ಅರಬ್ ರಾಷ್ಟ್ರದಲ್ಲಿ ಐಪಿಎಲ್, ಕೇಂದ್ರ ಸರ್ಕಾರ ಸಮ್ಮತಿ

IPL GOVERNMENT PERMISSION FOR WEB
Published on

ನವದೆಹಲಿ: ಅರಬ್ ರಾಷ್ಟ್ರ ಯುಎಇಯಲ್ಲಿ 13ನೇ ಆವೃತ್ತಿಯ ಐಪಿಎಲ್ ಟಿ20 ಟೂರ್ನಿ ಆಯೋಜಿಸಲು ಕೇಂದ್ರ ಸರ್ಕಾರ ಅಧಿಕೃತವಾಗಿ ಒಪ್ಪಿಗೆ ಸೂಚಿಸಿದೆ ಎಂದು ಲೀಗ್ ಚೇರ್ಮನ್ ಬ್ರಿಜೇಶ್ ಪಟೇಲ್ ಸೋಮವಾರ ತಿಳಿಸಿದ್ದಾರೆ. ಯುಎಇಯ ಮೂರು ನಗರಗಳಾದ ಶಾರ್ಜಾ, ದುಬೈ ಹಾಗೂ ಅಬುದಾಬಿಯಲ್ಲಿ ಸೆ.19ರಿಂದ ನವೆಂಬರ್ 10ರವರೆಗೆ ಟೂರ್ನಿ ಆಯೋಜಿಸಲು ತೀರ್ಮಾನಿಸಲಾಗಿದೆ. ಭಾರತದಲ್ಲಿ ಕರೊನಾ ವೈರಸ್ ಹಾವಳಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಯುಎಇಯಲ್ಲಿ ಐಪಿಎಲ್ ಟೂರ್ನಿ ಆಯೋಜಿಸುವ ಬಿಸಿಸಿಐ ತೀರ್ಮಾನಕ್ಕೆ ಕೇಂದ್ರ ಸರ್ಕಾರ ಕಳೆದ ವಾರವೇ ಪ್ರಾಥಮಿಕ ಒಪ್ಪಿಗೆ ಸೂಚಿಸಿತ್ತು. ‘ಹೌದು, ನಮಗೆ ಈಗ ಲಿಖಿತ ರೂಪದ ಒಪ್ಪಿಗೆ ಸಿಕ್ಕಿದೆ’ ಎಂದು ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ. ಕೇಂದ್ರ ಗೃಹ, ವಿದೇಶಾಂಗ ಹಾಗೂ ಕ್ರೀಡಾ ಸಚಿವಾಲಯಗಳು ಲೀಗ್ ಆಯೋಜನೆಗೆ ಅನುಮತಿ ನೀಡಿವೆ. ಟೂರ್ನಿಯನ್ನು ವಿದೇಶಕ್ಕೆ ಸ್ಥಳಾಂತರಿಸಲು ಬಿಸಿಸಿಐಗೆ ಈ ಮೂರು ಸಚಿವಾಲಯಗಳ ಅಂಗೀಕಾರ ಅಗತ್ಯವಾಗಿತ್ತು.

‘ಸರ್ಕಾರದಿಂದ ಮೌಖಿಕ ಒಪ್ಪಿಗೆ ಸಿಕ್ಕ ಬೆನ್ನಲ್ಲೇ ನಾವು ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಿದ್ದೆವು. ಇದೀಗ ಪತ್ರಗಳು ಕೂಡ ನಮ್ಮ ಬಳಿಯಿದ್ದು, ಫ್ರಾಂಚೈಸಿಗಳಿಗೂ ಮಾಹಿತಿ ನೀಡಲಾಗಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಹುತೇಕ ಎಲ್ಲ ಫ್ರಾಂಚೈಸಿಗಳು ಆಗಸ್ಟ್ 20ರ ಬಳಿಕವೇ ಯುಎಇ ಕಡೆಗೆ ಪ್ರಯಾಣ ಬೆಳೆಸಲಿವೆ. ಯುಎಇಗೆ ಪ್ರಯಾಣಿಸುವುದಕ್ಕೆ ಮುನ್ನ ಎಲ್ಲರೂ 24 ಗಂಟೆಗಳ ಅಂತರದಲ್ಲಿ 2 ಬಾರಿ ಕೋವಿಡ್-19 ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಯುಎಇಗೆ ತೆರಳಿದ ಬಳಿಕ 6 ದಿನಗಳ ಕ್ವಾರಂಟೈನ್‌ಗೆ ಒಳಪಡಲಿದ್ದು, ಈ ವೇಳೆ 3 ಬಾರಿ ಕರೊನಾ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಪಡೆದುಕೊಳ್ಳಬೇಕಿದೆ. ಒಟ್ಟಾರೆ 5 ನೆಗೆಟಿವ್ ವರದಿಯ ಬಳಿಕವೇ ಎಲ್ಲರೂ ಯುಎಇಯ ಜೈವಿಕ-ಸುರಕ್ಷಾ ವಾತಾವರಣದೊಳಗೆ ಪ್ರವೇಶ ಪಡೆಯಲಿದ್ದಾರೆ.

*18ರಂದು ಶೀರ್ಷಿಕೆ ಪ್ರಾಯೋಜಕತ್ವ ಅಂತಿಮ

ಆಗಸ್ಟ್ 18ರ ವೇಳೆಗೆ ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ. ವಿವೋ ಮೊಬೈಲ್ ಸಂಸ್ಥೆಯೊಂದಿಗಿನ ಪ್ರಾಯೋಜಕತ್ವ ಕಡಿತಗೊಂಡ ಹಿನ್ನೆಲೆಯಲ್ಲಿ ನೂತನ ಪ್ರಾಯೋಜಕರಿಗೆ ಬಿಸಿಸಿಐ ಬಿಡ್ ಕರೆದಿದೆ. ಈಗಾಗಲೇ ಕೆಲ ಮಂದಿ ಆಸಕ್ತಿ ತೋರಿದ್ದು, ಭಾರತೀಯ ಅಥವಾ ವಿದೇಶಿ ಸಂಸ್ಥೆಗೆ ಪ್ರಾಯೋಜಕತ್ವದ ಹಕ್ಕು ನೀಡಬೇಕೋ, ಬೇಡವೊ ಎಂಬುದನ್ನು ಆ.18ರಂದು ತೀರ್ಮಾನಿಸಲಾಗುವುದು ಎಂದು ಕೆಎಸ್‌ಸಿಎ ಮಾಜಿ ಕಾರ್ಯದರ್ಶಿಯೂ ಆಗಿರುವ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

* ಆರ್ಜಿ ಆಹ್ವಾನಿಸಿದ ಬಿಸಿಸಿಐ

ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕು ಪಡೆಯಲು ಆಸಕ್ತರಿಂದ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಪ್ರಾಯೋಜಕತ್ವದ ಹಕ್ಕಿನ ಅವಧಿ ಆಗಸ್ಟ್ 18 ರಿಂದ ಡಿಸೆಂಬರ್ 31ರವರೆಗೆ ಇರಲಿದ್ದು, ಕನಿಷ್ಠ 300 ಕೋಟಿ ರೂಪಾಯಿ ವಹಿವಾಟು ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಗಸ್ಟ್ 14 ಸಂಜೆ 4 ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net