WCL 2025: ಪಾಕಿಸ್ತಾನ ವಿರುದ್ಧದ ಸೆಮಿಫೈನಲ್‌ ಪಂದ್ಯವನ್ನು ಬಹಿಷ್ಕರಿಸಿದ ಭಾರತ ಚಾಂಪಿಯನ್ಸ್​! Indian Champions

INDIA CHAMPIONS
Published on

Indian Champions: ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಭಾರತ ಚಾಂಪಿಯನ್ಸ್ ತಂಡದ ಆಟಗಾರರು ನಿರಾಕರಿಸಿದ್ದಾರೆ. ಈ ಮೂಲಕ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರೀಡಾ ಒಪ್ಪಂದಗಳ ವಿರುದ್ಧದ ದೇಶದ ನಿಲುವನ್ನು ಎತ್ತಿಹಿಡಿದಿದ್ದಾರೆ.

ಭಾರತ ತಂಡದ ಹಿರಿಯ ಆಟಗಾರರಾದ ಶಿಖರ್ ಧವನ್, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಸುರೇಶ್ ರೈನಾ ಸೇರಿದಂತೆ ಹಲವರು ಪಾಕಿಸ್ತಾನ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಆಡಲು ನಿರಾಕರಿಸಿದ್ದಾರೆ.

ಗುರುವಾರ(ಜುಲೈ 31) ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಎದುರಿಸಬೇಕಿತ್ತು. ಮೊಹಮ್ಮದ್ ಹಫೀಜ್ ನೇತೃತ್ವದ ತಂಡ ಲೀಗ್ ಹಂತದಲ್ಲಿ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವುಗಳೊಂದಿಗೆ ಅಗ್ರಸ್ಥಾನ ಗಳಿಸಿ, ನಾಕೌಟ್‌ಗೆ ಅರ್ಹತೆ ಪಡೆದುಕೊಂಡಿತ್ತು. ಭಾರತ ಗುಂಪು ಹಂತದಲ್ಲಿ 4ನೇ ಸ್ಥಾನಗಳಿಸಿತ್ತು. ಮಂಗಳವಾರ ನಡೆದ ವೆಸ್ಟ್ ಇಂಡೀಸ್ ಚಾಂಪಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 13.2 ಓವರ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಇದ್ದಕೂ ಮೊದಲು ಭಾರತ, ಲೀಗ್​ನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿ ಸೋತಿತ್ತು.

ಈ ಟೂರ್ನಿಯ ಮುಖ್ಯ ಪ್ರಯೋಜಕರಾದ ಈಸ್​ ಮೈಟ್ರಿಪ್​ ಕೂಡ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಪ್ರಾಯೋಜಕತ್ವವನ್ನು ವಹಿಸುವುದಿಲ್ಲ ಎಂದು ಹೇಳಿದೆ. ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಈಸ್​ ಮೈಟ್ರಿಪ್​ ಸಹ ಸ್ಥಾಪಕರಾದ ನಿಶಾಂತ್​ ಪಿಟ್ಟಿ, ಕ್ರಿಕೆಟ್​ ಹಾಗೂ ಭಯೋತ್ಪಾದನೆ ಒಂದಾಗಿ ಸಾಗಲು ಸಾಧ್ಯವಿಲ್ಲ. ನಾವು ಭಾರತೀಯರೊಂದಿಗೆ ನಿಲ್ಲುತ್ತೇವೆ. ಕೆಲವು ವಿಷಯಗಳು ಕ್ರೀಡೆಗಿಂತಲೂ ಮಿಗಿಲಾಗಿವೆ. ವ್ಯಾಪಾರಕ್ಕಿಂತ ದೇಶ ಮೊದಲು ಎಂದು ಹೇಳಿದ್ದಾರೆ.

ಪಾಕ್​ ವಿರುದ್ಧದ ಲೀಗ್ ಹಂತದ ಪಂದ್ಯವು ರದ್ದಾಗಿತ್ತು

ಲೀಗ್ ಹಂತದಲ್ಲಿ ಭಾರತ ಚಾಂಪಿಯನ್ಸ್ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ, ಭಾರತೀಯ ಆಟಗಾರರು ಪಂದ್ಯವನ್ನು ಆಡದಿರಲು ನಿರ್ಧರಿಸಿದ್ದರು. ಹೀಗಾಗಿ ಅಂಕಗಳನ್ನು ಎರಡೂ ತಂಡಗಳ ನಡುವೆ ಹಂಚಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net