12 ವರ್ಷಗಳ ಬಳಿಕ ತವರು ನೆಲದಲ್ಲಿ ಸರಣಿ ಸೋಲು; Team India ನಾಯಕ Rohit Sharma ಹೇಳಿದ್ದಿಷ್ಟು

Rohit Latham
Published on

ಪುಣೆ: ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ಭಾರತ (Team India) ಹಾಗೂ ನ್ಯೂಜಿಲೆಂಡ್​ (Newzealand) ನಡುವೆ ಜರುಗಿದ ಟೆಸ್ಟ್​ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯರು ಸೋಲು ಕಂಡಿದ್ದು, ಪ್ರವಾಸಿಗರ ದಿಟ್ಟ ಆಟಕ್ಕೆ ತಲೆ ಬಾಗಿದ್ದಾರೆ. 4331 ದಿನಗಳು ಅಂದರೆ 12 ವರ್ಷಗಳ ಬಳಿಕ ತವರು ನೆಲದಲ್ಲಿ ಭಾರತ ಟೆಸ್ಟ್​ ಸರಣಿ (Test Series) ಸೋತಿದ್ದು, ಈ ವಿಚಾರ ಭಾರೀ ಮುಖಭಂಗಕ್ಕೆ ಕಾರಣವಾಗಿದೆ. ಹಲವು ವರ್ಷಗಳ ಬಳಿಕ ಭಾರತದ ನೆಲದಲ್ಲಿ ಸರಣಿ ಗೆಲ್ಲುವ ಮೂಲಕ ನ್ಯೂಜಿಲೆಂಡ್​ ತಂಡವು ಐತಿಹಾಸಿಕ ದಾಖಲೆ ಬರೆದಿದ್ದು, ಸರಣಿ ಸೋಲಿನ ಕುರಿತು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ (Rohit Sharma) ಮಾತನಾಡಿದ್ದಾರೆ.

ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಈ ಕುರಿತು ಮಾತನಾಡಿರುವ ರೋಹಿತ್​ ಶರ್ಮ (Rohit Sharma), ನಾವು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದೇವೆ. ನ್ಯೂಜಿಲೆಂಡ್​ನವರು (NewZelanad) ನಮಗಿಂತ ಚೆನ್ನಾಗಿ ಆಡಿದರು. ಎದುರಾಳಿ ತಂಡದವರು ಹಾಕಿದ ಕೆಲವು ಸವಾಲುಗಳನ್ನು ಅರಿತುಕೊಂಡು ಎದುರಿಸುವಲ್ಲಿ ನಾವು ಎಡವಿದ್ದೇವೆ. ವಿಕೆಟ್​ ಹೇಗೆ ತೆಗೆದೆವೋ ಅದೇ ರೀತಿ ನಾವು ಬ್ಯಾಟಿಂಗ್​ ಮಾಡಬೇಕಿತ್ತು. ಆದರೆ, ನಾವು ವಿಫಲರಾದೆವು.

ಅವರು ಮೂರನೇ ದಿನದಾಟ ಆರಂಭಿಸಿದಾಗ 3 ವಿಕೆಟ್​ ನಷ್ಟಕ್ಕೆ 250 ರನ್​ ಕಳೆದುಕೊಂಡಿದ್ದರು. ಆ ನಂತರ ನಾವು ಅವರನ್ನು 259ಕ್ಕೆ ಆಲೌಟ್​ ಮಾಡಿದೆವು. ನಾವು ನಿರೀಕ್ಷಿಸಿದ ಮಟ್ಟದಲ್ಲಿ ಪಿಚ್​ ನಮಗೆ ಸಹಕರಿಸಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಸ್ವಲ್ಪ ಹತ್ತಿರವಾಗುತ್ತಿದ್ದರೆ ವಿಷಯಗಳು ಸ್ವಲ್ಪ ವಿಭಿನ್ನವಾಗಿರುತ್ತಿದ್ದವು. ನಾವು ವಾಂಖೆಡೆಯಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇವೆ ಮತ್ತು ಮೂರನೇ ಟೆಸ್ಟ್ ಅನ್ನು ಗೆಲ್ಲಲು ಪ್ರಯತ್ನಿಸುತ್ತೇವೆ. ಇದು ತಂಡದ ಸಾಮೂಹಿಕ ವೈಫಲ್ಯವಾಗಿದ್ದು, ಆವು ಬ್ಯಾಟರ್​ ಅಥವಾ ಬೌಲರ್​ಗಳನ್ನು ದೂಷಿಸುವ ಅಗತ್ಯವಿಲ್ಲ. ಉತ್ತಮ ಉದ್ದೇಶ, ವಿಧಾನ ಹಾಗೂ ಆಲೋಚನೆಗಳೊಂದಿಗೆ ನಾವು ಮುಂದಿನ  ಪಂದ್ಯವನ್ನು ಗೆಲ್ಲುತ್ತೇವೆ ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ (Rohit Sharma) ಪೋಸ್ಟ್ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಹೇಳಿದ್ದಾರೆ. 

Rohit Sharma

ಬ್ಯಾಟ್ಸ್​ಮನ್​ಗಳ ಪೆವಿಲಿಯನ್​ ಪೆರೇಡ್​ 

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ನ್ಯೂಜಿಲೆಂಡ್​ (NewZealand) ತಂಡವು ವಾಷಿಂಗ್ಟನ್​ ಸುಂದರ್​. ಆರ್​. ಅಶ್ವಿನ್​ ಆಫ್​ಸ್ಪಿನ್​​ ದಾಳಿಗೆ ನಲುಗಿ 259 ರನ್​ಗಳಿಗೆ ಆಲೌಟ್​ ಆಗಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್​ ಮಾಡಿದ ಟೀಮ್​ ಇಂಡಿಯಾ (Team India) 156 ರನ್‌ಗಳಿಗೆ ಆಲೌಟ್ ಆಗಿತ್ತು.  103 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ನ್ಯೂಜಿಲೆಂಡ್​ ತಂಡವು ನಾಯಕ ಟಾಮ್​ ಲಾಥಮ್​ (86 ರನ್​, 133 ಎಸೆತ, 10 ಬೌಂಡರಿ) ದಿಟ್ಟ ಬ್ಯಾಟಿಂಗ್​ ಫಲವಾಗಿ 255 ರನ್​ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 359 ರನ್​ಗಳ ಗುರಿ ನೀಡಿತು.

ಗುರಿ ಬೆನ್ನತ್ತಿದ್ದ ಭಾರತ ತಂಡವನ್ನು ಇನ್ನಿಲ್ಲದಂತೆ ಕಾಡಿದ ಕಿವೀಸ್​ ಬೌಲರ್​​ಗಳು (NewZealand) ಪೆವಿಲಿಯನ್​ ದಾರಿ ತೋರಿಸಿದರು. ಮೊದಲ ಇನ್ನಿಂಗ್ಸ್​ನಂತೆ ಎರಡನೇ ಇನ್ನಿಂಗ್ಸ್​ನಲ್ಲೂ ಬ್ಯಾಟ್ಸ್​ಮನ್​ಗಳು ಕೈಕೊಟ್ಟ ಪರಿಣಾಮ ಟೀಮ್​ ಇಂಡಿಯಾ ಸೋಲಿಗೆ ಕೊರಳೊಡ್ಡಬೇಕಾಯಿತು. ತಂಡದ ಪರ ರವೀಂದ್​ ಜಡೇಜಾ 42 ರನ್​ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ಸ್ಯಾಂಟ್ನರ್​ ಮಿಂಚು 

ನ್ಯೂಜಿಲೆಂಡ್ ಪರ ಎರಡನೇ ಇನ್ನಿಂಗ್ಸ್‌ನಲ್ಲೂ ಮಾರಕ ಬೌಲಿಂಗ್ ಪ್ರದರ್ಶಿಸಿದ ಮಿಚೆಲ್ ಸ್ಯಾಂಟ್ನರ್ ತಂಡದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡರು.  ಮೊದಲ ಇನ್ನಿಂಗ್ಸ್​ನಲ್ಲಿ ಪ್ರಮುಖ 7 ವಿಕೆಟ್ ಉರುಳಿಸಿದ್ದ ಸ್ಯಾಂಟ್ನರ್, ಎರಡನೇ ಇನ್ನಿಂಗ್ಸ್​ನಲ್ಲೂ 6 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಕಿವೀಸ್ ತಂಡ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಭಾರತದಲ್ಲಿ ಚೊಚ್ಚಲ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net