ಸೇಡು ತೀರಿಸಲ್ಲ, ಸಮಾನತೆ ನೀಡಿ ಎಂದ ಬ್ರಾವೊ

20windies_WEB
Published on

ಕಿಂಗ್‌ಸ್ಟನ್: ಅಮೆರಿಕದಲ್ಲಿ ಜನಾಂಗೀಯ ಕಲಹ ಭುಗಿಲೆದ್ದ ಬೆನ್ನಲ್ಲೇ ಕ್ರೀಡಾ ಜಗತ್ತಿನಲ್ಲೂ ಜನಾಂಗೀಯ ನಿಂದನೆಗಳ ಬಗ್ಗೆ ಆರೋಪಗಳು ಶುರುವಾಗಿವೆ. ಈಗಾಗಲೆ ಫುಟ್‌ಬಾಲ್, ಕ್ರಿಕೆಟ್, ಟೆನಿಸ್ ಮತ್ತು ಬ್ಯಾಡ್ಮಿಂಟನ್‌ನಲ್ಲಿ ಕೆಲ ಆಟಗಾರರು ವೃತ್ತಿಜೀವನದಲ್ಲಿ ಎದುರಾದ ಜನಾಂಗೀಯ ನಿಂದನೆಗಳ ಬಗ್ಗೆ ಮೆಲುಕು ಹಾಕುತ್ತಿದ್ದಾರೆ. ‘ಇದುವರೆಗೆ ಎದುರಾಗಿರುವ ಜನಾಂಗೀಯ ನಿಂದನೆಗಳೆಲ್ಲ ಸಾಕು, ನಾವು ಸೇಡು ತೀರಿಸಿಕೊಳ್ಳಲು ಬಯಸುವುದಿಲ್ಲ. ವರ್ಣೀಯ ಜನರಿಗೂ ಗೌರವ ಮತ್ತು ಸಮಾನತೆ ಬೇಕಾಗಿದೆ’ ಎಂದು ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇಯ್ನ ಬ್ರಾವೊ ಹೇಳಿದ್ದಾರೆ.

ವೆಸ್ಟ್ ಇಂಡೀಸ್‌ನ ಸಹ-ಆಟಗಾರರಾದ ಡರೇನ್ ಸ್ಯಾಮ್ಮಿ ಮತ್ತು ಕ್ರಿಸ್ ಗೇಲ್ ಈಗಾಗಲೆ ಜನಾಂಗೀಯ ನಿಂದನೆಯ ಆರೋಪ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬ್ರಾವೊ, ‘ವಿಶ್ವದೆಲ್ಲೆಡೆ ಈಗ ಏನು ನಡೆಯುತ್ತಿದೆಯೋ ಅದರ ಬಗ್ಗೆ ಬೇಸರವಿದೆ. ವರ್ಣೀಯ ವ್ಯಕ್ತಿಯಾಗಿ ನನಗೆ ನಮ್ಮ ಜನರ ಕಷ್ಟದ ಇತಿಹಾಸ ಗೊತ್ತಿದೆ. ನಾವು ಸೇಡು ಬಯಸಲ್ಲ. ನಮಗೂ ಸಮಾನತೆ ಮತ್ತು ಗೌರವ ನೀಡಿ’ ಎಂದು ಇನ್‌ಸ್ಟಾಗ್ರಾಂ ಲೈವ್ ಮಾತುಕತೆಯಲ್ಲಿ ಹೇಳಿದ್ದಾರೆ. ‘ನಾವು ಶಕ್ತಿಶಾಲಿಗಳು ಮತ್ತು ಸುಂದರರು. ವಿಶ್ವದ ಶ್ರೇಷ್ಠ ವ್ಯಕ್ತಿಗಳನ್ನೇ ನೋಡಿ. ನೆಲ್ಸನ್ ಮಂಡೇಲಾ, ಮೊಹಮದ್ ಅಲಿ, ಮೈಕೆಲ್ ಜೋರ್ಡನ್ ಅವರೆಲ್ಲರೂ ನಮಗೆ ದಾರಿ ತೋರಿಸಿದವರು’ ಎಂದು ಬ್ರಾವೊ ಹೇಳಿದ್ದಾರೆ.

ಸ್ಯಾಮ್ಮಿಗೆ ಗೇಲ್ ಬೆಂಬಲ

ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಪರ ಆಡುತ್ತಿದ್ದಾಗ ತಮ್ಮನ್ನು ‘ಕಾಲೂ’ ಎಂದು ಕರೆಯುತ್ತಿದ್ದರು ಎಂಬ ಡರೇನ್ ಸ್ಯಾಮ್ಮಿ ಆರೋಪಕ್ಕೆ ಕ್ರಿಸ್ ಗೇಲ್ ಬೆಂಬಲ ನೀಡಿದ್ದಾರೆ. ‘ಸರಿಯಾದ ಕಾರಣಕ್ಕೆ ಹೋರಾಡುವುದು ಎಂದೂ ತಡವೆನಿಸುವುದಿಲ್ಲ’ ಎಂದು ಗೇಲ್ ಹೇಳಿದ್ದಾರೆ. ಸ್ಯಾಮ್ಮಿ ನಾಯಕತ್ವದಲ್ಲಿ ವಿಂಡೀಸ್ ತಂಡ 2 ಬಾರಿ ಟಿ20 ವಿಶ್ವಕಪ್ ತಂಡದಲ್ಲಿ ಗೇಲ್ ಕೂಡ ಆಡಿದ್ದರು. ಈ ಹಿಂದೆ ಗೇಲ್ ಕೂಡ ವೃತ್ತಿಜೀವನದಲ್ಲಿ ಜನಾಂಗೀಯ ನಿಂದನೆಗೆ ಗುರಿಯಾಗಿದ್ದನ್ನು ಹೇಳಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net