧಿಮಾನ್ ಸಾಹ ಮುಂಬೈ ಟೆಸ್ಟ್‌ಗೆ ಫಿಟ್ ಆಗಿದ್ದಾರೆ ಎಂದು ನಾಯಕ ವಿರಾಟ್ ಕೊಹ್ಲಿ ಗುರುವಾರದ ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ. ಆದರೆ ಸಾಹ ಆಡುವರೆಂದು ಈಗಲೂ ಖಚಿತವಾಗಿ ಹೇಳಲಾಗದು. ಯಾಕೆಂದರೆ ಪಿಚ್ ಮತ್ತು ವಾತಾವರಣ ಆಧರಿಸಿ ನಾವು ಟೀಮ್ ಕಾಂಬಿನೇಷನ್ ಅಂತಿಮಗೊಳಿಸಲಿದ್ದೇವೆ ಎಂದಿದ್ದಾರೆ. ಹೀಗಾಗಿ ಕೆಎಸ್ ಭರತ್ ಪದಾರ್ಪಣೆ ಅವಕಾಶ ಪಡೆದು ಆರಂಭಿಕರಾಗಿ ಆಡುವ ಸಾಧ್ಯತೆ ಇನ್ನೂ ಇದೆ.

ಪಿಚ್ ರಿಪೋರ್ಟ್
ವಾಂಖೆಡೆ ಪಿಚ್ ಮೇಲಿನ ಹಸಿರು ಹುಲ್ಲು ಕತ್ತರಿಸಲ್ಪಟ್ಟ ಬಳಿಕ ಸ್ಪಿನ್ ಸ್ನೇಹಿಯಾಗುವ ನಿರೀಕ್ಷೆ ಇದ್ದರೂ, ಮೋಡಕವಿದ ವಾತಾವರಣದಿಂದಾಗಿ ವೇಗಿಗಳಿಗೂ ನೆರವಾಗುವ ಸಾಧ್ಯತೆ ಕಾಣಿಸಿದೆ. ಇದರಿಂದಾಗಿಯೇ ಹೆಚ್ಚುವರಿ ವೇಗಿಯನ್ನು (ಮೊಹಮದ್ ಸಿರಾಜ್) ಆಡಿಸುವ ಬಗ್ಗೆ ಕೊಹ್ಲಿ ಗುರುವಾರ ಸುಳಿವು ನೀಡಿದ್ದಾರೆ. ಪಿಚ್ ಮೇಲಿನ ತೇವಾಂಶ ಸ್ವಿಂಗ್‌ಗೆ ನೆರವಾಗಬಹುದು.

5 ವರ್ಷಗಳ ಬಳಿಕ ವಾಂಖೆಡೆಯಲ್ಲಿ ಟೆಸ್ಟ್
2011ರ ಏಕದಿನ ವಿಶ್ವಕಪ್ ಫೈನಲ್ ಸಹಿತ ಹಲವು ಪ್ರಮುಖ ಪಂದ್ಯಗಳಿಗೆ ವೇದಿಕೆಯಾಗಿರುವ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 5 ವರ್ಷಗಳ ಬಳಿಕ ಟೆಸ್ಟ್ ನಡೆಯಲಿದೆ. 2016ರಲ್ಲಿ ಕೊನೆಯದಾಗಿ ಇಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ನಡೆದಿತ್ತು ಮತ್ತು ಭಾರತ ಇನಿಂಗ್ಸ್ ಮತ್ತು 36 ರನ್‌ಗಳಿಂದ ಗೆದ್ದಿತ್ತು. ಆ ಪಂದ್ಯದಲ್ಲಿ ಕೊಹ್ಲಿ 235 ರನ್ ಸಿಡಿಸಿದ್ದರು. ಕರೊನಾ ಮಾರ್ಗಸೂಚಿ ಅನ್ವಯ ಈ ಬಾರಿ ಸ್ಟೇಡಿಯಂಗೆ ಪ್ರತಿದಿನ ಶೇ. 25 ಪ್ರೇಕ್ಷಕರಿಗೆ ಮಾತ್ರ ಪ್ರವೇಶ ಲಭಿಸಲಿದೆ.

ಟೀಮ್ ನ್ಯೂಸ್:

ಭಾರತ: ಕೊಹ್ಲಿಗೆ ಆಡುವ 11ರ ಬಳಗದಲ್ಲಿ ಯಾರು ಸ್ಥಾನ ಬಿಟ್ಟುಕೊಡುವರು ಎಂಬುದು ಇನ್ನೂ ಕೌತುಕವಾಗಿಯೇ ಉಳಿದಿದೆ. ರಹಾನೆ 2021ರಲ್ಲಿ ಆಡಿದ 12 ಇನಿಂಗ್ಸ್‌ಗಳಲ್ಲೂ ವೈಲ್ಯ ಕಂಡಿದ್ದಾರೆ. ಆದರೆ ಕಾನ್ಪುರದಲ್ಲಿ ಹಂಗಾಮಿ ನಾಯಕನಾಗಿದ್ದ ಆಟಗಾರನಿಗೆ ಅದರ ಮರು ಪಂದ್ಯದಲ್ಲೇ ಕೊಕ್ ಸಿಗುವುದು ಅನುಮಾನ. ಟೆಸ್ಟ್ ತಜ್ಞ ಬ್ಯಾಟರ್ ಚೇತೇಶ್ವರ ಪೂಜಾರ ರನ್‌ಬರದ ನಡುವೆ ಪ್ರತಿ ಇನಿಂಗ್ಸ್‌ನಲ್ಲೂ ಉತ್ತಮ ಆರಂಭ ಕಾಣುತ್ತಿದ್ದಾರೆ. ಆದರೆ ಅದನ್ನು ದೊಡ್ಡ ಇನಿಂಗ್ಸ್ ಆಡಿ ಪರಿವರ್ತಿಸಲು ಶಕ್ತರಾಗುತ್ತಿಲ್ಲ. ಹೀಗಾಗಿ ಅವರಿಗೂ ಇನ್ನೊಂದು ಅವಕಾಶದ ನಿರೀಕ್ಷೆ ಇದೆ. ಹಾಗೆ ನೋಡಿದರೆ ಕೊಹ್ಲಿ ಕೂಡ ಕಳೆದ 2 ವರ್ಷಗಳಿಂದ ಶತಕ ಸಿಡಿಸಿಲ್ಲ. ಹೀಗಾಗಿ ಅನುಭವಿಗಳಿಗೆ ಕೊಕ್ ಅನುಮಾನ. ಇದರಿಂದ ಕನ್ನಡಿಗ ಮಯಾಂಕ್ ಅಗರ್ವಾಲ್, ಕೊಹ್ಲಿಗೆ ಸ್ಥಾನ ಬಿಟ್ಟುಕೊಡಬೇಕಾದೀತು. ಆಗ ಶುಭಮಾನ್ ಗಿಲ್ ಜತೆ ಇನಿಂಗ್ಸ್ ಆರಂಭಿಸುವವರು ಯಾರು ಎಂಬ ಪ್ರಶ್ನೆ ಏಳುತ್ತದೆ. ಪೂಜಾರ ಅಥವಾ ವೃದ್ಧಿಮಾನ್ ಸಾಹ ಆರಂಭಿಕರಾಗಬಲ್ಲರು. ಆದರೆ ಕೋಚ್ ರಾಹುಲ್ ದ್ರಾವಿಡ್ ತೆಗೆದುಕೊಳ್ಳುವ ನಿರ್ಧಾರ ಬಗ್ಗೆ ಕುತೂಹಲವಿದೆ. ಶುಕ್ರವಾರ ಬೆಳಗ್ಗೆಯಷ್ಟೇ ತಂಡ ಸಂಯೋಜನೆ ಅಂತಿಮವಾಗಲಿದೆ ಎಂದು ನಾಯಕ ಕೊಹ್ಲಿ ಹೇಳಿದ್ದಾರೆ.

ನ್ಯೂಜಿಲೆಂಡ್: ಕಾನ್ಪುರದ ದಿಟ್ಟ ನಿರ್ವಹಣೆ ನಡುವೆಯೂ ಪ್ರವಾಸಿ ತಂಡದಲ್ಲಿ ಬದಲಾವಣೆಯ ಸಾಧ್ಯತೆ ಇದೆ. ವಾಂಖೆಡೆ ಪಿಚ್ ವೇಗಿಗಳಿಗೂ ನೆರವಾಗುವ ನಿರೀಕ್ಷೆ ಇರುವುದರಿಂದ 3ನೇ ವೇಗಿಯಾಗಿ ನೀಲ್ ವ್ಯಾಗ್ನರ್ ಕಣಕ್ಕಿಳಿಯಬಹುದು. ಅವರಿಗೆ ಸ್ಪಿನ್ನರ್ ವಿಲಿಯಮ್ ಸಮರ್‌ವಿಲ್ ಸ್ಥಾನ ಬಿಟ್ಟುಕೊಡಬೇಕಾದೀತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net