ಇದನ್ನೆಲ್ಲ ಒಪ್ಪುವ ಮಾತೇ ಇಲ್ಲ, ಫಲಿತಾಂಶ ನಮ್ಮ ಪರವೇ: ಟೀಮ್ ಇಂಡಿಯಾ ವಿರುದ್ಧ ಪಿಸಿಬಿ ಅಧ್ಯಕ್ಷ ಕಿಡಿ

ವಿಜಯವಾಣಿ - 2024-11-28T164759.376
Published on

ಲಾಹೋರ್​: ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಅತಿಥ್ಯ ವಹಿಸಿಕೊಂಡಿರುವ ಪಾಕಿಸ್ತಾನ, ಹೇಗಾದರೂ ಮಾಡಿ ಭಾರತವನ್ನು ತಮ್ಮ ನೆಲಕ್ಕೆ ಕರೆಸಿಕೊಳ್ಳಲು ನಾನಾ ರೀತಿಯ ಕಸರತ್ತು ನಡೆಸುತ್ತಿದೆ. ಒಂದೆಡೆ ಶತಾಯಗತಾಯ ಪ್ರಯತ್ನದಲ್ಲಿ ತೊಡಗಿರುವ ಪಿಸಿಬಿಗೆ ಎದರುರಾಗುತ್ತಿರುವುದು ಕೇವಲ ಸೋಲು, ಅವಮಾನ. ಮತ್ತೊಂದೆಡೆ ತಾವು ನೀಡಿರುವ ಪ್ರಸ್ತಾಪಕ್ಕೆ ಬಿಸಿಸಿಐ ನೀಡಿರುವ ಪ್ರತಿಕ್ರಿಯೆಗಳು ಸಹಿಸಿಕೊಳ್ಳಲಾಗದಂತ ಪರಿಸ್ಥಿತಿಗೆ ದೂಡಿದೆ. ಇನ್ನು ಪಾಕ್​ ನೆಲದಲ್ಲಿ ಆಡಲು ಸುತಾರಾಮ್​ ಒಪ್ಪದ ಟೀಮ್ ಇಂಡಿಯಾ, ನಮ್ಮ ಪಂದ್ಯಗಳನ್ನು ಹೈಬ್ರಿಡ್​ ಮಾದರಿಯಲ್ಲಿ ಆಡಿಸುವುದಾದರೆ ಕಣಕ್ಕಿಳಿಯುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದೆ. ಇದರಿಂದ ಸಿಟ್ಟಿಗೆದ್ದಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಭಾರತದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಖಂಡಿತ ಒಪ್ಪಿಕೊಳ್ಳಲಾಗದು

ಇಂದು (ನ.28) ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಖ್ವಿ, "ಕಳೆದ ವರ್ಷ ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಮೆನ್ ಇನ್ ಗ್ರೀನ್ ಭಾಗವಹಿಸಿದ್ದರೂ ಸಹ ಭಾರತವು ಪಾಕಿಸ್ತಾನಕ್ಕೆ ಬರಲು ನಿರಾಕರಿಸಿರುವುದು ಸ್ವೀಕಾರಾರ್ಹವಲ್ಲ. ನಾನು ಪಾಕಿಸ್ತಾನಕ್ಕೆ ಒಳ್ಳೆಯದನ್ನೇ ಮಾಡುತ್ತೇನೆ. ಪ್ರಸ್ತುತ ನಾನು ಐಸಿಸಿ ಅಧ್ಯಕ್ಷರೊಂದಿಗೆ ಸಂಪರ್ಕದಲ್ಲಿದ್ದೇನೆ ಮತ್ತು ನನ್ನ ತಂಡವು ಕ್ರಿಕೆಟ್​ ಅಧಿಕಾರಿಗಳೊಂದಿಗೆ ಮಾತನಾಡುತ್ತಿದೆ. ನಾವು ಅವರ ನೆಲದಲ್ಲಿ ಕ್ರಿಕೆಟ್ ಆಡಲು ಹೋಗುತ್ತೇವೆ. ಆದರೆ, ಅವರು ನಮ್ಮ ದೇಶಕ್ಕೆ ಬರುವುದಿಲ್ಲ ಎಂಬ ವಿಷಯವನ್ನು ಖಂಡಿತ ಒಪ್ಪಿಕೊಳ್ಳಲಾಗದು. ನಮ್ಮ ನಿಲುವಿನಲ್ಲಿ ಮತ್ತಷ್ಟು ಸ್ಪಷ್ಟವಾಗಿದ್ದೇವೆ. ಸಮಾನತೆಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುವುದು. ನಾವು ಐಸಿಸಿ ಮುಂದೆ ಪಿಸಿಬಿ ನಿಲುವನ್ನು ಸ್ಪಷ್ಟಪಡಿಸಿದ್ದೇವೆ ಮತ್ತು ಮುಂದೆ ಏನಾಗುತ್ತದೆ ಎಂಬುದನ್ನು ಶೀಘ್ರವೇ ನಿಮಗೆ ತಿಳಿಸುತ್ತೇವೆ" ಎಂದು ಹೇಳಿದರು.

ನಮ್ಮಿಂದ ಸಾಧ್ಯವಿಲ್ಲ

"ಚಾಂಪಿಯನ್ಸ್ ಟ್ರೋಫಿಗಾಗಿ ತಮ್ಮ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸದಿರುವ ನಿರ್ಧಾರದ ಬಗ್ಗೆ ಭಾರತೀಯ ಕ್ರಿಕೆಟ್ ಮಂಡಳಿಯಿಂದ ನಮಗೆ ಯಾವುದೇ ಲಿಖಿತ ಸಂವಹನ ಬಂದಿಲ್ಲ. ಫಲಿತಾಂಶವು ಪಾಕಿಸ್ತಾನದ ಪರವಾಗಿರಲಿದೆ ಎಂಬುದರ ಬಗ್ಗೆ ನಾವು ಗ್ಯಾರಂಟಿ ಕೊಡುತ್ತೇವೆ. 2025ರ ಚಾಂಪಿಯನ್ಸ್​ ಟ್ರೋಫಿಯನ್ನು ಭಾರತದಲ್ಲಿ ಆಡುವುದನ್ನು ಖಂಡಿತ ನಮ್ಮಿಂದ ಸಾಧ್ಯವಿಲ್ಲ" ಎಂದು ಖಡಕ್ ಆಗಿ ಹೇಳಿದ್ದಾರೆ. ಒಟ್ಟಾರೆ ಟೂರ್ನಿಗೆ ಎರಡು ದೇಶಗಳ ಜಿದ್ದಾಜಿದ್ದಿ ಅಡ್ಡಿಯಾಗಿದ್ದು, ಇಲ್ಲಿ ಯಾರು ರಾಜಿಯಾಗಲಿದ್ದಾರೆ? ಯಾರು, ಯಾವ ಒಪ್ಪಂದಕ್ಕೆ ಸಮ್ಮತಿ ನೀಡುತ್ತಾರೆ ಎಂಬುದೇ ಸದ್ಯ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net