

ನವದೆಹಲಿ : ಇಂದು ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಅವರ 40ನೇ ಜನ್ಮದಿನ. ಈ ವಿಶೇಷ ದಿನಕ್ಕೆ ಜಾಲತಾಣದಲ್ಲಿ ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಶುಭಾಶಯಗಳ ಹೊಳೆಯನ್ನೇ ಹರಿಸಿದ್ದಾರೆ. ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಕೂಡ ಧೋನಿಯವರ ಹುಟ್ಟಿದಹಬ್ಬವನ್ನು ತನ್ನದೇ ಆದ ರೀತಿಯಲ್ಲಿ ಆಚರಿಸಿದೆ.
ಧೋನಿ ನಾಯಕತ್ವದ ಪ್ರಮುಖ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಹಲವು ರೋಮಾಂಚಕ ಕ್ಷಣಗಳನ್ನು ಒಟ್ಟುಮಾಡಿ ಸುಮಾರು 5 ನಿಮಿಷಗಳ ವಿಡಿಯೋ ಒಂದನ್ನು ಐಸಿಸಿ ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದೆ. ಧೋನಿಯನ್ನು 'ಕ್ಯಾಪ್ಟನ್ ಕೂಲ್' ಎಂದು ಕರೆಯುವುದಕ್ಕೆ ಕಾರಣವಿದೆ ಎಂದಿರುವ ಐಸಿಸಿ, ಅವರ ಹುಟ್ಟಿದಹಬ್ಬದ ದಿನ ಅವರು ಬಿಸಿಸಿಐ ಸ್ಕಿಪ್ಪರ್ ಆಗಿ ತೋರಿದ ಚತುರತೆಗಳನ್ನು ಮೆಲುಕು ಹಾಕಲು ಅವಕಾಶ ಒದಗಿಸಿದೆ.
2007 ಟಿ20 ವರ್ಲ್ಡ್ ಕಪ್ ಗೆದ್ದಾಗಿನಿಂದ ಹಿಡಿದು 2011 ರಲ್ಲಿ ವರ್ಲ್ಡ್ ಕಪ್ ಗೆದ್ದವರೆಗೆ ನಾಯಕನಾಗಿ ಧೋನಿ ತೆಗೆದುಕೊಂಡ ಅತ್ಯುತ್ತಮ ನಿರ್ಣಯಗಳ, ಮತ್ತು ಅವರ ಒಟ್ಟಾರೆ ಉತ್ಕೃಷ್ಟ ಆಟಗಾರಿಕೆಯ ತುಣುಕುಗಳನ್ನು ಕ್ರೋಢೀಕರಿಸಿರುವ ಈ ವಿಡಿಯೋ, ಕ್ರಿಕೆಟ್ಪ್ರಿಯರಿಗೆ, ಅದರಲ್ಲೂ ಧೋನಿ ಅಭಿಮಾನಿಗಳಿಗೆ, ದೊಡ್ಡ ಉಡುಗೊರೆಯಾಗಿದೆ. (ಏಜೆನ್ಸೀಸ್)